ರಾಜ್ಯದಲ್ಲಿ ಹೆಚ್ಚುತ್ತಿರುವ ಇನ್‌ಫ್ಲುಯೆಂಜಾ ಸೋಂಕು: ಈ ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೂಚನೆ! Influenza

ರಾಜ್ಯದಲ್ಲಿ ಹೆಚ್ಚುತ್ತಿರುವ ಇನ್‌ಫ್ಲುಯೆಂಜಾ ಸೋಂಕು: ಈ ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೂಚನೆ! Influenza
ರಾಜ್ಯದಲ್ಲಿ ಹೆಚ್ಚುತ್ತಿರುವ ಇನ್‌ಫ್ಲುಯೆಂಜಾ ಸೋಂಕು: ಈ ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೂಚನೆ! Influenza
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಋತುಮಾನದ ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಸಂಪೂರ್ಣ ಸನ್ನದ್ಧತೆ
  • ರಾಜ್ಯದಲ್ಲಿ ಅಗತ್ಯ ಔಷಧಿಗಳು ಮತ್ತು ಮೂಲಸೌಕರ್ಯಗಳೊಂದಿಗೆ ವೈದ್ಯಕೀಯ ವ್ಯವಸ್ಥೆ ಸಜ್ಜು
  • ಆಗಸ್ಟ್ 22ರವರೆಗೆ ರಾಜ್ಯದಲ್ಲಿ ಒಟ್ಟು 4,212 ಇನ್‌ಫ್ಲುಯೆಂಜಾ ಪಾಸಿಟಿವ್ ಪ್ರಕರಣ ಪತ್ತೆ
  • ಜ್ವರದ ಲಕ್ಷಣವಿದ್ದಲ್ಲಿ ಸಾರ್ವಜನಿಕರು ಸ್ವಯಂ ಔಷಧೋಪಚಾರ ಮಾಡಿಕೊಳ್ಳದಿರಲು ಎಚ್ಚರಿಕೆ
ಬೆಂಗಳೂರು: ಕರ್ನಾಟಕದಲ್ಲಿ ಋತುಮಾನದ ಜ್ವರ ಅಥವಾ ಇನ್‌ಫ್ಲುಯೆಂಜಾ ( Influenza ) ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಸಂಪೂರ್ಣ ಸನ್ನದ್ಧವಾಗಿದ್ದು, ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನಾ ಸಭೆಯನ್ನು ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. 
ಸಾಮಾನ್ಯವಾಗಿ ಪ್ರತಿವರ್ಷ ಜನವರಿಯಿಂದ ಮಾರ್ಚ್ ಹಾಗೂ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಹೆಚ್ಚಾಗುವ ಈ ಸೋಂಕು ಹಬ್ಬುವುದನ್ನು ತಡೆಯಲು ಮತ್ತು ಯಾವುದೇ ರೀತಿಯ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಆರೋಗ್ಯ ವ್ಯವಸ್ಥೆಯು ಸಾಕಷ್ಟು ಮೂಲಸೌಕರ್ಯ ಹಾಗೂ ಅಗತ್ಯ ಔಷಧಿಗಳೊಂದಿಗೆ ಸಜ್ಜಾಗಿದೆ.
ಸಂಯೋಜಿತ ಆರೋಗ್ಯ ಮಾಹಿತಿ ಪೋರ್ಟಲ್ (IHIP) ವರದಿ ಪ್ರಕಾರ, ರಾಜ್ಯದಲ್ಲಿ 2026ರ ಆಗಸ್ಟ್ 22ರವರೆಗೆ 32 ಜಿಲ್ಲೆಗಳಲ್ಲಿ ಒಟ್ಟು 4,212 ಪ್ರಯೋಗಾಲಯ ದೃಢೀಕೃತ ಇನ್‌ಫ್ಲುಯೆಂಜಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ವರ್ಷಗಳಲ್ಲಿ ಅಂದರೆ 2025ರಲ್ಲಿ 4,583 ಮತ್ತು 2024ರಲ್ಲಿ 3,903 ಪ್ರಕರಣಗಳು ದಾಖಲಾಗಿದ್ದಕ್ಕೆ ಹೋಲಿಕೆಯಾಗಿದ್ದು, ರೋಗದ ಹರಡುವಿಕೆಯನ್ನು ನಿಗಾವಿನಲ್ಲಿಡಲು ಸಮಗ್ರ ಅಂಕಿ-ಅಂಶಗಳನ್ನು ವಿಶ್ಲೇಷಿಸಲಾಗುತ್ತಿದೆ.
ರೋಗ ಪತ್ತೆ ಹಚ್ಚುವಿಕೆ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಹಾಗೂ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ದಿಷ್ಟ ಕಣ್ಗಾವಲು ಕೇಂದ್ರಗಳಾಗಿ ಗುರುತಿಸಲಾಗಿದೆ. ಇದರೊಂದಿಗೆ ICMR-NCDC ಪ್ರಯೋಗಾಲಯಗಳ ಮೂಲಕ ಪ್ರಯೋಗಾಲಯ ಆಧಾರಿತ ಕಣ್ಗಾವಲು ಮುಂದುವರಿದಿದ್ದು, ವೈರಲ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳಲ್ಲಿ (VRDL) ಅಗತ್ಯ ಮಾದರಿ ಸಂಗ್ರಹಣೆ ಹಾಗೂ ಸಕಾಲಿಕ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದಾದ್ಯಂತ ಇರುವ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಪಿಪಿಇ ಕಿಟ್‌ಗಳು, ಎನ್‌-95 ಮಾಸ್ಕ್‌ಗಳು ಮತ್ತು ಒಸೆಲ್ಟಮಿವಿರ್ ಔಷಧಗಳನ್ನು ಸಮರ್ಪಕ ಪ್ರಮಾಣದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಐಎಲ್‌ಐ (ILI) ಮತ್ತು ಸಾರಿ (SARI) ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಒದಗಿಸುವ ಕುರಿತು ಆರೋಗ್ಯ ಸಿಬ್ಬಂದಿಗೆ ಅಗತ್ಯ ತರಬೇತಿ ಮತ್ತು ಜಾಗೃತಿಯನ್ನು ನೀಡಲಾಗಿದೆ.
ಸೋಂಕು ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎಲೆಕ್ಟ್ರಾನಿಕ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ನಡೆಸಲಾಗುತ್ತಿದೆ. ಉಸಿರಾಟದ ನೈರ್ಮಲ್ಯವನ್ನು ಕಾಪಾಡುವುದು, ಕೆಮ್ಮುವಾಗ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು ಮತ್ತು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಒತ್ತು ನೀಡಲಾಗುತ್ತಿದ್ದು, ರೋಗಲಕ್ಷಣಗಳಿರುವವರು ಜನಸಂದಣಿ ಸ್ಥಳಗಳಿಗೆ ತೆರಳುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ.

ಋತುಮಾನದ ಜ್ವರದ ಹರಡುವಿಕೆಯನ್ನು ತಡೆಯಲು ಸಾರ್ವಜನಿಕರು ಈ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು

ಮಾಡಬೇಕಾದ್ದು 

* ಸೀನುವಾಗ ಮತ್ತು ಕೆಮ್ಮುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು.
* ಸೋಪು ಮತ್ತು ನೀರಿನಿಂದ ಕೈಗಳನ್ನು ನಿಯಮಿತವಾಗಿ ತೊಳೆಯಬೇಕು.
* ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು.
* ರೋಗಲಕ್ಷಣಗಳಿರುವ ವ್ಯಕ್ತಿಗಳು ಇತರರಿಂದ ಪ್ರತ್ಯೇಕವಾಗಿರುವುದು ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಮಾಡಬಾರದ್ದು

* ಕಣ್ಣು, ಮೂಗು ಮತ್ತು ಬಾಯಿಯನ್ನು ಕೈಗಳಿಂದ ಪದೇಪದೇ ಮುಟ್ಟಬಾರದು.
* ಸ್ವಯಂ-ಔಷಧೋಪಚಾರ (Self-Medication) ಮಾಡಬಾರದು.
* ರೋಗಲಕ್ಷಣಗಳಿರುವ ಸಂದರ್ಭದಲ್ಲಿ ಕೈಕುಲುಕುವುದನ್ನು ತಪ್ಪಿಸಬೇಕು.
* ರೋಗಲಕ್ಷಣಗಳಿರುವಾಗ ಜನಸಂದಣಿ ಇರುವ ಸ್ಥಳಗಳಿಗೆ ತೆರಳಬಾರದು.
* ಬಳಸಿದ ಕರವಸ್ತ್ರ/ನ್ಯಾಪ್ತಿನ್‌ಗಳನ್ನು ಮರುಬಳಕೆ ಮಾಡಬಾರದು.
ಸಾರ್ವಜನಿಕರು ಕಣ್ಣು, ಮೂಗು ಮತ್ತು ಬಾಯಿಯನ್ನು ಪದೇಪದೇ ಮುಟ್ಟದಿರುವುದು, ಸ್ವಯಂ-ಔಷಧೋಪಚಾರ ಮಾಡಿಕೊಳ್ಳದಿರುವುದು ಮತ್ತು ರೋಗಲಕ್ಷಣಗಳು ಕಂಡುಬಂದ ಕೂಡಲೇ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಕೀಯ ಸಲಹೆ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net