ಮುಸ್ತಾಫಿಜುರ್‌ ಅಮಾನತು, ಬಾಂಗ್ಲಾದಲ್ಲಿ ಐಪಿಎಲ್ ಪ್ರಸಾರ ಬಂದ್: ಮಧ್ಯಂತರ ಸರ್ಕಾರದಿಂದ ಆದೇಶ | IPL Ban

ಮುಸ್ತಾಫಿಜುರ್‌ ಅಮಾನತು, ಬಾಂಗ್ಲಾದಲ್ಲಿ ಐಪಿಎಲ್ ಪ್ರಸಾರ ಬಂದ್: ಮಧ್ಯಂತರ ಸರ್ಕಾರದಿಂದ ಆದೇಶ
ಮುಸ್ತಾಫಿಜುರ್‌ ಅಮಾನತು, ಬಾಂಗ್ಲಾದಲ್ಲಿ ಐಪಿಎಲ್ ಪ್ರಸಾರ ಬಂದ್: ಮಧ್ಯಂತರ ಸರ್ಕಾರದಿಂದ ಆದೇಶ
Published on
ಢಾಕಾ: ಭಾರತ-ಬಾಂಗ್ಲಾದೇಶ ನಡುವಿನ ಸಂಬಂಧಗಳನ್ನು ಮತ್ತಷ್ಟು ಹದಗೆಟ್ಟಿದ್ದು, ಇಂದಿನಿಂದ(ಜ.05) ಬಾಂಗ್ಲಾದ್ಯಂತ ಇಂಡಿಯನ್ ಪ್ರೀಮಿಯರ್ ಲೀಗ್(IPL Ban) ಪ್ರಸಾರ ಮತ್ತು ಪ್ರಚಾರದ ಮೇಲೆ ಅನಿರ್ದಿಷ್ಟಾವಧಿ ನಿಷೇಧ ಎಂದು ಮಧ್ಯಂತರ ಸರ್ಕಾರವು ಆದೇಶಿಸಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಟಿವಿ-2 ವಿಭಾಗ) ಸಹಾಯಕ ಕಾರ್ಯದರ್ಶಿ ಮೊಹಮ್ಮದ್ ಫಿರೋಜ್ ಖಾನ್ ಸಹಿ ಮಾಡಿದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಬಿಸಿಸಿಐನ ಈ ಕ್ರಮವು ಬಾಂಗ್ಲಾದೇಶದ ಜನರಿಗೆ ನೋವು, ಯಾತನೆಯ ಮೂಲವಾಗಿದೆ ಎಂದು ಹೇಳಿದೆ.
ಈ ಆದೇಶವು ಐಪಿಎಲ್‌ಗೆ ಸಂಬಂಧಿಸಿದ ಎಲ್ಲಾ ನೇರ ಪ್ರಸಾರಗಳು, ಪ್ರಚಾರ ಜಾಹೀರಾತುಗಳು ಮತ್ತು ಕಾರ್ಯಕ್ರಮಗಳ ಪ್ರಸಾರವನ್ನು ಒಳಗೊಂಡಿದೆ. ಅಲ್ಲದೆ, ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್, ನಮ್ಮ ಆಟಗಾರರಿಗೆ ಸರಿಯಾದ ಗೌರವ ಸಿಗದಿದ್ದಾಗ, ನಮ್ಮ ದೇಶದಲ್ಲಿ ಆ ಲೀಗ್‌ನ ಪ್ರಸಾರಕ್ಕೆ ನಾವು ಏಕೆ ಅವಕಾಶ ನೀಡಬೇಕು? ಇದು ರಾಷ್ಟ್ರೀಯ ಘನತೆಯ ಬಗ್ಗೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿಯ ಈ ನಿರ್ಧಾರಕ್ಕೆ ಯಾವುದೇ ತಾರ್ಕಿಕ ಕಾರಣವಿಲ್ಲ. ಇಂತಹ ನಡೆ ಬಾಂಗ್ಲಾದೇಶದ ಜನರನ್ನು ಆಘಾತಗೊಳಿಸಿದೆ. ಐಪಿಎಲ್‌ಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ತಕ್ಷಣವೇ ನಿಲ್ಲಿಸಲು ನಾವು ಒತ್ತಾಯಿಸಲ್ಪಟ್ಟಿದ್ದೇವೆ ಎಂದು ಬಾಂಗ್ಲಾದೇಶ ಸರ್ಕಾರದ ಅಧಿಕೃತ ಆದೇಶ ಹೊರಡಿಸಿದೆ.

ಮುಸ್ತಾಫಿಜುರ್ ರೆಹಮಾನ್ ಅಮಾನತು

ಐಪಿಎಲ್​ಗೆ ₹9.20 ಕೋಟಿಗೆ ಖರೀದಿಸಲಾದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್​ರನ್ನು ಬಿಡುಗಡೆ ಮಾಡುವಂತೆ ಬಿಸಿಸಿಐ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)ಗೆ ಸೂಚಿಸಿದ ನಂತರ ಉದ್ವಿಗ್ನತೆ ತಾರಕಕ್ಕೇರಿದೆ.
ಈ ನಿರ್ಧಾರಕ್ಕೆ ಪ್ರಮುಖ ಕಾರಣ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ವರದಿಗಳ ನಂತರ ಭಾರತದಲ್ಲಿ ದೇಶೀಯ ಒತ್ತಡ ಹೆಚ್ಚಾಯಿತು. ಅಲ್ಲದೆ, ಬಾಂಗ್ಲಾದ ಆಟಗಾರ ಐಪಿಎಲ್‌ನಲ್ಲಿ ಭಾಗವಹಿಸಿದರೆ ಪಿಚ್‌ಗಳನ್ನು ಅಗೆಯುವುದಾಗಿ ಭಾರತದ ರಾಜಕೀಯ ಗುಂಪುಗಳು ಬೆದರಿಕೆ ಹಾಕಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net