ಬರಿ 25 ಕೆಜಿ ಸ್ಫೋಟಕ, ಮೋಟಾರ್ ಸೈಕಲ್ ಎಂಜಿನ್! ಇರಾನ್‌ನ ಈ ಡ್ರೋನ್‌ ಶಕ್ತಿಯ ಮುಂದೆ ಫೇಲ್ ಆಯ್ತಾ ಯುಎಸ್​ನ ಬಿಲಿಯನ್ ಡಾಲರ್ ರಕ್ಷಣಾ ಕವಚ..? Shahed Drones

ಬರಿ 25 ಕೆಜಿ ಸ್ಫೋಟಕ, ಮೋಟಾರ್ ಸೈಕಲ್ ಎಂಜಿನ್! ಇರಾನ್‌ನ ಈ  ಡ್ರೋನ್‌ ಶಕ್ತಿಯ ಮುಂದೆ ಫೇಲ್ ಆಯ್ತಾ ಬಿಲಿಯನ್ ಡಾಲರ್ ರಕ್ಷಣಾ ಕವಚ..?
ಬರಿ 25 ಕೆಜಿ ಸ್ಫೋಟಕ, ಮೋಟಾರ್ ಸೈಕಲ್ ಎಂಜಿನ್! ಇರಾನ್‌ನ ಈ ಡ್ರೋನ್‌ ಶಕ್ತಿಯ ಮುಂದೆ ಫೇಲ್ ಆಯ್ತಾ ಬಿಲಿಯನ್ ಡಾಲರ್ ರಕ್ಷಣಾ ಕವಚ..?
Published on
ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಪಡೆಗಳು ಇರಾನ್ ಮೇಲೆ ಯುದ್ಧ ಸಾರಿ 15 ದಿನಗಳು ಕಳೆದಿವೆ. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ಸುಮಾರು 1,400 ಜನರನ್ನು ಅಮೆರಿಕದ ಬಾಂಬ್ ದಾಳಿಗಳು ಬಲಿಪಡೆದಿವೆ. ಟ್ರಂಪ್ ಆಡಳಿತವು ಇರಾನ್ ಅನ್ನು ಬೇಷರತ್ ಶರಣಾಗತಿಗೆ ಒತ್ತಾಯಿಸುತ್ತಿದ್ದರೂ, ಇರಾನ್ ಮಾತ್ರ ತನ್ನ ಅಗ್ಗದ ಆದರೆ ಅತ್ಯಂತ ಪರಿಣಾಮಕಾರಿ ಡ್ರೋನ್(Shahed Drones) ತಂತ್ರದ ಮೂಲಕ ಬಲಿಷ್ಠ ರಾಷ್ಟ್ರಗಳಿಗೆ ನಡುಕ ಹುಟ್ಟಿಸಿದೆ.
ರಷ್ಯಾದ ಯುದ್ಧ ತಂತ್ರಗಳಿಂದ ಪಾಠ ಕಲಿತಿರುವ ಇರಾನ್, ಈಗ ಅಮೆರಿಕದ ಬಿಲಿಯನ್ ಡಾಲರ್ ಬೆಲೆಯ ರಕ್ಷಣಾ ವ್ಯವಸ್ಥೆಗಳನ್ನು ಧೂಳಿಪಟ ಮಾಡುತ್ತಿದೆ.

ಶಾಹೆದ್ ಡ್ರೋನ್‌ಗಳು: ಇರಾನ್‌ನ ಅಸಲಿ ಆಟಗಾರರು

ಇರಾನ್ ತನ್ನ ಪ್ರತಿಕಾರದ ಬೆನ್ನೆಲುಬಾಗಿ ಶಾಹೆದ್ (Shahed) ಎಂಬ ಕಡಿಮೆ ವೆಚ್ಚದ ಡ್ರೋನ್‌ಗಳನ್ನು ಬಳಸುತ್ತಿದೆ. ಈ ಡ್ರೋನ್‌ಗಳ ವಿಶೇಷತೆ ಎಂದರೆ ಇವುಗಳನ್ನು ಮೋಟಾರ್ ಸೈಕಲ್ ಎಂಜಿನ್‌ಗಳಿಂದ ತಯಾರಿಸಲಾಗುತ್ತದೆ ಮತ್ತು ಕೆಲವು ಭಾಗಗಳಿಗೆ ಸ್ಟೈರೋಫೋಮ್ ಬಳಸಲಾಗುತ್ತದೆ. ಇವುಗಳ ಬೆಲೆ ಅಮೆರಿಕದ ಒಂದು ಕ್ಷಿಪಣಿಗಿಂತ ಸಾವಿರ ಪಟ್ಟು ಕಡಿಮೆಯಾಗಿದೆ.
ವೆಚ್ಚದ ಸಮರ: ಅಮೆರಿಕದ ಒಂದು ಪೇಟ್ರಿಯಾಟ್ ಕ್ಷಿಪಣಿಯ ಬೆಲೆ ಸುಮಾರು 4 ಮಿಲಿಯನ್ ಡಾಲರ್. ಆದರೆ ಇರಾನ್‌ನ ಒಂದು ಡ್ರೋನ್ ಬೆಲೆ ಅತ್ಯಲ್ಪ. ಅಗ್ಗದ ಡ್ರೋನ್ ಹೊಡೆಯಲು ಕೋಟ್ಯಂತರ ರೂಪಾಯಿ ಬೆಲೆಯ ಕ್ಷಿಪಣಿ ಬಳಸುವುದು ನೊಣ ಹೊಡೆಯಲು ಬಂದೂಕು ಬಳಸಿದಂತೆ ಎಂದು ತಜ್ಞರು ಬಣ್ಣಿಸಿದ್ದಾರೆ.
ರಡಾರ್‌ಗೆ ಸಿಗದ ಹಕ್ಕಿ: ಇವು ಬ್ಯಾಲಿಸ್ಟಿಕ್ ಕ್ಷಿಪಣಿಗಳಂತೆ ಎತ್ತರದಲ್ಲಿ ಹಾರುವ ಬದಲು, ಸಮುದ್ರದ ಮಟ್ಟಕ್ಕೆ ತೀರ ಹತ್ತಿರದಲ್ಲಿ ಹಾರುತ್ತವೆ. ಇದರಿಂದಾಗಿ ಅಮೆರಿಕದ ಅತ್ಯಾಧುನಿಕ ರಡಾರ್‌ಗಳ ಕಣ್ಣು ತಪ್ಪಿಸುವುದು ಇವುಗಳಿಗೆ ಸುಲಭವಾಗುತ್ತಿದೆ.

ಅಮೆರಿಕದ ಬಿಲಿಯನ್ ಡಾಲರ್ ರಡಾರ್‌ ಮೇಲೆ ದಾಳಿ

ಇರಾನ್‌ನ ಈ ಡ್ರೋನ್ ದಾಳಿಗಳು ಕೇವಲ ಸಾವು-ನೋವು ಸೃಷ್ಟಿಸುತ್ತಿಲ್ಲ, ಬದಲಾಗಿ ಅಮೆರಿಕದ ಕಣ್ಗಾವಲು ವ್ಯವಸ್ಥೆಯನ್ನೇ ಕುರುಡು ಮಾಡುತ್ತಿವೆ. ಕತಾರ್‌ನಲ್ಲಿರುವ ಅಮೆರಿಕದ ಅತಿದೊಡ್ಡ ಮಿಲಿಟರಿ ತಲೆಮಾರು ಅಲ್-ಉದೈದ್ ಮೇಲೆ ನಡೆದ ದಾಳಿಯಲ್ಲಿ, ಬಿಲಿಯನ್ ಡಾಲರ್ ಬೆಲೆಯ AN/FPS-132 ಎಂಬ ಮುನ್ನೆಚ್ಚರಿಕೆ ರಡಾರ್ ವ್ಯವಸ್ಥೆ ಹಾನಿಗೊಳಗಾಗಿದೆ. ಇದು ಅಮೆರಿಕದ ರಕ್ಷಣಾ ವ್ಯೂಹಕ್ಕೆ ಬಿದ್ದ ದೊಡ್ಡ ಪೆಟ್ಟಾಗಿದೆ.

ರಷ್ಯಾದಿಂದ ಕಲಿತ ಯುದ್ಧ ಪಾಠ

ಯುಕ್ರೇನ್ ಯುದ್ಧದಲ್ಲಿ ರಷ್ಯಾವು ಇರಾನ್ ನಿರ್ಮಿತ ಡ್ರೋನ್‌ಗಳನ್ನು ಬಳಸುತ್ತಿದೆ. ಅಲ್ಲಿಂದ ಇರಾನ್ ಒಂದು ಪ್ರಮುಖ ಪಾಠ ಕಲಿತಿದೆ. ಒಂದೇ ಗುರಿಯನ್ನು ಹೊಡೆಯಲು ಡ್ರೋನ್‌ಗಳನ್ನು ಗುಂಪುಗಳಲ್ಲಿ ಕಳುಹಿಸುವ ಬದಲು, ಬೇರೆ ಬೇರೆ ಪಥಗಳಲ್ಲಿ ಕಳುಹಿಸುವುದು. ಇದರಿಂದ ವೈರಿ ದೇಶದ ರಕ್ಷಣಾ ವ್ಯವಸ್ಥೆಗೆ ಯಾವ ದಿಕ್ಕಿನಿಂದ ಡ್ರೋನ್ ಬರುತ್ತಿದೆ ಎಂದು ತಿಳಿಯುವಷ್ಟರಲ್ಲಿ ದಾಳಿ ನಡೆದುಹೋಗಿರುತ್ತದೆ. ಅಷ್ಟೇ ಅಲ್ಲದೆ, ರಷ್ಯಾದ ತಂತ್ರಜ್ಞಾನ ಬಳಸಿ ಈ ಡ್ರೋನ್‌ಗಳು ಶತ್ರುಗಳ ಜಾಮಿಂಗ್ ವ್ಯವಸ್ಥೆಯನ್ನೂ ಎದುರಿಸಬಲ್ಲವು.

ತೈಲ ಸಂಕಟ ಮತ್ತು ಜಾಗತಿಕ ಆತಂಕ

ಇರಾನ್ ಕೇವಲ ಕ್ಷಿಪಣಿಗಳನ್ನು ಹಾರಿಸುತ್ತಿಲ್ಲ, ಬದಲಾಗಿ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ತೈಲ ಸಂಚಾರಕ್ಕೆ ಅಡ್ಡಿಪಡಿಸುತ್ತಿದೆ. ಇದರಿಂದಾಗಿ ಜಾಗತಿಕ ಇಂಧನ ಬೆಲೆಗಳು ಆಕಾಶಕ್ಕೆ ಏರಿವೆ. ದುಬೈ ವಿಮಾನ ನಿಲ್ದಾಣ, ಅಬುಧಾಬಿಯ ತೈಲ ಸಂಸ್ಕರಣಾಗಾರ ಮತ್ತು ಕುವೈತ್ ವಿಮಾನ ನಿಲ್ದಾಣಗಳ ಬಳಿ ಈ ಹೈಟೆಕ್ ಡ್ರೋನ್‌ಗಳು ಈಗಾಗಲೇ ಅಪ್ಪಳಿಸಿವೆ.

ಅಸಲಿ ಬ್ರಹ್ಮಾಸ್ತ್ರ ಇನ್ನೂ ಹೊರಬಂದಿಲ್ಲ!

ತಜ್ಞರ ಪ್ರಕಾರ, ಇರಾನ್ ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇನ್ನೂ ಬಳಸಿಯೇ ಇಲ್ಲ. ಹೈಪರ್ಸಾನಿಕ್ ಕ್ಷಿಪಣಿ ಖಾಸಿಂ ಬಸಿರ್ ಸೇರಿದಂತೆ ಹಲವು ರಹಸ್ಯ ಆಯುಧಗಳು ಇರಾನ್ ಬಳಿ ಇವೆ. ಅಮೆರಿಕದ ದಾಳಿ ತೀವ್ರಗೊಂಡರೆ ಇರಾನ್ ಈ ಬ್ರಹ್ಮಾಸ್ತ್ರಗಳನ್ನು ಪ್ರಯೋಗಿಸುವ ಎಚ್ಚರಿಕೆ ನೀಡಿದೆ.
ಒಟ್ಟಾರೆಯಾಗಿ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಅಮೆರಿಕಕ್ಕೆ ಇರಾನ್‌ನ ಈ ಕಡಿಮೆ ಖರ್ಚಿನ ಯುದ್ಧ ತಂತ್ರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದು ಹಣಕಾಸಿನ ಸಮರವೂ ಹೌದು, ಏಕೆಂದರೆ ಇರಾನ್ ಕಳೆದುಕೊಳ್ಳುತ್ತಿರುವುದು ಅಗ್ಗದ ಡ್ರೋನ್‌ಗಳನ್ನು, ಆದರೆ ಅಮೆರಿಕ ಖರ್ಚು ಮಾಡುತ್ತಿರುವುದು ತನ್ನ ಅಮೂಲ್ಯವಾದ ಬಿಲಿಯನ್ ಡಾಲರ್ ನಿಧಿ ಖಾಲಿಯಾಗುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net