ನಾನಿದನ್ನು ಮಾಡಿದಾಗಲೆಲ್ಲ ನನ್ನ ಹೆಂಡ್ತಿ ಬೈತಾಳೆ... ಟ್ರಂಪ್​ ವಿವಾದಾತ್ಮಕ ಹೇಳಿಕೆ, ನೆಟ್ಟಿಗರ ಆಕ್ರೋಶ! Donald Trump

ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್
ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್
Published on

ಪ್ರಮುಖ ಮುಖ್ಯಾಂಶಗಳು

  • ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್
  • ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳ ಭಾಗವಹಿಸುವಿಕೆಯನ್ನು ವ್ಯಂಗ್ಯವಾಡಿದ ದೊಡ್ಡಣ್ಣ
  • ಈ ರೀತಿ ನಟಿಸುವುದನ್ನು ನನ್ನ ಪತ್ನಿ ಮೆಲಾನಿಯಾ ಟ್ರಂಪ್​ ಒಪ್ಪುವುದಿಲ್ಲ ಎಂದ ಟ್ರಂಪ್
ವಾಷಿಂಗ್ಟನ್​​: ರಿಪಬ್ಲಿಕನ್ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ತೃತೀಯಲಿಂಗಿ ಕ್ರೀಡಾಪಟುಗಳನ್ನು ಅಣಕಿಸುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ( Donald Trump )​ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಟ್ರಂಪ್​ ಆಡಳಿತದ ರ್ಯಾಪಿಡ್​ ರೆಸ್ಪಾನ್ಸ್​ 47 ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಲಾಗಿದೆ.
ರಾಜಧಾನಿ ವಾಷಿಂಗ್ಟನ್​ನಲ್ಲಿರುವ ಕೆನೆಡಿ ಸೆಂಟರ್​ನಲ್ಲಿ ತಮ್ಮ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡುವಾಗ ಟ್ರಂಪ್​ ಅವರು ತೂಕ ಎತ್ತುವ ಸ್ಪರ್ಧೆಯಲ್ಲಿ ತೃತೀಯ ಲಿಂಗಿ ಕ್ರೀಡಾಪಟುಗಳು ಹೇಗೆ ವರ್ತಿಸುತ್ತಾರೆ ಎಂಬುದನ್ನು ವೇದಿಕೆಯ ಮೇಲೆ ನಟಿಸಿ ತೋರಿಸಿದರು. ಅತ್ಯಂತ ಹಗುರವಾದ ತೂಕವನ್ನು ಎತ್ತಲು ಹೇಗೆ ಕಷ್ಟಪಡುತ್ತಾರೆ ಎಂಬುದನ್ನು ಸೊಟ್ಟ ಮುಖ ಮಾಡಿಕೊಂಡು ನಟಿಸುವ ಮೂಲಕ ಅಣಕಿಸಿದರು. ಈ ಮೂಲಕ ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳ ಭಾಗವಹಿಸುವಿಕೆಯನ್ನು ವ್ಯಂಗ್ಯವಾಡಿದರು. ಈ ಸಮಯದಲ್ಲಿ ಟ್ರಂಪ್​ ನಟನೆಯನ್ನು ನೋಡಿ ಸಭೆಯಲ್ಲಿದ್ದವರೆಲ್ಲ ನಗಾಡಿದರು.
ಈ ರೀತಿ ನಟಿಸುವುದನ್ನು ನನ್ನ ಪತ್ನಿ (ಮೆಲಾನಿಯಾ ಟ್ರಂಪ್​) ಒಪ್ಪುವುದಿಲ್ಲ. ಈ ರೀತಿ ಮಾಡಿದಾಗಲೆಲ್ಲ ನನ್ನ ಹೆಂಡತಿ ಅದನ್ನು ದ್ವೇಷಿಸುತ್ತಾಳೆ. ಆಕೆ ಓರ್ವ ಘನತೆಯುಳ್ಳ ವ್ಯಕ್ತಿ. ನಾನು ವೇದಿಕೆಯ ಮೇಲೆ ಈ ರೀತಿ ನಟನೆ ಮಾಡಿದಾಗಲೆಲ್ಲ, ಓರ್ವ ಅಧ್ಯಕ್ಷನಾಗಿ ನಿನಗಿದು ಶೋಭೆ ತರುವಂಥದ್ದಲ್ಲ ಎಂದು ಹೇಳುತ್ತಾಳೆ. ಆದರೆ, ನಾನಿದನ್ನೆಲ್ಲ ಮಾಡುವುದೇ ಅಧ್ಯಕ್ಷನಾಗಲು ಎಂದು ಆಕೆಗೆ ಹೇಳುತ್ತೇನೆ ಎನ್ನುವ ಮೂಲಕ ಟ್ರಂಪ್​ ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು.
ಟ್ರಂಪ್ ಆಡಳಿತದ ರಾಪಿಡ್ ರೆಸ್ಪಾನ್ಸ್ 47 ಖಾತೆಯು ತಾನು ಶೇರ್​ ಮಾಡಿಕೊಂಡಿರುವ ವಿಡಿಯೋ ತುಣುಕಿಗೆ "ಮಹಿಳಾ ಕ್ರೀಡೆಗಳಲ್ಲಿ 'ಟ್ರಾನ್ಸ್ ಅಥ್ಲೀಟ್‌ಗಳ' ಬಗ್ಗೆ ಅಧ್ಯಕ್ಷರ ಅನುಕರಣೆ: ನಾನಿದನ್ನು ಮಾಡಿದಾಗ ನನ್ನ ಹೆಂಡತಿಗೆ ಇಷ್ಟವಿಲ್ಲ" ಎಂಬ ಶೀರ್ಷಿಕೆ ನೀಡಿದೆ. ಯಾವಾಗ ಈ ವಿಡಿಯೋ ವೈರಲ್​ ಆಯಿತೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ತೃತೀಯ ಲಿಂಗಿಗಳಿಗೆ ಮಾಡಿದ ಅವಮಾನ ಹಾಗೂ ಸೂಕ್ಷ್ಮ ವಿಚಾರವನ್ನು ವ್ಯಂಗ್ಯವಾಡಿದ್ದಾರೆ ಎಂದು ಟೀಕಾ ಪ್ರಹಾರ ನಡೆಸುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net