ನಂದಿಗ್ರಾಮದಲ್ಲಿ ಮಮತಾಗೆ ಭಾರೀ ಆಘಾತ: ಸ್ಪರ್ಧೆಯಿಂದ ಹಿಂದೆ ಸರಿದ ಟಿಎಂಸಿ ಅಭ್ಯರ್ಥಿ ಸಂಚಿತಾ ಪ್ರಧಾನ್! | Nandigram Bypoll

Nandigram Bypoll | ಸ್ಪರ್ಧೆಯಿಂದ ಹಿಂದೆ ಸರಿದ ಟಿಎಂಸಿ ಅಭ್ಯರ್ಥಿ ಸಂಚಿತಾ ಪ್ರಧಾನ್!
Nandigram Bypoll | ಸ್ಪರ್ಧೆಯಿಂದ ಹಿಂದೆ ಸರಿದ ಟಿಎಂಸಿ ಅಭ್ಯರ್ಥಿ ಸಂಚಿತಾ ಪ್ರಧಾನ್!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣೆಯ ಬಳಿಕ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಹೆಣೆದ ತಂತ್ರಗಳೆಲ್ಲವೂ ತಿರುಮಂತ್ರವಾಗುತ್ತಿವೆ. ಪ್ರಾರಂಭದಲ್ಲಿ ಶಾಸಕರು ಹಾಗೂ ಸಂಸದರ ಬಂಡಾಯಕ್ಕೆ ನಲುಗಿದ್ದ ತೃಣಮೂಲ ಕಾಂಗ್ರೆಸ್, ಇದೀಗ ಪಕ್ಷದ ಅಧಿಕೃತ ಚಿಹ್ನೆಯನ್ನು ಕಳೆದುಕೊಂಡಿರುವುದಷ್ಟೇ ಅಲ್ಲದೆ, ನಂದಿಗ್ರಾಮ ಉಪಚುನಾವಣೆಗೆ (Nandigram Bypoll) ಸ್ಪರ್ಧಿಸುತ್ತಿದ್ದ ಅಭ್ಯರ್ಥಿಯನ್ನೂ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ನಂದಿಗ್ರಾಮ ಉಪಚುನಾವಣೆಗೆ ದೀದಿ ಬಣದ ಅಭ್ಯರ್ಥಿಯಾಗಿದ್ದ ಸಂಚಿತಾ ಪ್ರಧಾನ್ ಡೇ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ನಬನ್ನಾದಲ್ಲಿರುವ ರಾಜ್ಯ ಸಚಿವಾಲಯದಲ್ಲಿ ಭೇಟಿಯಾದ ಕೆಲವೇ ಕ್ಷಣಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಅಕ್ಟೋಬರ್ 6 ರಂದು ನಡೆಯಲಿರುವ ನಂದಿಗ್ರಾಮ ಉಪಚುನಾವಣೆಗೆ ಸಂಚಿತಾ ಪ್ರಧಾನ್ ಅವರನ್ನು ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್ ತನ್ನ ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೆ, ಉಪಚುನಾವಣೆಯ ಸ್ಪರ್ಧೆಯಿಂದ ಹೊರಬರುವ ಅವರ ನಿರ್ಧಾರವು ಮಮತಾ ಬಣಕ್ಕೆ ಚೇತರಿಸಿಕೊಳ್ಳಲಾಗದಂತಹ ಹೊಡೆತ ನೀಡಿದೆ. ನಾಮಪತ್ರ ಸಲ್ಲಿಕೆಗೆ ಸೆಪ್ಟೆಂಬರ್ 16 ಕೊನೆಯ ದಿನಾಂಕವಾಗಿದ್ದರಿಂದ ಪಕ್ಷಕ್ಕೆ ಈಗ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ.
ಉಪಚುನಾವಣೆಯ ಕಣದಿಂದ ಹಿಂದೆ ಸರಿದಿರುವ ವಿಷಯವಾಗಿ ಡೇ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ, ಆದರೆ ಅವರ ಈ ನಡೆ ನಂದಿಗ್ರಾಮದಲ್ಲಿ ಆಡಳಿತಾರೂಢ ಬಿಜೆಪಿ ಅನುಕೂಲವಾಗಲಿದ್ದು, ಇದನ್ನು ಸಿಎಂ ಅಧಿಕಾರಿ ಅವರ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಡೇ ಅವರ ಈ ಅಚ್ಚರಿಯ ನಿರ್ಧಾರದ ಹೊರತಾಗಿಯೂ, ನಂದಿಗ್ರಾಮದ ಸ್ಪರ್ಧೆಯು ಬಹುಮುಖಿ ಕಣವಾಗಿಯೇ ಉಳಿದಿದೆ, ಏಕೆಂದರೆ ರಿತಬ್ರತ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣವು ಮೊಹಮ್ಮದ್ ಎತೆಶಮುಲ್ ಹಕ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿದ್ದರೆ, ಸಿಪಿಐ ಶಾಂತಿ ಗೋಪಾಲ್ ಗಿರಿಗೆ ಟಿಕೆಟ್​ ನೀಡಿದೆ. ಅದೇ ರೀತಿ ಕಾಂಗ್ರೆಸ್ ಮಿಲನ್ ಪ್ರಧಾನ್ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿದ್ದರೆ, ಹಸಿರಾಣಿ ರಥ್ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ.

ನಂದಿಗ್ರಾಮ ಉಪಚುನಾವಣೆಗೆ ಕಾರಣವೇನು?

ಸಿಎಂ ಸುವೇಂದು ಅಧಿಕಾರಿ ಅವರು ಇತ್ತೀಚಿನ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಮತ್ತು ಭವಾನಿಪುರ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಅವರು ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದ್ದು, ಭವಾನಿಪುರ ಕ್ಷೇತ್ರವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದೆ. ಕಳೆದ ವಾರ ಚುನಾವಣಾ ಆಯೋಗವು ಉಪಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅಕ್ಟೋಬರ್ 6 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9 ರಂದು ಫಲಿತಾಂಶ ಹೊರಬೀಳಲಿದೆ.
ನಂದಿಗ್ರಾಮದೊಂದಿಗೆ ರೇಜಿನಗರದಲ್ಲೂ ಉಪಚುನಾವಣೆ ನಡೆಯಲಿದೆ. ಆಮ್ ಜನತಾ ಉನ್ನಯನ್ ಪಾರ್ಟಿ ಸಂಸ್ಥಾಪಕ ಹುಮಾಯೂನ್ ಕಬೀರ್ ಕೂಡ ರೇಜಿನಗರ ಮತ್ತು ನೌಡಾ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಅವರು ನೌಡಾ ಕ್ಷೇತ್ರವನ್ನು ಕಾಯ್ದುಕೊಂಡ ನಂತರ ರೇಜಿನಗರಕ್ಕೆ ಉಪಚುನಾವಣೆ ಘೋಷಿಸಲಾಗಿದೆ.
ರೇಜಿನಗರದಲ್ಲೂ ಬಹುಕೋನದ ಸ್ಪರ್ಧೆ ಏರ್ಪಡಲಿದ್ದು, ಎಜೆ ಯುಪಿ ಮತ್ತು ಬಿಜೆಪಿ ಕ್ರಮವಾಗಿ ಗೋಲಾಂ ನಬಿ ಆಜಾದ್ ಮತ್ತು ಸಖಾರಾವ್ ಸರ್ಕಾರ್ ಅವರನ್ನು ತಮ್ಮ ಅಭ್ಯರ್ಥಿಗಳನ್ನಾಗಿ ಹೆಸರಿಸಿವೆ. ಮಮತಾ ಅವರ ಟಿಎಂಸಿ ರಬಿಯುಲ್ ಆಲಂ ಚೌಧರಿ ಅವರನ್ನು ಕಣಕ್ಕಿಳಿಸಿದ್ದರೆ, ರಿತಬ್ರತ ಅವರ ಬಣವು ಸೈಫುಜ್ಜಮಾನ್ ಶೇಖ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಕಾಂಗ್ರೆಸ್ ಮೊಹಮ್ಮದ್ ಅಬ್ದುಲ್ಲಾಹಿಲ್ ಕಾಫಿ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿದ್ದರೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಿಂದ ಮೊಹಮ್ಮದ್ ಸಯೀದ್ ಸ್ಪರ್ಧಿಸುತ್ತಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net