ಸೋಮವಾರ (ನ.10) ಸಂಜೆ, ಕೆಂಪು ಕೋಟೆ ಬಳಿಯ ಟ್ರಾಫಿಕ್ ಸಿಗ್ನಲ್ನಲ್ಲಿ ಬಿಳಿ ಬಣ್ಣದ ಹೂಂಡೈ ಐ20 ಕಾರು ಸ್ಫೋಟಗೊಂಡು 13 ಮಂದಿ ದುರಂತ ಸಾವಿಗೀಡಾದರು. ಅಲ್ಲದೆ, ಈ ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡರು. ಸ್ಫೋಟದ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಹತ್ತಿರದ ಹಲವಾರು ವಾಹನಗಳು ಕೂಡ ಸುಟ್ಟು ಕರಕಲಾದವು. ಅಲ್ಲದೆ, ವಾಹನದ ಬಿಡಿಭಾಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಲ್ಲಲ್ಲಿ ಬಿದ್ದಿದ್ದ ಹೆಣಗಳು ಮತ್ತು ಗಾಯಗೊಂಡು ನರಳುತ್ತಿದ್ದ ಮಂದಿಯನ್ನು ನೋಡಿ ಜನರ ಕೂಗಾಟ ಘಟನಾ ಸ್ಥಳವನ್ನು ತಕ್ಷಣವೇ ಅವ್ಯವಸ್ಥೆಯ ಗೂಡನ್ನಾಗಿ ಮಾಡಿತು. ಇಡೀ ಪ್ರದೇಶ ರಕ್ತಸಿಕ್ತವಾಗಿತ್ತು. ಅಂದಹಾಗೆ, ಈ ಸ್ಫೋಟ ಸಂಭವಿಸುವುದಕ್ಕೂ ಮುನ್ನ ಪ್ರಮುಖ ಬೆಳವಣಿಗೆಯೊಂದು ನಡೆದಿತ್ತು. ಇದೇ ಬೆಳವಣಿಗೆ ಭೀಕರ ಸ್ಫೋಟಕ್ಕೆ ಕಾರಣ ಎಂದು ನಂಬಲಾಗಿದೆ. ಏನಾಗಿತ್ತು ಅಂದರೆ, ಸೋಮವಾರ ಸಂಜೆ ಕಾರು ಸ್ಫೋಟ ಆಗುವುದಕ್ಕೂ ಮುನ್ನ ಅದೇ ದಿನ ಬೆಳಗ್ಗೆ ಮೂವರು ವೈದ್ಯರು ಸೇರಿದಂತೆ ಎಂಟು ಜನರನ್ನು ಬಂಧಿಸಿದ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ಪೊಲೀಸರು ಬರೋಬ್ಬರಿ 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡರು. ಇದಾದ ಕೆಲವೇ ಗಂಟೆಗಳಲ್ಲಿ ಅಂದರೆ ಸೋಮವಾರ ಸಂಜೆ ಕಾರು ಸ್ಫೋಟ ಸಂಭವಿಸಿದೆ. ತನ್ನ ಸಹಚರರ ಬಂಧನ ಭೀತಿಯಿಂದ ಆರೋಪಿ ಉಮರ್ ನವಿ ಕಾರು ಸ್ಫೋಟಿಸಿದ್ದಾನೆ ಎಂಬ ಮಾಹಿತಿಯೂ ಇದೆ, (ಏಜೆನ್ಸೀಸ್).