ನ್ಯಾಯಕ್ಕಾಗಿ ನಿಂತ ವಿದ್ಯಾರ್ಥಿಗಳಿಗೆ 67,000 ರೂ. ಮೌಲ್ಯದ ಪಿಜ್ಜಾ ಆರ್ಡರ್: ನಾಗಾಲ್ಯಾಂಡ್ ಯುವಕನ ಔದಾರ್ಯಕ್ಕೆ ಇಡೀ ದೇಶವೇ ಫಿದಾ! NEET protest Jantar Mantar

NEET protest Jantar Mantar ಸಾಂದರ್ಭಿಕ ಚಿತ್ರ
NEET protest Jantar Mantar ಸಾಂದರ್ಭಿಕ ಚಿತ್ರ
Published on
ನವದೆಹಲಿ: ನೀಟ್ ಪರೀಕ್ಷೆ ಅಕ್ರಮವನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ (NEET protest Jantar Mantar) ನಡೆಸುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ನಾಗಾಲ್ಯಾಂಡ್  ಮೂಲದ ವ್ಯಕ್ತಿಯೊಬ್ಬರು ಬೃಹತ್​ ಪ್ರಮಾಣದ ಆಹಾರವನ್ನು ಆನ್​ಲೈನ್​ ಮೂಲಕ ಕಳುಹಿಸಿ ದೇಶದ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ @adiespoems ಎಂಬ ಹೆಸರಿನಿಂದ ಖಾತೆ ಹೊಂದಿರುವ ಯುವಕ, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ತನಗೆ ನೇರವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬ ನೋವಿನಲ್ಲಿದ್ದರು. ಹೀಗಾಗಿ, ಜಂತರ್ ಮಂತರ್‌ನಲ್ಲಿ ಧರಣಿ ನಿರತರಾಗಿರುವ ವಿದ್ಯಾರ್ಥಿಗಳ ಹಸಿವು ನೀಗಿಸುವ ಸಲುವಾಗಿ ನಾಗಾಲ್ಯಾಂಡ್​ನಲ್ಲಿ ಕುಳಿತು ಜೊಮಾಟೊ ಆಪ್​ ಮೂಲಕ 150 ಪಿಜ್ಜಾ ಆರ್ಡರ್​ ಮಾಡಿದ್ದಾರೆ.
ಜುಲೈ 22ರಂದು ಸಂಜೆ ಸುಮಾರು 4:30ಕ್ಕೆ 150 ಡೊಮಿನೋಸ್ 'ಫಾರ್ಮ್‌ಹೌಸ್ ಚೀಸ್ ಬರ್ಸ್ಟ್' ಪಿಜ್ಜಾಗಳನ್ನು ದೆಹಲಿಯ ಪ್ರತಿಭಟನಾ ಸ್ಥಳಕ್ಕೇ ತಲುಪಿಸಲು ಆರ್ಡರ್ ಮಾಡಲಾಗಿತ್ತು. ಮೂಲ ಪಿಜ್ಜಾಗಳ ಬೆಲೆ 64,650 ಆಗಿದ್ದರೆ, ಜಿಎಸ್‌ಟಿ ಹಾಗೂ ಡೆಲಿವರಿ ಶುಲ್ಕಗಳು ಸೇರಿ ಒಟ್ಟು ಬಿಲ್ ಮೊತ್ತ 67,734 ಆಗಿತ್ತು ಎಂಬುದನ್ನು ಪೋಸ್ಟ್​ ಮೂಲಕ ಹಂಚಿಕೊಂಡಿದ್ದಾರೆ. 
ಈ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಭಾವುಕ ಸಾಲುಗಳನ್ನು ಹಂಚಿಕೊಂಡ ಯುವಕ, ನನ್ನ ದೇಶದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಮತ್ತು ನ್ಯಾಯಯುತ ಶಿಕ್ಷಣ ವ್ಯವಸ್ಥೆಗಾಗಿ ದೂರದ ಊರಿನಿಂದ ಬಂದು ದೆಹಲಿಯಲ್ಲಿ ಹೋರಾಡುತ್ತಿದ್ದಾರೆ. ಅವರು ಅಲ್ಲಿ ಹಸಿವಿನಿಂದ ಕಷ್ಟಪಡುತ್ತಿರುವಾಗ ನಾನಿಲ್ಲಿ ಸಮಾಧಾನದಿಂದ ಊಟ ಮಾಡಲು ಮನಸ್ಸಾಗಲಿಲ್ಲ. ಅವರ ಜೊತೆ ನಿಲ್ಲಲು ನನಗಾಗಲಿಲ್ಲ, ಹೀಗಾಗಿ ನನ್ನ ಕೈಲಾದ ಈ ಸಣ್ಣ ನೆರವನ್ನು ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಆಹಾರ ಪೂರೈಸಲು ಬಂದ ಡೆಲಿವರಿ ಎಕ್ಸಿಕ್ಯೂಟಿವ್ ಯುವಕನಿಗೆ ಕರೆ ಮಾಡಿ ಈ ಆರ್ಡರ್ ಅನ್ನು ಯಾರಿಗೆ ತಲುಪಿಸಬೇಕು ಎಂದು ಕೇಳಿದಾಗ ಆ ಯುವಕ ಅಲ್ಲಿ ಹಸಿವಿನಿಂದ ಯಾರು ಇದ್ದಾರೋ ಅವರಿಗೆ ನೀಡಿ ಎಂದು ಸೂಚನೆ ನೀಡಿದರು. ಆದಾಗ್ಯೂ, ಈ ಮಾತನ್ನು ಕೇಳಿದ ಡೆಲಿವರಿ ಬಾಯ್, ನೀವು ಆ ವಿದ್ಯಾರ್ಥಿಗಳಿಗೆ ದೇವರಂತಾಗಿದ್ದೀರಿ! ಎಂದು ಪ್ರತಿಕ್ರಿಯಿಸಿದ್ದಾರೆ.
ಆ ಮಾತು ಅವರ ಮನಸ್ಸನ್ನು ತಲುಪಿತು. ಬಹುಶಃ ಅವರು ವಿದ್ಯಾರ್ಥಿಗಳ ಬಗ್ಗೆ ಯೋಚಿಸುತ್ತಿರಬಹುದು. ಅಥವಾ ಒಡಹುಟ್ಟಿದವರು ಅಥವಾ ಮಕ್ಕಳು ಓದುತ್ತಿರಬಹುದು. ಅವರ ಕಥೆ ನನಗೆ ತಿಳಿದಿಲ್ಲ, ಆದರೆ ಅವರ ಮಾತುಗಳು ಪ್ರತಿಭಟನಾ ಸ್ಥಳದಲ್ಲಿ ನಿಂತವರಿಗಿಂತ ಈ ಚಳುವಳಿ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನನಗೆ ನೆನಪಿಸಿತು ಎಂದು ಅವರು ಹೇಳಿದರು.
ಆದಾಗ್ಯೂ, ಪೋಸ್ಟ್​ ಹಂಚಿಕೊಂಡ ನಾಗಾಲ್ಯಾಂಡ್ ಯುವಕ ಈ ಪೋಸ್ಟ್ ಅನ್ನು ಹೊಗಳಿಕೆ ಪಡೆಯಲು ಹಂಚಿಕೊಳ್ಳುತ್ತಿಲ್ಲ, ಬದಲಾಗಿ ಇತರರು ತಮಗೆ ಸಾಧ್ಯವಾದಷ್ಟು ಸಹಾಯ ಮಾಡುವಂತೆ ಪ್ರೋತ್ಸಾಹಿಸಲು ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ, ಸಹಾಯ ಮಾಡಲು ನೀವು ದೆಹಲಿಯಲ್ಲೇ ಇರಬೇಕಿಲ್ಲ ಎಂದು ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರ ಗಮನ ಸೆಳೆಯಿತು. ಒಬ್ಬ ಬಳಕೆದಾರ "ಅವರು ಬರೀ ಸಾಧಾರಣ ಪಿಜ್ಜಾ ಕಳುಹಿಸಿಲ್ಲ, ಅದಕ್ಕೆ 'ಚೀಸ್ ಬರ್ಸ್ಟ್' ಕೂಡ ಸೇರಿಸಿದ್ದಾರೆ! ಅದೇ ಸೂಪರ್ ಕಾಂಬಿನೇಷನ್. ನಿಮಗೊಂದು ಬಿಗ್ ರೇಸ್ಪೆಕ್ಟ್," ಎಂದು ಕಮೆಂಟ್​ ಮಾಡಿದ್ದರೆ, ಮತ್ತೊಬ್ಬ ಬಳಕೆದಾರ "ನಿಮ್ಮಂತಹ ಜನರಿಂದಾಗಿಯೇ ಮಾನವೀಯತೆಯ ಮೇಲಿನ ನಂಬಿಕೆ ಇನ್ನೂ ಉಳಿದಿದೆ. ನಿಮ್ಮ ಈ ದಯೆಗೆ ದೇವರು ಸಾವಿರ ಪಟ್ಟು ಹೆಚ್ಚು ಒಳ್ಳೆಯದು ಮಾಡಲಿ," ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net