ನಾಳೆ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾ. ಸೂರ್ಯಕಾಂತ್: ಪ್ರಕರಣಗಳ ಬಾಕಿ ಕಡಿಮೆ ಮಾಡಲು ಆದ್ಯತೆ | Justice Surya Kant

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಸೂರ್ಯಕಾಂತ್
ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಸೂರ್ಯಕಾಂತ್
Published on
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಸೂರ್ಯಕಾಂತ್(Justice Surya Kant) ಅವರು ಶನಿವಾರ(ನ. 22) ಸುಪ್ರೀಂಕೋರ್ಟ್​ನಲ್ಲಿ ಬಾಕಿ ಇರುವ ಬಹಳ ದೊಡ್ಡ ಪ್ರಮಾಣದ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ತೆರವುಗೊಳಿಸುವುದು ತಮ್ಮ ತಕ್ಷಣದ ಆದ್ಯತೆ ಎಂದು ಹೇಳಿದ್ದಾರೆ.
ನ್ಯಾ. ಕಾಂತ್ ಅವರು ಸೋಮವಾರ(ನ. 24) ಭಾರತದ 53 ನೇ ಮುಖ್ಯ ನ್ಯಾಯಮೂರ್ತಿಯಾಗಿ(ಸಿಜೆಐ) ಅಧಿಕಾರ ವಹಿಸಿಕೊಳ್ಳಲಿದ್ದಾರೆ. 2027 ಫೆಬ್ರವರಿ 9ರವರೆಗೆ ಸೇವೆ ಸಲ್ಲಿಸಲಿದ್ದಾರೆ.
7 ಕೃಷ್ಣ ಮೆನನ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಅನೌಪಚಾರಿಕ ಸಂವಾದ ನಡೆಸಿ ಮಾತನಾಡಿರುವ ಅವರು, ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 90,000 ದಾಟಿದೆ. ನ್ಯಾಯಾಧೀಶರ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಹೈಕೋರ್ಟ್‌ಗಳು ಮತ್ತು ಕೆಳ ನ್ಯಾಯಾಲಯಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಕಾನೂನಿನ ಪ್ರಶ್ನೆಗಳನ್ನು ನಿರ್ಧರಿಸಲು ನಾನು ಆದ್ಯತೆಯ ಮೇಲೆ ಸಂವಿಧಾನ ಪೀಠಗಳನ್ನು ರಚಿಸುತ್ತೇನೆ. ಅಲ್ಲಿಯೂ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡಲು ಕೆಲಸ ಮಾಡ್ತೇನೆ ಎಂದು ತಿಳಿಸಿದ್ದಾರೆ.
ನ್ಯಾಯಾಂಗ ಬಡ್ತಿಗಳು ಮತ್ತು ಸುಧಾರಣೆಗಳ ಕುರಿತು ಮಾತನಾಡಿದ್ದು, ಇಡೀ ದೇಶ ಇಂದು ಮಧ್ಯಸ್ಥಿಕೆಯ ಬಗ್ಗೆ ಮಾತನಾಡುತ್ತಿದೆ. ಮಧ್ಯಸ್ಥಿಕೆಯು ಬಾಕಿ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಖಾಸಗಿ ನಿಗಮಗಳು, ಬಹುರಾಷ್ಟ್ರೀಯ ಕಂಪನಿಗಳು, ಬ್ಯಾಂಕುಗಳು ಇತ್ಯಾದಿಗಳು ಆಂತರಿಕ ಮಧ್ಯವರ್ತಿಗಳಿಗೆ ತರಬೇತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿವೆ. ಮಧ್ಯಸ್ಥಿಕೆಯು ಈ ಸಮಯದ ಅಗತ್ಯವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಸರ್ಕಾರವು ಅತಿದೊಡ್ಡ ದಾವೆದಾರನಾಗಿದ್ದು, ಸೋತ ವಿಷಯಗಳಲ್ಲಿಯೂ ಸಹ ಮೇಲ್ಮನವಿ ಸಲ್ಲಿಸುತ್ತದೆ. ಸರ್ಕಾರ ಮತ್ತು ಅದರ ಸಂಸ್ಥೆಗಳು ಮಧ್ಯಸ್ಥಿಕೆಯನ್ನು ಆರಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತೇನೆ. ಜೊತೆಗೆ ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಧೀಶರ ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ಕುರಿತು, ತಮ್ಮ ವೃತ್ತಿಜೀವನದ ಯಾವುದೇ ಹಂತದಲ್ಲಿ ಒತ್ತಡವನ್ನು ಅನುಭವಿಸಿಲ್ಲ. ಸಮಸ್ಯೆ ಬಂದರೆ ಪರಿಹಾರವೂ ಬರುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net