ಹಾರ್ಮುಜ್ ಜಲಸಂಧಿ ಬಂದ್ ಆದ್ರೆ ನಮಗೇನೂ ತೊಂದ್ರೆ ಇಲ್ಲ!. ತೈಲ ಭದ್ರತೆ ಬಗ್ಗೆ ಕೇಂದ್ರ ಸಚಿವ ಪುರಿ ಸ್ಪಷ್ಟನೆ | Hardeep Singh Puri

Hardeep Singh Puri  | ಕೇಂದ್ರ ಸಚಿವ  ಹರ್ದೀಪ್ ಸಿಂಗ್ ಪುರಿ
Hardeep Singh Puri | ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
Published on
ನವದೆಹಲಿ: ದೇಶಾದ್ಯಂತ ಇಂಧನ ಬಿಕ್ಕಟ್ಟು ಎದುರಾಗಲಿದೆ ಎಂಬ ಆತಂಕದ ನಡುವೆಯೇ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಗುರುವಾರ ಮಹತ್ವದ ಸ್ಪಷ್ಟನೆ ನೀಡಿದ್ದು, ಭಾರತದಲ್ಲಿ ಕಚ್ಚಾ ತೈಲ ಮತ್ತು ಅನಿಲದ ಕೊರತೆಯಿಲ್ಲ, ದೇಶದ ಇಂಧನ ಭದ್ರತೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆ ಇಳಿಕೆ

ಜಾಗತಿಕ ಉದ್ವಿಗ್ನತೆ, ವಿಶೇಷವಾಗಿ ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿ ಮುಚ್ಚುವ ಭೀತಿಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಒಂದು ಕಾಲದಲ್ಲಿ ಭಾರತದ ಶೇ. 45 ರಷ್ಟು ತೈಲ ಆಮದು ಈ ಮಾರ್ಗದ ಮೂಲಕವೇ ಆಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪ್ರಧಾನಿ ಮೋದಿಯವರ ರಾಜತಾಂತ್ರಿಕ ಚತುರತೆಯಿಂದಾಗಿ ನಾವು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಪ್ರಸ್ತುತ ಹಾರ್ಮುಜ್ ಅಲ್ಲದ ಮೂಲಗಳಿಂದ ತೈಲ ಆಮದು ಶೇ. 55 ರಿಂದ ಶೇ. 70 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

40 ದೇಶಗಳಿಂದ ತೈಲ ಆಮದು

ಭಾರತವು ತನ್ನ ತೈಲ ಖರೀದಿ ಮೂಲಗಳನ್ನು ವ್ಯಾಪಕವಾಗಿ ವಿಸ್ತರಿಸಿದೆ ಎಂದು ಪುರಿ ಮಾಹಿತಿ ನೀಡಿದರು. 2006-07ರಲ್ಲಿ ಕೇವಲ 27 ದೇಶಗಳಿಂದ ತೈಲ ತರುತ್ತಿದ್ದ ಭಾರತ, ಈಗ 40 ವಿವಿಧ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಯುನೈಟೆಡ್ ಸ್ಟೇಟ್ಸ್, ನಾರ್ವೆ, ಕೆನಡಾ, ಅಲ್ಜೀರಿಯಾ ಮತ್ತು ರಷ್ಯಾದಿಂದ ಸಕ್ರಿಯವಾಗಿ ಕಚ್ಚಾ ತೈಲ ಮತ್ತು ಅನಿಲವನ್ನು ಖರೀದಿಸಲಾಗುತ್ತಿದೆ. ದೇಶದ ತೈಲ ಸಂಸ್ಕರಣಾಗಾರಗಳು ಶೇ. 100 ಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಎಲ್‌ಪಿಜಿ ಉತ್ಪಾದನೆಯಲ್ಲಿ ಶೇ. 28 ರಷ್ಟು ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯ ವರದಿಗಳನ್ನು ತಳ್ಳಿಹಾಕಿದ ಸಚಿವರು, ಕಳೆದ ಐದೇ ದಿನಗಳಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ಶೇ. 28 ರಷ್ಟು ಹೆಚ್ಚಿಸಲಾಗಿದೆ. ದೇಶದ 33 ಕೋಟಿ ಕುಟುಂಬಗಳ ಅಡುಗೆಮನೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಮೋದಿ ಸರ್ಕಾರದ ಆದ್ಯತೆ. ಬಡವರು ಮತ್ತು ಹಿಂದುಳಿದ ವರ್ಗದವರಿಗೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಭರವಸೆ ನೀಡಿದರು.

ವದಂತಿಗಳಿಗೆ ಕಿವಿಗೊಡಬೇಡಿ

ಆಧುನಿಕ ಇಂಧನ ಇತಿಹಾಸದಲ್ಲೇ ಜಗತ್ತು ಇಂತಹ ಸವಾಲಿನ ಕ್ಷಣವನ್ನು ನೋಡಿಲ್ಲ. ಆದರೂ ಭಾರತವು ತನ್ನ ಪೂರೈಕೆ ವ್ಯವಸ್ಥೆಯನ್ನು ಗಟ್ಟಿಗೊಳಿಸಿದೆ. ಸಾರ್ವಜನಿಕರು ಸುಳ್ಳು ಸುದ್ದಿಯನ್ನು ನಂಬಬಾರದು ಮತ್ತು ವದಂತಿಗಳನ್ನು ಹರಡಬಾರದು ಎಂದು ಸಚಿವರು ಮನವಿ ಮಾಡಿದರು. ಎಲ್‌ಎನ್‌ಜಿ ಸರಕುಗಳು ಪ್ರತಿದಿನವೂ ಭಾರತದ ಬಂದರುಗಳಿಗೆ ತಲುಪುತ್ತಿದ್ದು, ಕೈಗಾರಿಕೆ ಮತ್ತು ವಿದ್ಯುತ್ ಉತ್ಪಾದನಾ ವಲಯಕ್ಕೂ ಯಾವುದೇ ಅಡೆತಡೆಯಿಲ್ಲ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net