Mallikarjun Kharge vs Kiren Rijiju | ಜಗದೀಪ್ ಧನಕರ್ ಪ್ರಕರಣ ಉಲ್ಲೇಖ; ಖರ್ಗೆಗೆ ಕೇಂದ್ರ ಸಚಿವರ ತಿರುಗೇಟು

Mallikarjun Kharge vs Kiren Rijiju
Mallikarjun Kharge vs Kiren Rijiju
Published on
ದೆಹಲಿ: ಉಪರಾಷ್ಟ್ರಪತಿಗಳಾಗಿ ಆಯ್ಕೆಯಾದ ಬಳಿಕ ತಮ್ಮ ಮೊದಲ ಅಧಿವೇಶನದಲ್ಲಿ ಭಾಗವಹಿಸಿರುವ ಸಿ.ಪಿ. ರಾಧಾಕೃಷ್ಣನ್​​ರನ್ನು ರಾಜ್ಯಸಭೆಯ ನೂತನ ಅಧ್ಯಕ್ಷರನ್ನಾಗಿ ಸ್ವಾಗತಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಳೆದ ಅಧಿವೇಶನ ಮೊದಲ ದಿನವೇ ಹಠಾತ್​ ರಾಜೀನಾಮೆ ನೀಡಿದ್ದ ಜಗದೀಪ್ ಧನಕರ್ ನಿರ್ಗಮನವನ್ನು ಉಲ್ಲೇಖಿಸಿದ್ದಾರೆ.
ರಾಜ್ಯಸಭೆಯ ವಿಪಕ್ಷ ನಾಯಕ ಖರ್ಗೆ ಅವರ ಹೇಳಿಕೆಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದು, ಈ ಹಿಂದೆ ಧನಕರ್​ ವಿರುದ್ಧ ವಿಪಕ್ಷಗಳು ಬಳಸಿದ ಪದಗಳನ್ನು ಟೀಕಿಸಿದ್ದಾರೆ.
ಧನಕರ್​ ಅವರಿಗೆ ಭವ್ಯವಾದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲು ಸದನಕ್ಕೆ ಅವಕಾಶ ಸಿಗಲಿಲ್ಲ ಎಂದಿರುವ ಖರ್ಗೆ, ಅವರಿಗೆ ವಿದಾಯ ಹೇಳಲು ಸದನದ ಸದಸ್ಯರಿಗೆ ಅವಕಾಶ ಸಿಗದಿದ್ದಕ್ಕೆ ನನಗೆ ನಿರಾಶೆ ಇದೆ. ಅದೇನೇ ಇರಲಿ, ಇಡೀ ವಿರೋಧ ಪಕ್ಷದ ಪರವಾಗಿ ಅವರಿಗೆ ಉತ್ತಮ ಆರೋಗ್ಯ ಲಭ್ಯವಾಗಲಿ ಎಂದು ಆಶೀಸುವುದಾಗಿ ತಿಳಿಸಿದರು. ಈ ಹಿಂದಿನ ರಾಜ್ಯಸಭಾ ಸಭಾಪತಿ ಹುದ್ದೆಯಿಂದ ಅನಿರೀಕ್ಷಿತ ನಿರ್ಗಮನವನ್ನು ಉಲ್ಲೇಖಿಸಲು ನನಗೆ ನಿರ್ಬಂಧವಿದೆ ಎಂದು ಆಕ್ಷೇಪಿಸುವುದಿಲ್ಲ ಎಂಬ ನಂಬಿಕೆ ಇದೆ, ಸಭಾಪತಿಗಳ ಸ್ಥಾನದಲ್ಲಿ ಕುಳಿತಿರುವವರು ಇಡೀ ಸದನದ ಪಾಲಕರಾಗಿರುವುದರಿಂದ, ಸರ್ಕಾರ ಮತ್ತು ವಿಪಕ್ಷಕ್ಕೆ ಸಮಾನವಾಗಿ ಸೇರಿದವರು ಎಂದರು.

ಏನಿದು ಘಟನೆ...

ಹಿಂದಿನ ಉಪರಾಷ್ಟ್ರಪತಿ ಧನಕರ್, ಆರೋಗ್ಯದ ಕಾರಣ ನೀಡಿ ಜುಲೈ 22 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು ಅವರು ಈ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಬರೆದಿದ್ದರು. ಧನಕರ್​ ಅವರ ಈ ನಿರ್ಗಮನಕ್ಕೆ ಆರೋಗ್ಯ ಕಾರಣಗಳಿಗಿಂತ, ಬೇರೆ ಕಾರಣಗಳಿವೆ ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಒಕ್ಕೂಟ ಆರೋಪಿಸಿವೆ. 

ಖರ್ಗೆಗೆ ಕಿರಣ್ ರಿಜಿಜು ತಿರುಗೇಟು...

ಖರ್ಗೆ ಅವರ ಹೇಳಿಕೆಗೆ ಕಿಡಿ ಕಾರಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಧನಕರ್​ ಅವರ ರಾಜೀನಾಮೆಯನ್ನು ಈ ರೀತಿಯ ಗಂಭೀರ ಸಂದರ್ಭದಲ್ಲಿ ಪ್ರಸ್ತಾಪಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಈ ಹಂತದಲ್ಲಿ ಪ್ರಸ್ತಾಪಿಸಲು ಅಗತ್ಯವಿಲ್ಲದ ಪ್ರಕರಣವನ್ನು ವಿರೋಧ ಪಕ್ಷದ ನಾಯಕರು ಏಕೆ ಉಲ್ಲೇಖಿಸಿದರು? ಈ ಹಿಂದೆ ವಿಪಕ್ಷ ನಾಯಕರುಗಳು ಧನಕರ್​ ಅವರ ವಿರುದ್ಧ ಬಳಸಿದ ಭಾಷೆಯನ್ನು ನಾನು ಸದನಕ್ಕೆ ನೆನಪಿಸಲು ಬಯಸುತ್ತೇನೆ. ಆಗ ನೀವು ಬಳಸಿದ ಅಮಾನವೀಯ ಪದಗಳು ಮತ್ತು ನೀವು ಸಲ್ಲಿಸಿದ ಪದಚ್ಯುತಗೊಳಿಸುವ ನಿರ್ಣಯದ ಪ್ರತಿ ಇನ್ನೂ ನಮ್ಮಲ್ಲಿದೆ, ನಾವು ಅದ್ಯಾವುದನ್ನು ಮರೆತಿಲ್ಲ ಎಂದು ರಿಜಿಜು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net