ಅಮೆರಿಕ ಅಧಿಕಾರಿಗಳ ಮೇಲೆಯೇ ಇಸ್ರೇಲ್ ಗೂಢಚರ್ಯೆ?! ಪೆಂಟಗನ್‌ಗೆ ಸೌಂಡ್‌ಲೆಸ್ ಭೀತಿ: ಟ್ರಂಪ್-ನೆತನ್ಯಾಹು ದ್ವೇಷಕ್ಕೆ ಹೊಸ ತಿರುವು! Israel Spying US Officials

ಅಮೆರಿಕ ಅಧಿಕಾರಿಗಳ ಮೇಲೆಯೇ ಇಸ್ರೇಲ್ ಗೂಢಚರ್ಯೆ?! ಪೆಂಟಗನ್‌ಗೆ ಸೌಂಡ್‌ಲೆಸ್ ಭೀತಿ: ಟ್ರಂಪ್-ನೆತನ್ಯಾಹು ದ್ವೇಷಕ್ಕೆ ಹೊಸ ತಿರುವು!
ಅಮೆರಿಕ ಅಧಿಕಾರಿಗಳ ಮೇಲೆಯೇ ಇಸ್ರೇಲ್ ಗೂಢಚರ್ಯೆ?! ಪೆಂಟಗನ್‌ಗೆ ಸೌಂಡ್‌ಲೆಸ್ ಭೀತಿ: ಟ್ರಂಪ್-ನೆತನ್ಯಾಹು ದ್ವೇಷಕ್ಕೆ ಹೊಸ ತಿರುವು!
Published on
ವಾಷಿಂಗ್ಟನ್: ಜಗತ್ತಿನ ಅತ್ಯಂತ ಪ್ರಭಾವಶಾಲಿ ಮಿತ್ರರಾಷ್ಟ್ರಗಳಾದ ಅಮೆರಿಕ ಮತ್ತು ಇಸ್ರೇಲ್(Israel Spying US Officials) ನಡುವಿನ ಸಂಬಂಧದಲ್ಲಿ ಈಗ ಬಿರುಕು ಮೂಡಿದೆ. ಇರಾನ್ ಸಂಘರ್ಷದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳು ಅಮೆರಿಕದ ಉನ್ನತ ಅಧಿಕಾರಿಗಳ ಮೇಲೆ ತೀವ್ರ ನಿಗಾ ಇಟ್ಟಿವೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ 'ಪೆಂಟಗನ್' ಆತಂಕ ವ್ಯಕ್ತಪಡಿಸಿದೆ.
ಅಮೆರಿಕದ ಪ್ರಮುಖ ಸುದ್ದಿ ಸಂಸ್ಥೆ 'ಎನ್‌ಬಿಸಿ ನ್ಯೂಸ್ ವರದಿಯ ಪ್ರಕಾರ, ಪೆಂಟಗನ್‌ನ ರಕ್ಷಣಾ ಗುಪ್ತಚರ ಸಂಸ್ಥೆಯು ಇಸ್ರೇಲ್‌ನಿಂದ ಎದುರಾಗಬಹುದಾದ ಗೂಢಚರ್ಯೆಯ ಅಪಾಯದ ಮಟ್ಟವನ್ನು ಅತ್ಯುನ್ನತ ಶ್ರೇಣಿಯಾದ ಅಪಾಯಕಾರಿ ಮಟ್ಟಕ್ಕೆ ಏರಿಸಿದೆ.

ಬರ್ನರ್ ಫೋನ್‌ಗಳ ಬಳಕೆ, ಹೋಟೆಲ್ ರೂಮಿನಲ್ಲೂ ಸಸ್ಪೆನ್ಸ್!

ಇಸ್ರೇಲ್‌ನ ಇಂಟೆಲಿಜೆನ್ಸ್ ಏಜೆನ್ಸಿಗಳು ಮಾಹಿತಿ ಸಂಗ್ರಹಣೆಯಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಕೆಲಸ ಮಾಡುತ್ತವೆ. ಹೀಗಾಗಿ ಅಮೆರಿಕದ ಅಧಿಕಾರಿಗಳು ಇಸ್ರೇಲ್‌ಗೆ ಭೇಟಿ ನೀಡುವಾಗ ತೀವ್ರ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಹೈ-ಲೆವೆಲ್ ಭೇಟಿಗಳ ಸಮಯದಲ್ಲಿ ಅಧಿಕಾರಿಗಳು ತಮ್ಮ ಖಾಯಂ ಫೋನ್‌ಗಳ ಬದಲಿಗೆ ಒಮ್ಮೆ ಬಳಸಿ ಬಿಸಾಡುವ 'ಬರ್ನರ್ ಫೋನ್‌ಗಳು ಮತ್ತು ತಾತ್ಕಾಲಿಕ ಕಂಪ್ಯೂಟರ್‌ಗಳನ್ನು ಬಳಸುತ್ತಿದ್ದಾರೆ.
ಅಷ್ಟೇ ಅಲ್ಲದೆ, ಇಸ್ರೇಲ್‌ನ ಹೋಟೆಲ್ ರೂಮ್‌ಗಳಲ್ಲಿ ಯಾವುದೇ ಸೂಕ್ಷ್ಮ ಅಥವಾ ರಹಸ್ಯ ವಿಷಯಗಳ ಬಗ್ಗೆ ಚರ್ಚಿಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಧ್ಯಪ್ರಾಚ್ಯದ ಸಂಘರ್ಷಗಳ ಕುರಿತು ಟ್ರಂಪ್ ಸರ್ಕಾರದ ಆಂತರಿಕ ನಿರ್ಧಾರಗಳು ಮತ್ತು ರಣತಂತ್ರಗಳನ್ನು ಕದಿಯಲು ಇಸ್ರೇಲ್ ಹವಣಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಶಂಕಿಸಿದೆ.

7 ಪುಟಗಳ ರಹಸ್ಯ ವರದಿ ಬಿಚ್ಚಿಟ್ಟ ಸ್ಫೋಟಕ ಸತ್ಯ

ಇತ್ತೀಚಿನ ವಾರಗಳಲ್ಲಿ ಡಿಐಎ (DIA) ತನ್ನ ಆಂತರಿಕ ವಲಯದಲ್ಲಿ 7 ಪುಟಗಳ ಸುದೀರ್ಘ ಮೌಲ್ಯಮಾಪನ ವರದಿಯೊಂದನ್ನು ಹಂಚಿಕೊಂಡಿದೆ. ಇಸ್ರೇಲ್‌ನ ತಾಂತ್ರಿಕ ಮತ್ತು ಮಾನವ ಗೂಢಚರ್ಯೆಯ ಸಾಮರ್ಥ್ಯವು ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ ಎಂದು ಈ ವರದಿ ಎಚ್ಚರಿಸಿದೆ.
ಅಂತಾರಾಷ್ಟ್ರೀಯ ರಕ್ಷಣಾ ತಜ್ಞರಾದ ಎಮಿಲಿ ಹಾರ್ಡಿಂಗ್ ಮಾತನಾಡಿ, ಇಸ್ರೇಲ್‌ನ ಗುಪ್ತಚರ ವ್ಯವಸ್ಥೆಯು ಅತ್ಯಂತ ಆಕ್ರಮಣಕಾರಿಯಾಗಿದೆ. ಅಮೆರಿಕ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅವರು ತೀವ್ರ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಈ ಗೂಢಚರ್ಯೆಯ ಭೀತಿಯ ನಡುವೆಯೂ ಉಭಯ ದೇಶಗಳ ನಡುವಿನ ಅಧಿಕೃತ ಇಂಟೆಲಿಜೆನ್ಸ್ ಮಾಹಿತಿ ಹಂಚಿಕೆಗೆ ಯಾವುದೇ ಧಕ್ಕೆಯಾಗಿಲ್ಲ ಎನ್ನಲಾಗಿದೆ.

"ಎಲ್ಲರೂ ನಿಮ್ಮನ್ನು ದ್ವೇಷಿಸುತ್ತಿದ್ದಾರೆ- ನೆತನ್ಯಾಹುಗೆ ಟ್ರಂಪ್ ಖಡಕ್ ವಾರ್ನಿಂಗ್!

ಈ ಗೂಢಚರ್ಯೆಯ ವಿವಾದದ ಬೆನ್ನಲ್ಲೇ ಟ್ರಂಪ್ ಮತ್ತು ನೆತನ್ಯಾಹು ನಡುವಿನ ಫೋನ್ ಸಂಭಾಷಣೆಯೂ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಇರಾನ್ ಜೊತೆ ಕದನ ವಿರಾಮ ಘೋಷಣೆಯಾದ ನಂತರ ಟ್ರಂಪ್ ರಾಜತಾಂತ್ರಿಕ ಮಾತುಕತೆಯ ಮೂಲಕ ಶಾಂತಿ ಸ್ಥಾಪಿಸಲು ಯತ್ನಿಸುತ್ತಿದ್ದಾರೆ. ಆದರೆ ನೆತನ್ಯಾಹು ಮಾತ್ರ ಇರಾನ್ ವಿರುದ್ಧ ಮತ್ತೆ ಮಿಲಿಟರಿ ದಾಳಿ ನಡೆಸಲು ಮುಂದಾಗಿದ್ದಾರೆ.
ಇತ್ತೀಚೆಗೆ ಲೆಬನಾನ್ ರಾಜಧಾನಿ ಬೀರತ್ ಮೇಲೆ ವೈಮಾನಿಕ ದಾಳಿ ನಡೆಸುವುದಾಗಿ ಇಸ್ರೇಲ್ ಬೆದರಿಕೆ ಹಾಕಿದ್ದಾಗ, ಟ್ರಂಪ್ ಫೋನ್ ಮಾಡಿ ನೆತನ್ಯಾಹು ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ನಿಮ್ಮ ಈ ಹಠಮಾರಿ ಧೋರಣೆಯಿಂದಾಗಿ ಜಗತ್ತಿನಲ್ಲಿ ಈಗ ಎಲ್ಲರೂ ನಿಮ್ಮನ್ನು ಮತ್ತು ಇಸ್ರೇಲ್ ಅನ್ನು ದ್ವೇಷಿಸುತ್ತಿದ್ದಾರೆ ಎಂದು ಟ್ರಂಪ್ ನೇರವಾಗಿಯೇ ಎಚ್ಚರಿಸಿದ್ದರು ಎನ್ನಲಾಗಿದೆ. ಮತ್ತೊಂದೆಡೆ, ಅಮೆರಿಕದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯು ಈ ಎಲ್ಲಾ ಗೂಢಚರ್ಯೆಯ ಆರೋಪಗಳನ್ನು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿಹಾಕಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net