ಪ್ರಧಾನಿ ಮೋದಿ ವಿಡಿಯೋ ವಿವಾದ, ಡಿಪ್‌ಫೇಕ್ ಎಡವಟ್ಟು!....ಕೊನೆಗೂ ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್ | Mark Zuckerberg

Mark Zuckerberg | ಕೊನೆಗೂ ಕ್ಷಮೆಯಾಚಿಸಿದ ಮಾರ್ಕ್ ಝುಕರ್‌ಬರ್ಗ್
Mark Zuckerberg | ಕೊನೆಗೂ ಕ್ಷಮೆಯಾಚಿಸಿದ ಮಾರ್ಕ್ ಝುಕರ್‌ಬರ್ಗ್
Published on

ಮೆಟಾ ಸಂಸ್ಥೆಯ ವೇದಿಕೆಗಳಲ್ಲಿ ಬಾಲ ಲೈಂಗಿಕ ದೌರ್ಜನ್ಯದ ದೃಶ್ಯಗಳು ಹಾಗೂ ಡಿಪ್‌ಫೇಕ್ ವಿಷಯಗಳು ಹರಡಿರುವುದು ಮತ್ತು ಪ್ಲಾಟ್‌ಫಾರ್ಮ್ ಕಾರ್ಯಾಚರಣೆಯಲ್ಲಿ ಉಂಟಾದ ಲೋಪಗಳ ಕುರಿತಂತೆ ಮೆಟಾ ಸಿಇಒ ಮಾರ್ಕ್

ಜುಕರ್‌ಬರ್ಗ್ (Mark Zuckerberg) ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ಲಾಟ್‌ಫಾರ್ಮ್‌ಗಳ ಹೊಣೆಗಾರಿಕೆ ಮತ್ತು ಕಂಟೆಂಟ್ ನಿಯಂತ್ರಣಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆದಿದೆಯಾದರೂ, ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ತೆರವಿನ ಕುರಿತು ಯಾವುದೇ ಪ್ರಸ್ತಾಪವಾಗಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹಾಗೂ ಮೆಟಾ ಸಂಸ್ಥೆಯ ಜಾಗತಿಕ ನಾಯಕರ ನಡುವೆ ನಡೆದ ಸಭೆಯಲ್ಲಿ ಈ ಕ್ಷಮೆಯಾಚನೆ ಬಂದಿದೆ. ಭಾರತೀಯ ಕಾಯ್ದೆಗಳ ಪಾಲನೆ ಮತ್ತು ಹಾನಿಕಾರಕ ಕಂಟೆಂಟ್‌ಗಳನ್ನು ನಿರ್ವಹಿಸುವಲ್ಲಿ ತಪ್ಪುಗಳಾಗಿರುವುದನ್ನು ಮೆಟಾ ಒಪ್ಪಿಕೊಂಡಿದ್ದು, ಈ ಕುರಿತು ವಿಷಾದ ವ್ಯಕ್ತಪಡಿಸಿದೆ.
ಸಭೆಯ ವೇಳೆ ಕೇಂದ್ರ ಸರ್ಕಾರದ ಅಧಿಕಾರಿಗಳು, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಲಭ್ಯವಿರುವ ಸೇಫ್ ಹಾರ್ಬರ್ ರಕ್ಷಣೆಯನ್ನು ಮೆಟಾ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಮೆಟಾದ ಆಲ್ಗಾರಿದಮ್‌ಗಳು ಯಾವ ಕಂಟೆಂಟ್ ಯಾರಿಗೆ ತಲುಪಬೇಕು ಮತ್ತು ಪ್ರದರ್ಶನಗೊಳ್ಳಬೇಕು ಎಂಬುದನ್ನು ಸ್ವತಃ ನಿರ್ಧರಿಸುವುದರಿಂದ, ಸಂಸ್ಥೆಯು ಮಧ್ಯವರ್ತಿ (Intermediary) ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಹಾಗೂ ಸೇಫ್ ಹಾರ್ಬರ್ ರಕ್ಷಣೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಾಗಿ ತಿಳಿಸಿದೆ.
ಇದೇ ವೇಳೆ ಸಂಸ್ಥೆಯ ವಹಿವಾಟು ವಿಧಾನಗಳ ಕುರಿತೂ ಚರ್ಚೆ ನಡೆದಿದ್ದು, ನಿರ್ದಿಷ್ಟ ಮಾದರಿಯ ಕಂಟೆಂಟ್‌ಗಳನ್ನು ಬೂಸ್ಟ್ ಮಾಡಲು ದೊಡ್ಡ ಪ್ರಮಾಣದ ಹಣವನ್ನು ವಿನಿಯೋಗಿಸಿರುವುದನ್ನು ಮೆಟಾ ಒಪ್ಪಿಕೊಂಡಿದೆ ಹಾಗೂ ಆ ನಿರ್ಧಾರಗಳ ಬಗ್ಗೆಯೂ ವಿಷಾದ ವ್ಯಕ್ತಪಡಿಸಿದೆ.

ಜುಕರ್‌ಬರ್ಗ್ ಕ್ಷಮೆಗೆ ನಿಶಿಕಾಂತ್ ದುಬೆ ಪಟ್ಟು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ವಿಡಿಯೋವನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದ ಘಟನೆಗೆ ಸಂಬಂಧಿಸಿದಂತೆ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ವೈಯಕ್ತಿಕವಾಗಿ ಕ್ಷಮೆಯಾಚಿಸಬೇಕು ಎಂದು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಕಾಯಂ ಸಮಿತಿಯ ಅಧ್ಯಕ್ಷ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸೋಮವಾರ ಆಗ್ರಹಿಸಿದ್ದರು. ಮೆಟಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಸುದೀರ್ಘ ಸಭೆಯ ನಂತರ ಮಾತನಾಡಿದ ದುಬೆ, ಪ್ರಧಾನಿ ಮೋದಿಯವರ ವಿಡಿಯೋ ಸರಿಸುಮಾರು 5 ಗಂಟೆಗಳ ಕಾಲ (ಅರ್ಧರಾತ್ರಿ 12:30 ರಿಂದ ಬೆಳಿಗ್ಗೆ 5:00 ರವರೆಗೆ) ಫೇಸ್‌ಬುಕ್‌ನಲ್ಲಿ ಲಭ್ಯವಿರಲಿಲ್ಲ ಎಂಬುದನ್ನು ಮೆಟಾ ಒಪ್ಪಿಕೊಂಡಿದೆ ಎಂದು ತಿಳಿಸಿದರು.

ಪ್ರಧಾನಿ ವಿಡಿಯೋ ತೆರವು!...

ಇನ್ನೊಂದೆಡೆ, ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಜಿನ್ ಝೆಡ್ (Gen Z) ಸಂಪರ್ಕ ಅಭಿಯಾನದ ವಿಡಿಯೋವನ್ನು ತೆರವುಗೊಳಿಸಿರುವ ಕುರಿತು ಮತ್ತು ಬಾಲ ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಪರಿಣಾಮಕಾರಿಯಾಗಿ ತಡೆಯಲು ಮೆಟಾ ವಿಫಲವಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಸುಮಾರು 45 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ, ಸರ್ಕಾರದ ನಿರ್ದೇಶನಗಳನ್ನು ಪಾಲಿಸದಿರುವುದು ಮತ್ತು ಮೆಟಾ ವೇದಿಕೆಗಳಲ್ಲಿ ಅನುಚಿತ ಕಂಟೆಂಟ್ ಹರಡುತ್ತಿರುವ ವಿಷಯಗಳ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net