ಮಳವಳ್ಳಿ ಪೊಲೀಸ್​ ಠಾಣಾ ಪ್ರಕರಣ: ಕರ್ನಾಟಕ ಮಾಹಿತಿ ಆಯೋಗದ ಇತಿಹಾಸದಲ್ಲೇ ಅಪರೂಪದ ತೀರ್ಪು;ಸಿಸಿಟಿವಿ ಹಾರ್ಡ್‌ಡಿಸ್ಕ್ ಎಫ್‌ಎಸ್‌ಎಲ್‌ಗೆ, ಎಎಸ್ಪಿ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ಆಯೋಗ! Karnataka Information Commission

ಕರ್ನಾಟಕ ಮಾಹಿತಿ ಆಯೋಗದ ಇತಿಹಾಸದಲ್ಲೇ ಅಪರೂಪದ ತೀರ್ಪು!
ಕರ್ನಾಟಕ ಮಾಹಿತಿ ಆಯೋಗದ ಇತಿಹಾಸದಲ್ಲೇ ಅಪರೂಪದ ತೀರ್ಪು!
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಮಾಹಿತಿ ಆಯೋಗದ ಇತಿಹಾಸದಲ್ಲೇ ಅಪರೂಪದ ತೀರ್ಪು!
  • ಮಳವಳ್ಳಿ ಠಾಣೆಗಳ ಸಿಸಿಟಿವಿ ಹಾರ್ಡ್‌ಡಿಸ್ಕ್ ಎಫ್‌ಎಸ್‌ಎಲ್‌ಗೆ ಕಳುಹಿಸಿ ಅರ್ಜಿದಾರನಿಗೆ ದೃಶ್ಯಾವಳಿ ಕೊಡಿಸಿದ ಆಯೋಗ
  • ಎಎಸ್ಪಿ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು
ಬೆಂಗಳೂರು: ಪೊಲೀಸ್ ಠಾಣೆಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಹಾರ್ಡ್ಡಿಸ್ಕ್ ಪರಿಶೀಲನೆ ಒಳಪಡಿಸಿ ಲಭ್ಯ ಮಾಹಿತಿಯನ್ನು ಮೇಲ್ಮನವಿದಾರರಿಗೆ ಕೊಡಿಸಿರುವ ವಿಶೇಷ ಪ್ರಕರಣ ಕರ್ನಾಟಕ ಮಾಹಿತಿ ಆಯೋಗದಲ್ಲಿ (Karnataka Information Commission) ವರದಿಯಾಗಿದೆ. ಈ ಪ್ರಕರಣದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೂ ಶಿಫಾರಸು ಮಾಡಿದೆ. 
ಮಂಡ್ಯ ಜಿಲ್ಲೆಯ ಮಳವಳ್ಳಿಯ ನಾಗರಾಜು ಎಂ.ಆರ್ ಎನ್ನುವವರು ಅಲ್ಲಿನ ಡಿವೈಎಸ್‌ಪಿ ಅವರಿಗೆ 2022 ರ ಆಗಸ್ಟ್ 4 ರಂದು ಅರ್ಜಿ ಸಲ್ಲಿಸಿ, ಮಳವಳ್ಳಿಯ ಪುರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ 10-10-2021 ರಿಂದ 31-03-2022 ರ ವರೆಗಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ನೀಡುವಂತೆ ಕೋರಿದ್ದರು. ಪುರ ಹಾಗೂ ಗ್ರಾಮಾಂತರ ಠಾಣೆಯ ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆ 8(1)(ಜೆ) ಪ್ರಕಾರ ನೀಡಲು ಸಾಧ್ಯವಿಲ್ಲವೆಂದು ನಿರಾಕರಿಸಿದ್ದರು. 
ತಮ್ಮ ಸಾರ್ವಜನಿಕ ಪ್ರಾಧಿಕಾರಕ್ಕೆ ಸಂಬಂಧಿಸಿಲ್ಲದ ಮಾಹಿತಿ ಅರ್ಜಿಯನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ನಿಯಮಬದ್ಧವಾಗಿ ವರ್ಗಾವಣೆ ಮಾಡಿ ಅದನ್ನು ಅರ್ಜಿದಾರರ ಗಮನಕ್ಕೂ ತರಬೇಕಾಗಿತ್ತು. ಆದರೆ ಆಗಿನ ಡಿವೈಎಸ್ಪಿ ಅವರು ಈ ವಿಚಾರದಲ್ಲಿ ಕೆಲವೊಂದು ಲೋಪ ಮಾಡಿದ್ದರು. ಮಂಡ್ಯದ ಆಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಥಮ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನಡೆಸಿರಲಿಲ್ಲ.
ಆಗಿನ ಡಿವೈಎಸ್ಪಿ ಹಾಗೂ ಈಗ ಬಳ್ಳಾರಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ನವೀನ್‌ಕುಮಾರ್ ಅವರು ಮಾಹಿತಿ ಹಕ್ಕು ಅರ್ಜಿಯನ್ನು ನಿಯಮಬದ್ಧವಾಗಿ ನಿಯಮ 6(3)ರ ಅಡಿಯಲ್ಲಿ ಪುರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಿರಲಿಲ್ಲ. ಅರ್ಜಿ ವರ್ಗಾವಣೆಯ ಮಾಹಿತಿಯನ್ನು ಅರ್ಜಿದಾರ ನಾಗರಾಜು ಅವರಿಗೂ ನೀಡಿರಲಿಲ್ಲ. ಪುರ ಠಾಣೆಗೆ ಕೇವಲ ಜ್ಞಾಪನ ಮಾತ್ರ ಹೊರಡಿಸಿದ್ದರು. 
ಆದರೂ ಎರಡು ಠಾಣೆಯ ಪೊಲೀಸ್ ನಿರೀಕ್ಷಕರು ಮಾಹಿತಿ ನೀಡಲು ಸಾಧ್ಯವಿಲ್ಲವೆಂಬ ಹಿಂಬರಹ ನೀಡಿದ್ದರು. ಹಿರಿಯ ಅಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ ಹಿಂಬರಹ ನೀಡಿದ್ದಾಗಿಯೂ ಆಯೋಗದ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದರು. ಸಿಸಿ ಕ್ಯಾಮರಾದ ಪುಟೇಜ್ ಕೇವಲ ಆರು ತಿಂಗಳು ಮಾತ್ರ ಇರುತ್ತದೆ ಎಂಬುದು ಪೊಲೀಸ್ ಅಧಿಕಾರಿಗಳ ವಾದವಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ನಾಲ್ಕನೇ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅವರು ಎರಡು ಪೊಲೀಸ್ ಠಾಣೆಯ ಸಿಸಿ ಕ್ಯಾಮರಾಗಳ ಹಾರ್ಡ್​ಡಿಸ್ಕ್​​ ಅನ್ನು  ಎಫ್‌ಎಸ್‌ಎಲ್‌ಗೆ ಕಳುಹಿಸಿ ತನಿಖೆಗೆ ಒಳಪಡಿಸಿ ಅದರಲ್ಲಿ ಲಭ್ಯ ದೃಶ್ಯಾವಳಿಯನ್ನು ಅರ್ಜಿದಾರರಿಗೆ ನೀಡಬೇಕು. ಈ ರೀತಿ ನೀಡುವಾಗ ಅವರು ಠಾಣೆಗೆ ಭೇಟಿ ನೀಡಿದ ಸಂದರ್ಭ ಹಾಗೂ ಅವರನ್ನು ವಿಚಾರಣೆಗೆ ಒಳಪಡಿಸಿದ ದೃಶ್ಯಾವಳಿ ಮಾತ್ರ ನೀಡಬೇಕು, ಕ್ಯಾಮೆರಾದಲ್ಲಿ ದಾಖಲಾಗಿರುವ ಇತರೆ ಮಾಹಿತಿಯನ್ನು ನ್ಯಾಯಾಲಯಗಳ ಆದೇಶಗಳಂತೆ ಮುಸುಕು ಮಾಡಬೇಕೆಂದು ಸೂಚನೆ ನೀಡಿದ್ದರು.
ಮಳವಳ್ಳಿಯ ಹಾಲಿ ಡಿವೈಎಸ್ಪಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಯಶವಂತಕುಮಾರ್ ಅವರು ಎರಡು ಪೊಲೀಸ್ ಠಾಣೆಗಳ ಸಿಸಿ ಕ್ಯಾಮೆರಾಗಳ ಹಾರ್ಡ್​ಡಿಸ್ಕ್​​ ಅನ್ನು  ಬೆಂಗಳೂರಿನ ಮಡಿವಾಳದಲ್ಲಿರುವ  ಎಫ್‌ಎಸ್‌ಎಲ್‌ಗೆ ಸಲ್ಲಿಸಿ ಅದರಲ್ಲಿರುವ ಲಭ್ಯ ದೃಶ್ಯಾವಳಿಗಳ ಮಾಹಿತಿಯನ್ನು ಸಿಡಿಗೆ ವರ್ಗಾವಣೆ ಮಾಡಿ ವೈಜ್ಞಾನಿಕ ವಿಶ್ಲೇಷಣೆಯ ವರದಿಯೊಂದಿಗೆ ಅರ್ಜಿದಾರರಿಗೆ ಮಾಹಿತಿ ನೀಡಲಾಗಿದೆ. 
ಆಯೋಗದ ಇತಿಹಾಸದಲ್ಲಿಯೇ ಸಿಸಿ ಕ್ಯಾಮೆರಾಗಳನ್ನು ಎಫ್‌ಎಸ್‌ಎಲ್ ಪರಿಶೀಲನೆಗೆ ಒಳಪಡಿಸಿ ಅರ್ಜಿದಾರರಿಗೆ ಅದರಲ್ಲಿರುವ ದೃಶ್ಯಾವಳಿಗಳನ್ನು ಕೊಡಿಸಿರುವ ಅಪರೂಪದ ಪ್ರಕರಣ ಇದಾಗಿದೆ. ಆದರೂ ಅರ್ಜಿದಾರರು ಪೂರ್ಣ ಮಾಹಿತಿ ಲಭ್ಯವಾಗಿಲ್ಲವೆಂಬ ಆಕ್ಷೇಪ ವ್ಯಕ್ತಪಡಿಸಿದರೂ ಸಹ ಆಯೋಗದ ಕಾರ್ಯವೈಖರಿಗೆ ತಮ್ಮ ಮೆಚ್ಚುಗೆ ಸೂಚಿಸಿದರು.
ಈ ನಡುವೆ ಬಳ್ಳಾರಿ ಎಎಸ್ಪಿ ನವೀನ್‌ಕುಮರ್ ಅವರು ತಾವು ಅಜಿಯನ್ನು ನಿಯಮಬದ್ಧವಾಗಿಯೇ ವರ್ಗಾವಣೆ ಮಾಡಿರುವುದಾಗಿ ಲಿಖಿತ ಹೇಳಿಕೆ ನೀಡಿದ್ದರಿಂದ ಮಂಡ್ಯ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ತನಿಖೆ ಮಾಡಿ ವರದಿ ನೀಡಲು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಆಯೋಗ ಸೂಚನೆ ನೀಡಿತ್ತು. ಅದರಂತೆ 2006 ರ ಮೇ 5 ಮಂಡ್ಯ ಎಎಸ್ಪಿ ಗಂಗಾಧರಸ್ವಾಮಿ ಅವರು ವರದಿ ನೀಡಿದ್ದು ಅದರಲ್ಲಿ ಮಾಹಿತಿ ಹಕ್ಕು ಅಧಿನಿಯಮ 6(3)ರಡಿ ಪೂರ್ಣ ಅರ್ಜಿ ವರ್ಗಾವಣೆ ಮಾಡಿಲ್ಲ ಕೇವಲ ಜ್ಞಾಪನ ಮಾತ್ರ ಹೊರಡಿಸಿರುತ್ತಾರೆಂದು ಹೇಳಿದ್ದರು. 
ಆದ್ದರಿಂದ ಅರ್ಜಿ ನಿರ್ಲಕ್ಷ್ಯ ಮಾಡಿರುವ ನವೀನ್‌ಕುಮಾರ್ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಲಾಗಿತ್ತು. ಅವರಿಗೆ ನೋಟಿಸ್ ಜಾರಿಯಾಗಿದೆ. ನವೀನ್‌ಕುಮಾರ್ ಅವರು ತಾವು ನಿಯಮಬದ್ಧವಾಗಿಯೇ ಅರ್ಜಿ ವರ್ಗಾವಣೆ ಮಾಡಿರುವುದಾಗಿ ತಮ್ಮ ಸಮಜಾಯಿಷಿಯನ್ನು ಬಳ್ಳಾರಿ ಎಸ್ಪಿ ಹಾಗೂ ಮಾಹಿತಿ ಆಯೋಗಕ್ಕೆ ನೀಡಿದ್ದಾರೆ.
ಅರ್ಜಿ ನಿಯಮಬದ್ಧ ವರ್ಗಾವಣೆ ಇಲ್ಲದೇ ಅಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ ಹಿಂಬರಹ ನೀಡಿದ್ದ ಎರಡು ಠಾಣೆಗಳಲ್ಲಿ ಆಗ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಎರಡು ಠಾಣೆಗಳ ಇನ್ಸ್ಫೆಕ್ಟರ್‌ಗಳಿಗೆ  ಮಾಹಿತಿ ಹಕ್ಕು ಅರ್ಜಿಗಳನ್ನು ನಿರ್ಲಕ್ಷ್ಯ ಮಾಡದಂತೆ ಸೂಕ್ತ ಎಚ್ಚರಿಕೆ ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net