90 ಲಕ್ಷ ಮತದಾರರ ಹೆಸರು ಡಿಲೀಟ್! ಬಂಗಾಳದ ರಣಕಳದಲ್ಲಿ ಮಮತಾ ಗುಡುಗು: ಹಾವಿಗಿರುವ ವಿಶ್ವಾಸ ಬಿಜೆಪಿಗೆ ಇಲ್ಲ ಅಂದಿದ್ದೇಕೆ ದೀದಿ? Mamata Banerjee

90 ಲಕ್ಷ ಮತದಾರರ ಹೆಸರು ಡಿಲೀಟ್! ಬಂಗಾಳದ ರಣಕಳದಲ್ಲಿ ಮಮತಾ ಗುಡುಗು: ಹಾವಿಗಿರುವ ವಿಶ್ವಾಸ ಬಿಜೆಪಿಗೆ ಇಲ್ಲ ಅಂದಿದ್ದೇಕೆ ದೀದಿ?
90 ಲಕ್ಷ ಮತದಾರರ ಹೆಸರು ಡಿಲೀಟ್! ಬಂಗಾಳದ ರಣಕಳದಲ್ಲಿ ಮಮತಾ ಗುಡುಗು: ಹಾವಿಗಿರುವ ವಿಶ್ವಾಸ ಬಿಜೆಪಿಗೆ ಇಲ್ಲ ಅಂದಿದ್ದೇಕೆ ದೀದಿ?
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (TMC) ಅಧಿನಾಯಕಿ ಮಮತಾ ಬ್ಯಾನರ್ಜಿ(Mamata Banerjee) ಬಿಜೆಪಿ ವಿರುದ್ಧ ವಾಗ್ದಾಳಿಯ ಮಿತಿಯನ್ನೇ ಮೀರಿದ್ದಾರೆ. ವಿಷಕಾರಿ ಹಾವನ್ನಾದರೂ ನಂಬಬಹುದು, ಆದರೆ ಬಿಜೆಪಿಯನ್ನು ಮಾತ್ರ ಎಂದಿಗೂ ನಂಬಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ.

ಅಸ್ಸಾಂ ಚುನಾವಣೆಯಲ್ಲಿ ಹೊರಗಿನವರ 'ರೈಲು'?

ಉತ್ತರ 24 ಪರಗಣ ಜಿಲ್ಲೆಯ ತೆಂತುಲಿಯಾದಲ್ಲಿ ನಡೆದ ಚುನಾವಣಾ ಱಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ, ಅಸ್ಸಾಂ ವಿಧಾನಸಭೆ ಚುನಾವಣೆಯ ಕುರಿತು ಗಂಭೀರ ಆರೋಪಗಳನ್ನು ಮಾಡಿದರು. ಅಸ್ಸಾಂನ ಜನತೆ ತಮಗೆ ವೋಟ್ ಹಾಕುವುದಿಲ್ಲ ಎಂಬ ಭಯ ಬಿಜೆಪಿಗೆ ಶುರುವಾಗಿದೆ. ಹೀಗಾಗಿಯೇ ಉತ್ತರ ಪ್ರದೇಶದಿಂದ ಸುಮಾರು 50,000 ಜನರನ್ನು ತುಂಬಿದ್ದ ವಿಶೇಷ ರೈಲನ್ನು ಅಸ್ಸಾಂಗೆ ಕಳಿಸಲಾಗಿದೆ. ರಾಜ್ಯದ ಹೊರಗಿನವರನ್ನು ಕರೆತಂದು ಚುನಾವಣೆ ಗೆಲ್ಲಲು ಬಿಜೆಪಿ ಹವಣಿಸುತ್ತಿದೆ ಎಂದು ದೂರಿದ್ದಾರೆ.
ಅಸ್ಸಾಂನ 126 ಕ್ಷೇತ್ರಗಳಿಗೆ ಇತ್ತೀಚೆಗಷ್ಟೇ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಅಲ್ಲಿನ ದಾಖಲೆ ಮತದಾನದ ಬೆನ್ನಲ್ಲೇ ಮಮತಾ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಸಂಸ್ಥೆಗಳೆಲ್ಲವೂ ಬಿಜೆಪಿಯ ಕೈಗೊಂಬೆ"

ಕೇಂದ್ರ ಸರ್ಕಾರದ ವಿರುದ್ಧ ವೀಷ ಕಾರಿದ ದೀದಿ, ದೇಶದ ಯಾವುದೇ ತನಿಖಾ ಸಂಸ್ಥೆಗಳು ಈಗ ನಿಷ್ಪಕ್ಷಪಾತವಾಗಿ ಉಳಿದಿಲ್ಲ ಎಂದು ಕಿಡಿಕಾರಿದರು. ಸಿಬಿಐ, ಇಡಿ ಇರಲಿ ಅಥವಾ ಚುನಾವಣಾ ಆಯೋಗವೇ ಇರಲಿ, ಬಿಜೆಪಿ ಎಲ್ಲವನ್ನೂ ಹಣದ ಬಲದಿಂದ ಖರೀದಿಸಿದೆ. ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಬೆನ್ನಲ್ಲೇ ಬಂಗಾಳದ ಹಲವಾರು ಪೊಲೀಸ್ ಮತ್ತು ಆಡಳಿತಾಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಬಿಜೆಪಿಯ ಸಂಚಿನ ಭಾಗವಾಗಿದೆ ಎಂದು  ಗಂಭೀರವಾಗಿ ಆರೋಪಿಸಿದ್ದಾರೆ.

ಮತದಾರರ ಪಟ್ಟಿ ಮತ್ತು ಎನ್‌ಆರ್‌ಸಿ ಭೀತಿ

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವ ಕುರಿತು ಮಾತನಾಡಿದ ಮಮತಾ ಬ್ಯಾನರ್ಜಿ, ಬಂಗಾಳದಲ್ಲಿ ಸುಮಾರು 90 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ವರದಿಗಳ ಪ್ರಕಾರ, ಇದರಲ್ಲಿ 60 ಲಕ್ಷ ಹಿಂದೂಗಳು ಮತ್ತು 30 ಲಕ್ಷ ಮುಸ್ಲಿಮರಿದ್ದಾರೆ. ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಗೆ ತಂದಾಗಲೂ 19 ಲಕ್ಷ ಜನರನ್ನು ಪಟ್ಟಿಯಿಂದ ಹೊರಹಾಕಲಾಗಿತ್ತು, ಅದರಲ್ಲಿ 13 ಲಕ್ಷ ಹಿಂದೂಗಳೇ ಇದ್ದರು. ಬಿಜೆಪಿ ಯಾರ ಪರವೂ ಅಲ್ಲ ಎಂದು ಜನರನ್ನು ಎಚ್ಚರಿಸಿದ್ದಾರೆ.

ಬಂಗಾಳಕ್ಕೂ 'ಔಟ್‌ಸೈಡರ್' ಬೆದರಿಕೆ

ಬಿಜೆಪಿಯು ಬಂಗಾಳದಲ್ಲೂ ಹೊರಗಿನವರನ್ನು, ಹಣ ಮತ್ತು ಮಾದಕ ದ್ರವ್ಯಗಳನ್ನು ತಂದು ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದೆ ಎಂದು ಮಮತಾ ಆತಂಕ ವ್ಯಕ್ತಪಡಿಸಿದರು. ಅವರು ಏನೇ ಮಾಡಿದರೂ ನಮ್ಮ ಕಾರ್ಯಕರ್ತರು ಎದೆಯೊಡ್ಡಿ ಹೋರಾಡಲಿದ್ದಾರೆ. ಬಂಗಾಳದ ಮಣ್ಣಿನ ಮಕ್ಕಳನ್ನು ಸೋಲಿಸಲು ಇವರಿಂದ ಸಾಧ್ಯವಿಲ್ಲ ಎಂದು ದೀದಿ ಗುಡುಗಿದ್ದಾರೆ.
ಒಟ್ಟಾರೆಯಾಗಿ, ಅಸ್ಸಾಂ ಮತ್ತು ಬಂಗಾಳದ ಚುನಾವಣೆಗಳು ಈಗ ಒಳಗಿನವರು Vs ಹೊರಗಿನವರು ಎಂಬ ಸಂಘರ್ಷಕ್ಕೆ ತಿರುಗಿದ್ದು, ಮಮತಾ ಬ್ಯಾನರ್ಜಿ ಅವರ ಈ ಕಟು ಟೀಕೆಗಳು ಬಿಜೆಪಿಯನ್ನು ಕೆರಳಿಸಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net