ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ವಿಶ್ವದ ನಂ.1 ಪಟ್ಟಕ್ಕೇರಿದ ನ್ಯೂಜಿಲೆಂಡ್‌ನ ಡೆರಿಲ್ ಮಿಚೆಲ್ | Daryl Mitchell

ಡ್ಯಾರಿಲ್ ಮಿಚೆಲ್ ಮತ್ತು ವಿರಾಟ್ ಕೊಹ್ಲಿ
ಡ್ಯಾರಿಲ್ ಮಿಚೆಲ್ ಮತ್ತು ವಿರಾಟ್ ಕೊಹ್ಲಿ
Published on
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬುಧವಾರ (ಜ.21) ಪ್ರಕಟಿಸಿದ ಇತ್ತೀಚಿನ ಏಕದಿನ ಶ್ರೇಯಾಂಕದಲ್ಲಿ ನ್ಯೂಜಿಲೆಂಡ್‌ನ ಆಕ್ರಮಣಕಾರಿ ಬ್ಯಾಟರ್ ಡೆರಿಲ್ ಮಿಚೆಲ್(Daryl Mitchell), ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿಯನ್ನು ಸಿಂಹಾಸನದಿಂದ ಕೆಳಗಿಳಿಸಿ ವಿಶ್ವದ ನಂಬರ್ 1 ಏಕದಿನ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಕೇವಲ ಅಗ್ರಸ್ಥಾನಕ್ಕೇರುವುದು ಮಾತ್ರವಲ್ಲದೆ, ಮಿಚೆಲ್ ಅವರು ಕೊಹ್ಲಿಗಿಂತ ಬರೋಬ್ಬರಿ 50 ಪಾಯಿಂಟ್‌ಗಳ ಬೃಹತ್ ಮುನ್ನಡೆ ಸಾಧಿಸಿರುವುದು ಕ್ರಿಕೆಟ್ ಲೋಕದಲ್ಲಿ ಅಚ್ಚರಿ ಮೂಡಿಸಿದೆ.

ಭಾರತದ ನೆಲದಲ್ಲಿ ಮಿಚೆಲ್ ಅಬ್ಬರ

ಇತ್ತೀಚೆಗೆ ಭಾರತದ ವಿರುದ್ಧ ನಡೆದ ಹೈ-ವೋಲ್ಟೇಜ್ ಏಕದಿನ ಸರಣಿಯಲ್ಲಿ ಮಿಚೆಲ್ ತೋರಿದ ಅಸಾಧಾರಣ ಪ್ರದರ್ಶನವೇ ಈ ಸಾಧನೆಗೆ ಕಾರಣವಾಗಿದೆ. ಅಲ್ಲದೆ, ಸರಣಿಯ ಎರಡನೇ ಮತ್ತು ಮೂರನೇ ಪಂದ್ಯಗಳಲ್ಲಿ ಮಿಚೆಲ್ ಸತತ ಶತಕಗಳನ್ನು ಸಿಡಿಸಿ ಭಾರತೀಯ ಬೌಲರ್‌ಗಳನ್ನು ಬೆಚ್ಚಿಬೀಳಿಸಿದ್ದರು.
ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅಜೇಯ 131 ರನ್ ಮತ್ತು ಇಂದೋರ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ 137 ರನ್ ಚಚ್ಚಿದ ಮಿಚೆಲ್, ನ್ಯೂಜಿಲೆಂಡ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಅಮೋಘ ಪ್ರದರ್ಶನದ ಫಲವಾಗಿ ಅವರ ರೇಟಿಂಗ್ ಪಾಯಿಂಟ್ಸ್ ವೃತ್ತಿಜೀವನದ ಶ್ರೇಷ್ಠ 845ಕ್ಕೆ ಜಿಗಿದಿದೆ.

ಕೊಹ್ಲಿ ಹೋರಾಟಕ್ಕೆ ಸಿಗದ ಫಲ

ಟೀಮ್ ಇಂಡಿಯಾ ಅಭಿಮಾನಿಗಳಿಗೆ ಇದು ತುಸು ನಿರಾಸೆಯ ಸುದ್ದಿಯಾಗಿದೆ. ಸರಣಿಯ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡ ಅದ್ಭುತವಾದ ಶತಕ (124 ರನ್) ಸಿಡಿಸಿ ತೀವ್ರ ಹೋರಾಟ ನಡೆಸಿದ್ದರು. ಆದರೂ, ಮಿಚೆಲ್ ಗಳಿಸಿದ ಬೃಹತ್ ಮೊತ್ತದ ರನ್‌ಗಳು ಕೊಹ್ಲಿಯ ಸಾಧನೆಯನ್ನು ಹಿಂದಿಕ್ಕುವಂತೆ ಮಾಡಿದವು. ಸದ್ಯ ಕೊಹ್ಲಿ 795 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಶ್ರೇಯಾಂಕ ಪಟ್ಟಿಯ ಮುಖ್ಯಾಂಶಗಳು:

1. ಡೆರಿಲ್ ಮಿಚೆಲ್ (ನ್ಯೂಜಿಲೆಂಡ್) - 845 ರೇಟಿಂಗ್ ಪಾಯಿಂಟ್ಸ್
2. ವಿರಾಟ್ ಕೊಹ್ಲಿ (ಭಾರತ) 795 - ರೇಟಿಂಗ್ ಪಾಯಿಂಟ್ಸ್
3. ಇಬ್ರಾಹಿಂ ಜದ್ರಾನ್ (ಅಫ್ಘಾನಿಸ್ತಾನ) - 764 ರೇಟಿಂಗ್ ಪಾಯಿಂಟ್ಸ್
4. ರೋಹಿತ್ ಶರ್ಮಾ (ಭಾರತ) 757 - ರೇಟಿಂಗ್ ಪಾಯಿಂಟ್ಸ್,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net