ಕೋನಪ್ಪರೆಡ್ಡಿ, ಉಮಾಪತಿಗೌಡ ವಿರುದ್ಧ ಕಾನೂನು ಕ್ರಮ: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಎಚ್ಚರಿಕೆ- okkaliga sangha

ಎಲ್. ಶ್ರೀನಿವಾಸ್
ಎಲ್. ಶ್ರೀನಿವಾಸ್
Published on
ಬೆಂಗಳೂರು: ಕಂಪ್ಯೂಟರ್ ಆಪರೇಟರ್‌ಗಳ ನೇಮಕಾತಿ ಮತ್ತು ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಳ್ಳು ಆರೋಪ ಮಾಡಿರುವ ಸಂಘದ ನಿರ್ದೇಶಕರಾದ ಕೋನಪ್ಪರೆಡ್ಡಿ ಮತ್ತು ಉಮಾಪತಿ ಶ್ರೀನಿವಾಸಗೌಡ ವಿರುದ್ಧ ಕಾನೂನಿನ ಪ್ರಕಾರವೇ ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಡೆಂಟಲ್ ಕಾಲೇಜಿನ ಸಿಬ್ಬಂದಿಗೆ ವೇತನ ಶ್ರೇಣಿ ನಿಗದಿ, ಆಸ್ಪತ್ರೆಯ ‘ಬಿ’ ಬ್ಲಾಕ್ ನಿರ್ಮಾಣ ಕಾಮಗಾರಿ, ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬೋಧಕ ಸಿಬ್ಬಂದಿ ನೇಮಕಾತಿ ಮತ್ತು 60 ಕಂಪ್ಯೂಟರ್ ಆಪರೇಟರ್‌ಗಳ ನೇಮಕಾತಿ ಸಂಬಂಧ ಕೋನಪ್ಪರೆಡ್ಡಿ ಆರೋಪಿಸಿದ್ದಾರೆ. ಆದರೆ ಆ ಸಂದರ್ಭದಲ್ಲಿ ಅವರೇ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ನಿರ್ಣಯ ತೆಗೆದುಕೊಂಡಿದ್ದರು. ವೇತನ ಶ್ರೇಣಿ ನಿಗದಿ ಮಾಡಿದ್ದಾಗ ಉಮಾಪತಿ ಶ್ರೀನಿವಾಸಗೌಡ ಖಜಾಂಚಿಯಾಗಿದ್ದರು. ಇದೀಗ, ನಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡುವ ಮೂಲಕ ಕಳ್ಳ-ಪೊಲೀಸ್ ಆಟ ಆಡುತ್ತಿದ್ದಾರೆ. ಮುಂದಿನ ಕಾರ್ಯಕಾರಿ ಸಮಿತಿಯಲ್ಲಿ ನಿರ್ದೇಶಕರ ಜತೆ ಚರ್ಚಿಸಿ ಅವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಕೋನಪ್ಪರೆಡ್ಡಿ, ಅವೈಜ್ಞಾನಿಕವಾಗಿ ಡೆಂಟಲ್ ಕಾಲೇಜಿನ ವೇತನ ಶ್ರೇಣಿ ಮತ್ತು ಎಜಿಪಿ ನಿಗದಿಪಡಿಸಿ ಸಂಘಕ್ಕೆ 5.06 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ. ಆಸ್ಪತ್ರೆ ‘ಬಿ’ ಬ್ಲಾಕ್ ನಿರ್ಮಾಣ ಕಾಮಗಾರಿಯನ್ನು ನಕಲಿ ಬ್ಯಾಂಕ್ ಗ್ಯಾರಂಟಿ ಸಲ್ಲಿಸಿರುವ ಕೆವಿಆರ್ ಸಂಸ್ಥೆಯ ಜತೆಗೆ ಅವರೇ ಕರಾರು ಒಪ್ಪಂದ ಮಾಡಿಕೊಂಡಿದ್ದರು. ಯಾವುದೇ ಕಾಮಗಾರಿ ಮಾಡದಿದ್ದರೂ ಕೆವಿಆರ್‌ಗೆ ಮುಂಗಡವಾಗಿ 1.92 ಕೋಟಿ ರೂ. ಹಣ ನೀಡಿರುವ ಬಗ್ಗೆ ಸಹಕಾರ ಇಲಾಖೆಯ ಜಂಟಿ ನಿಬಂಧಕರಿಗೆ ಕೋನಪ್ಪರೆಡ್ಡಿಯೇ ದೂರು ಕೊಟ್ಟಿದ್ದರು. ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯಕ್ಕೆ ಬೇಕಿರುವ ಬೋಧಕ ಸಿಬ್ಬಂದಿ ನೇಮಕಾತಿಗೆ ಅವರೇ ಆದೇಶ ಹೊರಡಿಸಿದ್ದರು. 60 ಕಂಪ್ಯೂಟರ್ ಆಪರೇಟರ್‌ಗಳ ನೇಮಕಾತಿಗೂ ಅವರ ಅವಧಿಯಲ್ಲೇ ಆದೇಶ ಹೊರಡಿಸಲಾಗಿತ್ತು. ಅವ್ಯವಹಾರ ಮತ್ತು ಸಂಘಕ್ಕೆ ಕೆಟ್ಟ ಹೆಸರು ತಂದಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ 2 ಬಾರಿ ಅವರನ್ನು ಅಮಾನತುಗೊಳಿಸಲಾಯಿತು ಎಂದು ದಾಖಲೆಸಮೇತ ಮಾಹಿತಿ ನೀಡಿದರು.
ಸಂಘದ ಗೌರವಾಧ್ಯಕ್ಷ ಕೆಂಚಪ್ಪಗೌಡ, ಖಜಾಂಚಿ ಶ್ರೀಧರ್, ನಿರ್ದೇಶಕರಾದ ಪ್ರಕಾಶ್, ಧರ್ಮೆಶ್, ಮಂಜೇಗೌಡ, ವೆಂಕಟರಾಮೇಗೌಡ, ಹನುಮಂತರಾಯಪ್ಪ, ಲೋಕೇಶ್, ದೇವರಾಜು, ರಾಘವೇಂದ್ರ ಇತರರಿದ್ದರು.
ಸಂಘದ ಗೌರವಕ್ಕೆ ಧಕ್ಕೆ
ರಾಜ್ಯ ಒಕ್ಕಲಿಗರ ಸಂಘಕ್ಕೆ 3 ಕೋಟಿ ರೂ. ಬೆಲೆಬಾಳುವ ಜಮೀನು ನೀಡಿರುವುದಾಗಿ ಉಮಾಪತಿ ಶ್ರೀನಿವಾಸಗೌಡ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರು. ಆದರೆ, ವಾಸ್ತವದಲ್ಲಿ ಸಂಘಕ್ಕೆ ಯಾವುದೇ ಜಮೀನು ಕೊಟ್ಟಿಲ್ಲ. ಊಟದ ಬಿಲ್‌ನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. 400 ಹುದ್ದೆಗಳನ್ನು ನೇಮಕಾತಿ ಮಾಡಲಾಗಿದೆ ಎಂದು ಉಮಾಪತಿ ಶ್ರೀನಿವಾಸಗೌಡ ಮತ್ತು ಎಸ್.ಎಸ್. ರಘುಗೌಡ ಸುಳ್ಳು ಆರೋಪ ಮಾಡಿದ್ದಾರೆ. ಕಂಪ್ಯೂಟರ್ ಹುದ್ದೆಗಳಿಗೆ ನೇಮಕ ಮಾಡಲು ಕೆಲ ಹೆಸರನ್ನು ಅವರಿಬ್ಬರೂ ಶಿಾರಸ್ಸು ಮಾಡಿದ್ದರು. 2026ರ ಏ. 7ರಂದು ಹಾಲಿ ಪದಾಧಿಕಾರಿಗಳ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಲವಾಗಿತ್ತು. ಈ ಬಗ್ಗೆ ಹತಾಶೆಯಿಂದ ಸುಳ್ಳು ಹೇಳಿಕೆ ನೀಡುತ್ತ ಸಂಘದ ಗೌರವವನ್ನೂ ಹಾಳು ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ಆಡಿಯೋ ಬಿಡುಗಡೆ
ಆಸ್ಪತ್ರೆಯ ‘ಬಿ’ ಬ್ಲಾಕ್ ಕಾಮಗಾರಿ ನಿರ್ಮಾಣ ಸಂಬಂಧಿಸಿದಂತೆ ಕೆವಿಆರ್ ಸಂಸ್ಥೆಯಿಂದ ಉಮಾಪತಿ ಶ್ರೀನಿವಾಸಗೌಡ 50 ಲಕ್ಷ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎನ್ನಲಾದ ಆಡಿಯೋವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಿಡುಗಡೆ ಮಾಡಿದರು. ಕೆವಿಆರ್ ಸಂಸ್ಥೆಯವರು ಮತ್ತು ಉಮಾಪತಿ ಶ್ರೀನಿವಾಸಗೌಡ ಸಂಭಾಷಣೆಯ ಆಡಿಯೋ ಇದಾಗಿದೆ. ಈ ಆಡಿಯೋದಲ್ಲಿ ಕಿಕ್‌ಬ್ಯಾಕ್ ಕೊಟ್ಟಿರುವುದು ಪ್ರಸ್ತಾಪವಾಗಿದೆ. ಲಂಚ ತೆಗೆದಿರುವ ಕುರಿತು ಲೋಕಾಯುಕ್ತದಲ್ಲಿ ಅವರ ವಿರುದ್ಧ ದೂರು ಸಲ್ಲಿಸಲಾಗುವುದು. ಹಲವು ರೌಡಿಗಳನ್ನು ಕರೆದುಕೊಂಡು ಬಂದು ಸಂಘದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಂಘದ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಂಪ್ಯೂಟರ್ ಆಪರೇಟರ್‌ಗಳ ಹುದ್ದೆಗಳ ನೇಮಕಾತಿಯಲ್ಲಿ ಯಾರಿಂದಲೂ ನಾನು ಮತ್ತು ನನ್ನ ಪುತ್ರ ನಯಾಪೈಸೆ ಪಡೆದಿಲ್ಲ. ಈ ಬಗ್ಗೆ ಎಲ್ಲಿ ಬೇಕಾದರೂ ಆಣೆ, ಪ್ರಮಾಣ ಮಾಡಲು ಸಿದ್ಧ. ನನ್ನ ಹೆಸರನ್ನು ಕೆಡಿಸಲು ಕೆಲವರು ಷಡ್ಯಂತ್ರ ಮಾಡಿದ್ದಾರೆ. ಸಂಘದ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) ಪ್ರಕಾರವೇ ಕಂಪ್ಯೂಟರ್ ಆಪರೇಟರ್‌ಗಳ ಹುದ್ದೆಗೆ ನೇಮಕ ಮಾಡಿಕೊಂಡಿದ್ದೇವೆ. ಸಂಘಕ್ಕೆ ಇರುವ ಒಳ್ಳೆಯ ಹೆಸರನ್ನು ಕೆಡಿಸುವ ಪ್ರಯತ್ನ ಮಾಡಬಾರದು. ಮುಂದಿನ ದಿನಗಳಲ್ಲಿ ಇಂತಹ ಗೊಂದಲಕ್ಕೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಮಾಡುತ್ತಿದ್ದೇವೆ.
ಎಲ್. ಶ್ರೀನಿವಾಸ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ
ಆಡಳಿತ ಮಂಡಳಿ ಸದಸ್ಯರ ವಿರುದ್ಧ ಪದೇಪದೇ ಅವಿಶ್ವಾಸ ನಿರ್ಣಯ ತರಲಾಗುತ್ತಿದೆ. ಇದರಿಂದ ಸಂಘದ ಆಡಳಿತ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ, ಸಂಘಕ್ಕೂ ಕೆಟ್ಟ ಹೆಸರು ಬರುತ್ತಿದೆ. ಹಾಗಾಗಿ, ಸಂಘದ ಬೈಲಾದಲ್ಲಿ ಕೆಲ ತಿದ್ದುಪಡಿ ತಂದಿದ್ದೇವೆ. ಹೊಸದಾಗಿ ಅಸ್ತಿತ್ವಕ್ಕೆ ಬರುವ ಆಡಳಿತ ಮಂಡಳಿ ಸದಸ್ಯರ ವಿರುದ್ಧ 20 ತಿಂಗಳವರೆಗೆ ಯಾವುದೇ ಅವಿಶ್ವಾಸ ಮಂಡಿಸದಂತೆ ತಿದ್ದುಪಡಿ ಮಾಡಲಾಗಿದೆ.
ಪುಟ್ಟಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ
ಮಂಡ್ಯದವರ ಬಗ್ಗೆ ಉಮಾಪತಿ ಶ್ರೀನಿವಾಸಗೌಡ ಕೀಳಾಗಿ ಮಾತನಾಡಿರುವುದು ಸರಿಯಲ್ಲ. ಅವರ ಘನತೆಗೆ ತಕ್ಕಂತೆ ಮಾತನಾಡಬೇಕು. ಅಧಿಕಾರದಲ್ಲಿದ್ದಾಗ ಹಲವು ವಿಚಾರಗಳನ್ನು ಕೋನಪ್ಪರೆಡ್ಡಿ, ಉಮಾಪತಿ ಶ್ರೀನಿವಾಸಗೌಡ ನಿರ್ಣಯ ತೆಗೆದುಕೊಂಡಿದ್ದರು. ಇದೀಗ, ಅದರ ವಿಚಾರಗಳನ್ನು ಮುಂದಿಟ್ಟುಕೊಂಡು ಅವರೇ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ.
ನೆಲ್ಲಿಗೆರೆ ಬಾಲು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net