ಸುವೇಂದು ಸರ್ಕಾರದ ವಿರುದ್ಧ ಮಮತಾ ಯುದ್ದ! ಅಭಿಷೇಕ್, ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ: ನಾಳೆ ಕೋಲ್ಕತ್ತಾದಲ್ಲಿ ಬೃಹತ್ ​ಪ್ರತಿಭಟನೆಗೆ ಕರೆ ಕೊಟ್ಟ ದೀದಿ! Mamata Protest in Kolkata

ಸುವೇಂದು ಸರ್ಕಾರದ ವಿರುದ್ಧ ಮಮತಾ ಯುದ್ದ! ಅಭಿಷೇಕ್, ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ: ನಾಳೆ ಕೋಲ್ಕತ್ತಾದಲ್ಲಿ ಬೃಹತ್ ​ಪ್ರತಿಭಟನೆಗೆ ಕರೆ ಕೊಟ್ಟ ದೀದಿ!
ಸುವೇಂದು ಸರ್ಕಾರದ ವಿರುದ್ಧ ಮಮತಾ ಯುದ್ದ! ಅಭಿಷೇಕ್, ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ: ನಾಳೆ ಕೋಲ್ಕತ್ತಾದಲ್ಲಿ ಬೃಹತ್ ​ಪ್ರತಿಭಟನೆಗೆ ಕರೆ ಕೊಟ್ಟ ದೀದಿ!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ರಾಜಕೀಯ ಜಿದ್ದಾಜಿದ್ದಿ ತಾರಕಕ್ಕೇರಿದೆ. ಚುನಾವಣೆ ಮುಕ್ತಾಯಗೊಂಡಿದ್ದರೂ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಮತ್ತು ಘರ್ಷಣೆಗಳು ನಿಲ್ಲುತ್ತಿಲ್ಲ. ತೃಣಮೂಲ ಕಾಂಗ್ರೆಸ್ (Mamata Protest in Kolkata) ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಜೂನ್ 2ರ ಮಂಗಳವಾರದಂದು ಕೋಲ್ಕತ್ತಾದಲ್ಲಿ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ.
ಕೋಲ್ಕತ್ತಾದ ಎಸ್ಪ್ಲನೇಡ್‌ನಲ್ಲಿರುವ ರಾಣಿ ರಾಶ್ಮೋನಿ ಅವೆನ್ಯೂದಲ್ಲಿ ಈ ಬೃಹತ್ ಧರಣಿ ಸತ್ಯಾಗ್ರಹ ಆಯೋಜಿಸಲಾಗಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ ಸೇರಿದಂತೆ ಹಲವು ಹಿರಿಯ ನಾಯಕರ ಮೇಲೆಯೇ ಹಲ್ಲೆ ಯತ್ನಗಳು ನಡೆದಿರುವುದರಿಂದ ಟಿಎಂಸಿ ಕಾರ್ಯಕರ್ತರು ತೀವ್ರ ಆಕ್ರೋಶಗೊಂಡಿದ್ದು, ರಾಜ್ಯಾದ್ಯಂತ ರಾಜಕೀಯ ವಾತಾವರಣ ಬಿಸಿಯಾಗಿದೆ.

ಅಭಿಷೇಕ್ ಬ್ಯಾನರ್ಜಿ ಮೇಲೆ ಕಲ್ಲು, ಮೊಟ್ಟೆ ಎಸೆತ: ಕಣ್ಣಿಗೆ ಗಾಯ

ಮೇ 30 ರಂದು ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್‌ಪುರದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಒಳಗಾದ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲು ತೆರಳಿದ್ದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಭೀಕರ ದಾಳಿ ನಡೆದಿತ್ತು. ಈ ಘಟನೆಯನ್ನು ಖಂಡಿಸಿ ಭಾನುವಾರ ರಾಜ್ಯದ ಹಲವು ಭಾಗಗಳಲ್ಲಿ ಟಿಎಂಸಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಅತ್ಯಂತ ವ್ಯವಸ್ಥಿತವಾಗಿ ನಡೆದ ಸಂಚು. ಅಭಿಷೇಕ್ ಬ್ಯಾನರ್ಜಿ ಅವರ ವಾಹನದ ಮೇಲೆ ಇಟ್ಟಿಗೆ, ಕಲ್ಲು ಮತ್ತು ಮೊಟ್ಟೆಗಳನ್ನು ಎಸೆಯಲಾಗಿದೆ. ಈ ದಾಳಿಯಲ್ಲಿ ಅವರ ಕಣ್ಣಿನ ಬಳಿ ಬಲವಾದ ಗಾಯವಾಗಿದೆ. ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಟಿಎಂಸಿ ನಾಯಕರ ಮನೆಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ಪ್ರತಿಭಟನಾ ನಿರತ ಟಿಎಂಸಿ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿರುವ ಆಡಳಿತಾರೂಢ ಬಿಜೆಪಿ, ಇದು ಯಾವುದೇ ರಾಜಕೀಯ ದಾಳಿಯಲ್ಲ. ಹಿಂದಿನ ಟಿಎಂಸಿ ಸರ್ಕಾರದ ಆಡಳಿತದಿಂದ ಬೇಸತ್ತಿದ್ದ ಸ್ಥಳೀಯ ನಿವಾಸಿಗಳು ತಮಗಾದ ಅನ್ಯಾಯಕ್ಕೆ ಆಕ್ರೋಶ ಹೊರಹಾಕಿದ್ದಾರಷ್ಟೇ ಎಂದು ತಿರುಗೇಟು ನೀಡಿದೆ.

ಕೊಲೆ ಯತ್ನದ ಆರೋಪ ಮಾಡಿದ ಸಂಸದ ಕಲ್ಯಾಣ್ ಬ್ಯಾನರ್ಜಿ

ಸೋನಾರ್‌ಪುರ ಘಟನೆಯ ಬೆನ್ನಲ್ಲೇ, ಹೂಗ್ಲಿ ಜಿಲ್ಲೆಯ ಚಂದಿತಾಲಾ ಪೊಲೀಸ್ ಠಾಣೆಯ ಬಳಿ ಭಾನುವಾರ ಸಂಜೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲೂ ಹಲ್ಲೆ ನಡೆದಿದೆ. ಚುನಾವಣೋತ್ತರ ಹಿಂಸಾಚಾರದ ಕುರಿತು ಪೊಲೀಸರಿಗೆ ದೂರು ನೀಡಲು ಹೋಗುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ.
ಇದನ್ನು ಕೊಲೆ ಯತ್ನ ಎಂದು ಕರೆದಿರುವ ಟಿಎಂಸಿ ಸಂಸದ, ನೂತನ ಸರ್ಕಾರದ ಪ್ರಚೋದನೆಯಿಂದಲೇ ಇವೆಲ್ಲವೂ ನಡೆಯುತ್ತಿವೆ ಎಂದಿದ್ದಾರೆ. ಈ ಘಟನೆ ತಿಳಿಯುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ಅವರು ಸ್ವತಃ ಕಲ್ಯಾಣ್ ಬ್ಯಾನರ್ಜಿ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಧೈರ್ಯ ತುಂಬಿದ್ದಾರೆ. ಹಿರಿಯ ನಾಯಕ ಮದನ್ ಮಿತ್ರಾ ಮಾತನಾಡಿ, ಬಿಜೆಪಿಗೆ ದೇಶದಲ್ಲಿ ಯಾವುದೇ ವಿರೋಧ ಪಕ್ಷ ಇರಬಾರದು ಎಂಬ ಹಪಾಹಪಿತನವಿದೆ. ಇಂತಹ ಗೂಂಡಾಗಿರಿಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯಬೇಕು ಎಂದು ಕಿಡಿಕಾರಿದ್ದಾರೆ.

ಜಾರ್ಖಂಡ್ ಸಿಎಂ ಬೆಂಬಲ: ಕೇಂದ್ರದ ವಿರುದ್ಧ ಅಭಿಷೇಕ್ ಆಕ್ರೋಶ

ದಾಳಿಯ ಬಳಿಕ X ನಲ್ಲಿ ಪೋಸ್ಟ್ ಮಾಡಿರುವ ಅಭಿಷೇಕ್ ಬ್ಯಾನರ್ಜಿ, ತಮಗೆ ಬೆಂಬಲ ಸೂಚಿಸಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ವಿಪಕ್ಷದ ಧ್ವನಿಯನ್ನು ಅಡಗಿಸಲು ರಾಜ್ಯ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ನಾಯಕರು ಜಂಟಿಯಾಗಿ ನಡೆಸುತ್ತಿರುವ ಪ್ರಾಯೋಜಿತ ದಾಳಿ ಇದಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಐದು ಜನ ಆರೋಪಿಗಳ ಬಂಧನ

ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಗೆ ಸಂಬಂಧಿಸಿದಂತೆ ಸೋನಾರ್‌ಪುರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಐವರು ಸ್ಥಳೀಯ ನಿವಾಸಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಆಕಾಶ್ ಗಯಾನ್, ಕಾಜಲ್ ದಾಸ್, ದೇಬಾಶಿಶ್ ದತ್ತಾ, ನಿರ್ಮಾಲ್ಯ ಸೇನ್‌ಗುಪ್ತಾ ಮತ್ತು ತಪನ್ ಮೈತಿ ಎಂದು ಗುರುತಿಸಲಾಗಿದೆ. ಇವರನ್ನು ಬರುಯಿಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆಯಲಿರುವ ಧರಣಿ ಸತ್ಯಾಗ್ರಹವು ಬಂಗಾಳದ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡುವ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net