ಇಸ್ಲಾಂ ತ್ಯಜಿಸಿ ಹಿಂದೂ ಧರ್ಮಕ್ಕೆ ಮರಳಿದ ಬೆನ್ನಲ್ಲೇ ಮಿಸ್ ಇಂಡಿಯಾ ಬ್ಯೂಟಿ ನಾಪತ್ತೆ! Miss India Earth Sayli Surve

ಇಸ್ಲಾಂ ತ್ಯಜಿಸಿ ಹಿಂದೂ ಧರ್ಮಕ್ಕೆ ಮರಳಿದ ಬೆನ್ನಲ್ಲೇ ಮಿಸ್ ಇಂಡಿಯಾ ಬ್ಯೂಟಿ ನಾಪತ್ತೆ! Miss India Earth Sayli Surve
ಇಸ್ಲಾಂ ತ್ಯಜಿಸಿ ಹಿಂದೂ ಧರ್ಮಕ್ಕೆ ಮರಳಿದ ಬೆನ್ನಲ್ಲೇ ಮಿಸ್ ಇಂಡಿಯಾ ಬ್ಯೂಟಿ ನಾಪತ್ತೆ! Miss India Earth Sayli Surve
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಾದ್ಯಂತ ಸುದ್ದಿಯಾದ ಪುಣೆ ಮೂಲದ ಮಿಸ್ ಇಂಡಿಯಾ ಅರ್ಥ್-2019 ವಿಜೇತೆ ಸಯಾಲಿ ಸುರ್ವೆ
  • ತಮ್ಮ ಮೂಲ ಹಿಂದೂ ಧರ್ಮಕ್ಕೆ ವಾಪಾಸ್ಸಾಗಿ ಗಂಡನ ವಿರುದ್ಧ ಲವ್​ ಜಿಹಾದ್​​ ಆರೋಪ ಮಾಡಿದ ಸುರ್ವೆ
  • ಅತ್ತೆ ಮನೆಯವರ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ನಾಪತ್ತೆಯಾದ ಮಿಸ್ ಇಂಡಿಯಾ ವಿಜೇತೆ
Miss India Earth Sayli Surve : ಮತ್ತೆ ತಮ್ಮ ಮೂಲ ಹಿಂದೂ ಧರ್ಮಕ್ಕೆ ವಾಪಾಸ್ಸಾಗಿ ಗಂಡನ ವಿರುದ್ಧ ಲವ್​ ಜಿಹಾದ್​​ ಆರೋಪ ಮಾಡಿದ ಬೆನ್ನಲ್ಲೇ ಪುಣೆ ಮೂಲದ ಮಿಸ್ ಇಂಡಿಯಾ ಅರ್ಥ್-2019 ವಿಜೇತೆ ಸಯಾಲಿ ಸುರ್ವೆ ಅವರು ತಮ್ಮ ನಾಲ್ವರು ಮಕ್ಕಳೊಂದಿಗೆ ನಾಪತ್ತೆಯಾಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಾಯುಯಾನ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಮಾಡೆಲ್​ ಸಯಾಲಿ, ಒಂದು ವಾರದ ಹಿಂದಷ್ಟೇ ತನ್ನ ಹೆಸರನ್ನು ಆದ್ಯ ಸುರ್ವೆ ಎಂದು ಬದಲಾಯಿಸಿಕೊಂಡು, ಅದ್ಧೂರಿ ಸಮಾರಂಭದೊಂದಿಗೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು. ಈ ವೇಳೆ ತಮ್ಮ ಗಂಡನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಸಯಾಲಿ, ವರ್ಷಗಳ ಕಾಲ ನನಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದರು ಎಂದರು. ಹಿಂದೂ ಧರ್ಮಕ್ಕೆ ವಾಪಸ್ಸಾದ ಬೆನ್ನಲ್ಲೇ ತನ್ನ ನಾಲ್ವರು ಮಕ್ಕಳೊಂದಿಗೆ ಇದೀಗ ಸಯಾಲಿ ನಾಪತ್ತೆಯಾಗಿದ್ದಾರೆ.
ಆಕೆಯ ಗಂಡ ಮತ್ತು ಅತ್ತೆ ಮನೆಯವರು ಅಪಹರಣ ಮಾಡಿದ್ದಾರೆ ಎಂದು ಸಯಾಲಿ ಪಾಲಕರು ದೂರು ದಾಖಲಿಸಿದ್ದು, ಪಿಂಪ್ರಿ-ಚಿಂಚ್ವಾಡ್ ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು?

ಕುಟಂಬದ ವಿರೋಧದ ನಡುವೆಯೂ ಸಯಾಲಿ ಅವರು ಮೀರಾ-ಭಾಯಂದರ್ ಮೂಲದ ಮುಸ್ಲಿಂ ಉದ್ಯಮಿ ಅತಿಫ್ ತಾಸೆ ಎಂಬಾತನನ್ನು ಪ್ರೀತಿಸಿ ಮದುವೆ ಆದರು. ಮದುವೆ ಆಗುವುದಕ್ಕಾಗಿ ತನ್ನ ಹಿಂದೂ ಧರ್ಮವನ್ನು ತೊರೆದು, ಅತೀಜಾ ತಾಸೆ ಹೆಸರಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾದರು. ಅತಿಫ್​ರನ್ನು ಮದುವೆ ಆಗಿದ್ದೇ ನನ್ನ ಜೀವನದಲ್ಲಿ ನಾನು ಮಾಡಿದ ಒಂದು ದೊಡ್ಡ ತಪ್ಪು ಎನ್ನುತ್ತಾರೆ ಸಯಾಲಿ. ಮದುವೆಯಾದ ಬಳಿಕ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಕೆಲವೇ ತಿಂಗಳುಗಳಲ್ಲಿ ನನ್ನ ಮೇಲಿನ ಶೋಷಣೆ ಆರಂಭವಾಯಿತು ಎಂದು ಮಾಧ್ಯಮದವರಿಗೆ ಸಯಾಲಿ ತಿಳಿಸಿದ್ದಾರೆ.
ನನಗೆ ನಾಲ್ಕು ಮಕ್ಕಳಿದ್ದಾರೆ. ಅವರಿಗಾಗಿ ಎಲ್ಲ ಹಿಂಸೆಯನ್ನು ಹಲವು ವರ್ಷಗಳವರೆಗೆ ಸಹಿಸಿಕೊಂಡೆ. ನನ್ನದು ಯಾವುದೇ ತಪ್ಪಿಲ್ಲದಿದ್ದರೂ ದಿನದ 24 ಗಂಟೆಯೂ ನಿಂದನೆ ಮತ್ತು ಹಲ್ಲೆಯನ್ನು ಅನುಭವಿಸುತ್ತಿದ್ದೆ. ಮೊದಲು ಅಸಹಜವೆನಿಸುತ್ತಿದ್ದ ವಿಷಯಗಳು ಕ್ರಮೇಣ ಸಾಮಾನ್ಯ ಎನಿಸಲು ಶುರುವಾಯಿತು. ಇದಿಷ್ಟೇ ಅಲ್ಲದೆ, ನನ್ನ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಲಾಗಿತ್ತು. ನಿರಂತವಾಗಿ ಅನುಭವಿಸುತ್ತಿದ್ದ ಕಿರುಕುಳದ ಬಗ್ಗೆ ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ ಸಯಾಲಿ. ಅಲ್ಲದೆ, ತನ್ನ ಪ್ರಕರಣವನ್ನು ತಾವೇ 'ಲವ್ ಜಿಹಾದ್' ಎಂದು ಕರೆದರು.
ಇನ್ನು ಪಿಂಪ್ಲಿ-ಚಿಂಚವಾಡದಲ್ಲಿ ಕಳೆದವಾರಷ್ಟೇ ವಿಶೇಷ ಶುದ್ಧೀಕರಣ ಸಮಾರಂಭ ನಡೆಯಿತು. ಧಾರ್ಮಿಕ ವಿಧಿವಿಧಾನಗಳ ಮೂಲಕ ಅತೀಜಾ ಅವರ ಹೆಸರನ್ನು ಆದ್ಯಾ ಸುರ್ವೆ ಎಂದು ಬದಲಾಯಿಸಿಕೊಂಡರು. ಸಂಸದೆ ಮೇಧಾ ಕುಲಕರ್ಣಿ, ಶಾಸಕಿ ಉಮಾ ಖಾಪ್ರೆ ಮತ್ತು ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಅವರ ನಾಲ್ಕು ಮಕ್ಕಳಿಗೂ ಹೊಸ ಹೆಸರುಗಳನ್ನು ನಾಮಕರಣ ಮಾಡಲಾಯಿತು. ಈ ವೇಳೆ ಮಾತನಾಡಿದ ಸುರ್ವೆ, ಯಾವುದೇ ಹೆಣ್ಣುಮಕ್ಕಳು ಇಂತಹ ಕಿರುಕುಳವನ್ನು ಸಹಿಸಬೇಡಿ. ಇಂತಹ ರಾವಣರ ಮುಂದೆ ಪ್ರಾಣ ಕಳೆದುಕೊಳ್ಳಲು ದೇವರು ನಮಗೆ ಜೀವನ ನೀಡಿಲ್ಲ. ನಾಲ್ಕು ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಹತ್ತು ವರ್ಷಗಳ ಕಾಲ ತಂದೆ-ತಾಯಿ ಇಬ್ಬರ ಪ್ರೀತಿ ಸಿಗಲಿ ಎಂದು ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ, ಮನುಷ್ಯಳಾಗಿ ನನ್ನ ತಾಳ್ಮೆ ಮೀರಿದಾಗ ಮಕ್ಕಳಿಗೋಸ್ಕರ ಈ ಹೊರಬರುವ ನಿರ್ಧಾರ ಮಾಡಿದೆ ಎಂದು ಸುರ್ವೆ ಹೇಳಿದರು. 
ಹಿಂದೂ ಧರ್ಮಕ್ಕೆ ವಾಪಾಸ್ಸಾಗಿ, ಪಿಂಪ್ಲಿ-ಚಿಂಚವಾಡದಲ್ಲಿರುವ ತಮ್ಮ ಮನೆಗೆ ಮರಳಿದ ಬೆನ್ನಲ್ಲೇ ತನ್ನ ನಾಲ್ವರು ಮಕ್ಕಳೊಂದಿಗೆ ಸುರ್ವೆ ನಾಪತ್ತೆಯಾಗಿದ್ದಾರೆ. ಆಕೆಯ ಗಂಡ, ಅತ್ತೆ-ಮಾವನ ಮನೆಯವರು ಅಪಹರಿಸಿದ್ದಾರೆ ಎಂದು ಸುರ್ವೆ ಪಾಲಕರು ಆರೋಪಿಸಿದ್ದಾರೆ. ಈ ಸಂಬಂಧ ಪಿಂಪ್ಲಿ-ಚಿಂಚವಾಡ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆಕೆಯ 'ಘರ್ ವಾಪಸಿ'ಗೆ ಬೆಂಬಲ ನೀಡಿದ್ದ ಹಿಂದೂ ಸಂಘಟನೆಗಳು ಆಕೆಯನ್ನು ತಕ್ಷಣವೇ ಪತ್ತೆಹಚ್ಚಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಇನ್ನು ಸುರ್ವೆ ಅವರ ಅತ್ತೆ ಗುಲ್ಶನ್ ತಾಸೆ ಈ ಪ್ರಕರಣದಲ್ಲಿ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net