ಫಾತಿಮಾ​ಗೆ ಒಲಿದ 2025ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟ! ಮೆಕ್ಸಿಕೋ ಸುಂದರಿಯ ಪರಿಚಯ ಇಲ್ಲಿದೆ... Miss Universe 2025

2025ನೇ ಸಾಲಿನ ಮಿಸ್​ ಯೂನಿವರ್ಸ್​ ವಿಜೇತೆ ಫಾತಿಮಾ ಬಾಷ್
2025ನೇ ಸಾಲಿನ ಮಿಸ್​ ಯೂನಿವರ್ಸ್​ ವಿಜೇತೆ ಫಾತಿಮಾ ಬಾಷ್
Published on

ಪ್ರಮುಖ ಮುಖ್ಯಾಂಶಗಳು

  • ಮೆಕ್ಸಿಕೋ ಮೂಲದ ಫಾತಿಮಾ ಬಾಷ್​ಗೆ ಒಲಿದ 2025ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟ
  • ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಥೈಲ್ಯಾಂಡ್‌ನ ವೀಣಾ ಪ್ರವೀಣ್ ಸಿಂಗ್
  • ಫಾತಿಮಾಗೆ ಕಿರೀಟ ಧಾರಣೆ ಮಾಡಿದ ಮಾಜಿ ಮಿಸ್ ಯೂನಿವರ್ಸ್​ ವಿಕ್ಟೋರಿಯಾ ಕೆಜೆರ್ ಥೀಲ್ವಿಗ್
ಬ್ಯಾಂಕಾಕ್: ಮೆಕ್ಸಿಕೋ ಮೂಲದ 25 ವರ್ಷದ ಫಾತಿಮಾ ಬಾಷ್ ಅವರು 2025ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟವನ್ನು ( Miss Universe 2025 ) ಮುಡಿಗೇರಿಸಿಕೊಂಡಿದ್ದಾರೆ. ಗೆಲುವಿನ ಭಾವನಾತ್ಮಕ ಕ್ಷಣಗಳ ನಡುವೆ ಡೆನ್ಮಾರ್ಕ್​ ಮೂಲದ ಮಾಜಿ ಮಿಸ್ ಯೂನಿವರ್ಸ್​ ವಿಕ್ಟೋರಿಯಾ ಕೆಜೆರ್ ಥೀಲ್ವಿಗ್ ಅವರು ಫಾತಿಮಾ ಅವರಿಗೆ ಕಿರೀಟ ಧಾರಣೆ ಮಾಡಿದರು.
ಮಿಸ್​ ಯೂನಿವರ್ಸ್​-2025ರ ಫೈನಲ್​ ಸ್ಪರ್ಧೆಯಲ್ಲಿ ಫಾತಿಮಾ ಬಾಷ್ ಪ್ರಥಮ ಸ್ಥಾನ ಪಡೆದರೆ, ಥೈಲ್ಯಾಂಡ್‌ನ ವೀಣಾ ಪ್ರವೀಣ್ ಸಿಂಗ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಎರಡನೇ ರನ್ನರ್​ ಅಪ್​ ಸ್ಥಾನವನ್ನು ವೆನೆಜುವೆಲಾದ ಸ್ಟೆಫನಿ ಅಬಾಸಾಲಿ ಪಡೆದರೆ, ಮೂರು ಮತ್ತು ನಾಲ್ಕನೇ ರನ್ನರ್​ ಅಪ್​ ಸ್ಥಾನವನ್ನು ಕ್ರಮವಾಗಿ ಫಿಲಿಪ್ಪೈನ್ಸ್​ ಮೂಲದ ಅಹ್ತಿಸಾ ಮನಾಲೊ ಮತ್ತು ಕೋಟ್ ಡಿ'ಐವರಿ ಮೂಲದ ಒಲಿವಿಯಾ ಯಾಸೆ ಪಡೆದುಕೊಂಡರು. 
ಈ ಜಾಗತಿಕ ಸೌಂದರ್ಯ ಸ್ಪರ್ಧೆಯು ಥಾಯ್ಲೆಂಡ್​ ರಾಜಧಾನಿ ಬ್ಯಾಂಕಾಕ್​ನಲ್ಲಿ ಗುರುವಾರ ನಡೆಯಿತು. ಸ್ಟೀವ್ ಬೈರ್ನ್ ಎಂಬುವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸ್ಪರ್ಧೆಯಲ್ಲಿ ಥಾಯ್ ಗಾಯಕ ಜೆಫ್ ಸಚೂರ್ ಅವರ ಪ್ರದರ್ಶನವು ಪ್ರಮುಖ ಆಕರ್ಷಣೆಯಾಗಿತ್ತು. 120 ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳನ್ನು ಸೋಲಿಸಿ ಫಾತಿಮಾ ಬಾಷ್ 74ನೇ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ತೀರ್ಪುಗಾರರು ಕೇಳಿದ ಅಂತಿಮ ಪ್ರಶ್ನೆಗೆ, ಪ್ರಪಂಚದಾದ್ಯಂತ ಮಹಿಳೆಯರು ತಮ್ಮ ಧ್ವನಿಯನ್ನು ಎತ್ತಬೇಕು ಮತ್ತು ಬದಲಾವಣೆಯನ್ನು ತರಬೇಕು ಎಂದು ಉತ್ತರಿಸುವ ಮೂಲಕ ಫಾತಿಮಾ ಎಲ್ಲರ ಗಮನವನ್ನು ಸೆಳೆದರು. 

ಯಾರು ಈ ಫಾತಿಮಾ?

ಮೆಕ್ಸಿಕೋ ದೇಶದ ತಬಾಸ್ಕೊ ರಾಜ್ಯದ ವಿಲ್ಲಾಹೆರ್ಮೋಸಾ ಮೂಲದ ಫಾತಿಮಾ ಬಾಷ್, ಫೆರ್ನಾಂಡಿಸ್ ಫ್ಯಾಷನ್ ಮತ್ತು ಉಡುಪು ವಿನ್ಯಾಸಕರಾಗಿದ್ದು, ಮೆಕ್ಸಿಕೋ, ಇಟಲಿ ಮತ್ತು ಯುಎಸ್‌ನಲ್ಲಿ ಅಧ್ಯಯನ ಮಾಡಿದ್ದಾರೆ. 25 ವರ್ಷದ ಈಕೆ ಡಿಸ್ಲೆಕ್ಸಿಯಾ, ಎಡಿಎಚ್‌ಡಿ ಮತ್ತು ಹೈಪರ್‌ಆಕ್ಟಿವಿಟಿಯಂತಹ ತನ್ನ ವೈಯಕ್ತಿಕ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಇತರರಿಗೆ ಮಾದರಿಯಾಗಿದ್ದಾಳೆ. ಅಲ್ಲದೆ, ತನ್ನ ಅನುಭವನ್ನೇ ಕೆಲಸವಾಗಿ ಪರಿವರ್ತಿಸಿಕೊಂಡಿದ್ದಾರೆ. ತನ್ನ ಡಿಸೈನ್​ನಲ್ಲಿ ಬಳಸಿ ಬೀಸಾಡಿದ ವಸ್ತುಗಳನ್ನೇ ಬಳಸಿಕೊಂಡು ಫ್ಯಾಷನ್‌ ಲೋಕದಲ್ಲಿ ತನ್ನದೇಯಾದ ಹೆಸರು ಮಾಡಿದ್ದಾಳೆ. ಫಾತಿಮಾ ಅವರು ಮೆಕ್ಸಿಕೋದ ಯೂನಿವರ್ಸಿಡಾಡ್ ಇಬೆರೊಅಮೆರಿಕಾನಾ, ಇಟಲಿಯ ಮಿಲನ್‌ನಲ್ಲಿರುವ ನುವಾ ಅಕಾಡೆಮಿಯಾ ಡಿ ಬೆಲ್ಲೆ ಆರ್ಟಿ ಮತ್ತು ಯುಎಸ್‌ಎಯ ವರ್ಮೊಂಟ್‌ನಲ್ಲಿರುವ ಲಿಂಡನ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಧ್ಯಯನ ಮಾಡಿದ್ದಾರೆ. 
74ನೇ ಮಿಸ್ ಯೂನಿವರ್ಸ್ ಪ್ರಶಸ್ತಿಯೊಂದಿಗೆ, ತಮ್ಮ ರಾಜ್ಯದಿಂದ ಮಿಸ್ ಯೂನಿವರ್ಸ್ ಗೆದ್ದ ಮೆಕ್ಸಿಕೋದ ಮೊದಲ ಮಹಿಳೆ ಎಂಬ ಇತಿಹಾಸವನ್ನು ಬರೆದಿದ್ದಾರೆ. ತಮ್ಮ 14 ನೇ ವಯಸ್ಸಿನಿಂದಲೂ ಕೊರಾಜನ್ ಮೈಗ್ರಾಂಟೆ ಮತ್ತು ರುಟಾ ಮೊನಾರ್ಕಾದಂತಹ ಉಪಕ್ರಮಗಳ ಮೂಲಕ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳು, ವಲಸಿಗರು ಮತ್ತು ದುರ್ಬಲ ಸಮುದಾಯಗಳ ಸಬಲೀಕರಣಕ್ಕೆ ನಿರಂತರವಾಗಿ ಕೆಲಸ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net