ಸಿಎಂ ವಿಜಯ್ ಬಹುಮತ ಸಾಬೀತು ವೇಳೆ ಹೈಡ್ರಾಮಾ...ಎಐಎಡಿಎಂಕೆ ಶಾಸಕರಿಗೆ ಹಣ ನೀಡಲಾಗಿದೆ ಎಂದ ಪಳನಿಸ್ವಾಮಿ | Edappadi K Palaniswami

Edappadi K Palaniswami | ಎಡಪ್ಪಾಡಿ ಕೆ. ಪಳನಿಸ್ವಾಮಿ
Edappadi K Palaniswami | ಎಡಪ್ಪಾಡಿ ಕೆ. ಪಳನಿಸ್ವಾಮಿ
Published on
Edappadi K Palaniswami: ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರದ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆಯು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಎಐಎಡಿಎಂಕೆ ಪಕ್ಷದೊಳಗೆ ಉಂಟಾಗಿರುವ ಭಿನ್ನಮತ ಮತ್ತು ನಾಯಕತ್ವದ ಸಂಘರ್ಷವು ಸದನದ ಒಳಗಡೆಯೇ ಬಹಿರಂಗವಾಗಿ ಸ್ಫೋಟಗೊಂಡಿತು.
ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಆಡಳಿತಾರೂಢ ಟಿವಿಕೆ ಸರ್ಕಾರದ ವಿರುದ್ಧ ಕುದುರೆ ವ್ಯಾಪಾರದ ಗಂಭೀರ ಆರೋಪ ಮಾಡುವುದರೊಂದಿಗೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಪ್ರಸ್ತುತ 119 ಶಾಸಕರ ಬಲದೊಂದಿಗೆ ಸರ್ಕಾರ ನಡೆಸುತ್ತಿರುವ ವಿಜಯ್​ ಇಂದು ವಿಶ್ವಾಸಮತವನ್ನು ಯಾಚಿಸಿದ್ದು, ಈ ವಿಷಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಎಡಪ್ಪಾಡಿ ಪಳನಿಸ್ವಾಮಿ, ತಮ್ಮ ಪಕ್ಷದ ಶಾಸಕರಿಗೆ ಟಿವಿಕೆ ಪರವಾಗಿ ಮತ ಚಲಾಯಿಸಲು ಹಣ ನೀಡಲಾಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು. ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಭರವಸೆಯೊಂದಿಗೆ ಎಐಎಡಿಎಂಕೆ ಶಾಸಕರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಇಪಿಎಸ್​ ಕಿಡಿಕಾರಿದರು. ಟಿವಿಕೆ ನಾಯಕರು ಶುದ್ಧ ಮತ್ತು ಪಾರದರ್ಶಕ ಸರ್ಕಾರವನ್ನು ನಡೆಸಲು ಬಯಸುವುದಾಗಿ ಹೇಳಿದ್ದಾರೆ, ನಾವು ಸಹ ಅದನ್ನು ಸ್ವಾಗತಿಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ ಎನ್ನುತ್ತಲೇ, ಈ ನಿರ್ಣಯವನ್ನು ಎಐಎಡಿಎಂಕೆ ವಿರೋಧಿಸಲಿದೆ ಮತ್ತು ಎಲ್ಲಾ 47 ಶಾಸಕರು ಸರ್ಕಾರದ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂದು ಘೋಷಿಸಿದರು.
ಈ ಹಂತದಲ್ಲಿ ಪರಿಸ್ಥಿತಿ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಪಳನಿಸ್ವಾಮಿ ಭಾಷಣದ ಬಳಿಕ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್, ಎಐಎಡಿಎಂಕೆಯ ಮತ್ತೊಬ್ಬ ಹಿರಿಯ ನಾಯಕ ಎಸ್.ಪಿ. ವೇಲುಮಣಿಗೆ ಮಾತನಾಡಲು ಅವಕಾಶ ನೀಡಿದರು. ಇದು ಇಪಿಎಸ್ ಬಣವನ್ನು ಕೆರಳಿಸಿತು. ಒಂದೇ ಪಕ್ಷದ ಇಬ್ಬರು ನಾಯಕರಿಗೆ ಪ್ರತ್ಯೇಕವಾಗಿ ಮಾತನಾಡಲು ಅವಕಾಶ ನೀಡಬಾರದು ಎಂದು ಪಳನಿಸ್ವಾಮಿ ಬೆಂಬಲಿಗರು ಪ್ರತಿಭಟಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ಚರ್ಚೆಯ ಸಮಯದಲ್ಲಿ ಯಾರಿಗೆ ಮಾತನಾಡಲು ಅವಕಾಶ ನೀಡಬೇಕು ಎಂಬುದು ತಮ್ಮ ವಿವೇಚನಾ ಅಧಿಕಾರಕ್ಕೆ ಸೇರಿದ್ದು ಎಂದು ಸ್ಪಷ್ಟಪಡಿಸಿ ಗದ್ದಲವನ್ನು ನಿಯಂತ್ರಿಸಲು ಪ್ರಯತ್ನಿಸಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net