ಇಸ್ರೇಲ್​ ಪ್ರಧಾನಿ ಗುಡುಗಿದ ಬೆನ್ನಲ್ಲೇ ಮಣ್ಣು ಪಾಲಾದ ಇರಾನ್ ಅಣು ಕನಸು! ಹತ್ಯೆಯಾದ ವಿಜ್ಞಾನಿಯ ಬಳಿಯಿತ್ತು ಅಪಾಯಕಾರಿ ರಹಸ್ಯ..? Benjamin Netanyahu

ಇಸ್ರೇಲ್​ ಪ್ರಧಾನಿ ಗುಡುಗಿದ ಬೆನ್ನಲ್ಲೇ ಮಣ್ಣು ಪಾಲಾದ ಇರಾನ್ ಅಣು ಕನಸು! ಹತ್ಯೆಯಾದ ವಿಜ್ಞಾನಿಯ ಬಳಿಯಿತ್ತು ಅಪಾಯಕಾರಿ ರಹಸ್ಯ..?
ಇಸ್ರೇಲ್​ ಪ್ರಧಾನಿ ಗುಡುಗಿದ ಬೆನ್ನಲ್ಲೇ ಮಣ್ಣು ಪಾಲಾದ ಇರಾನ್ ಅಣು ಕನಸು! ಹತ್ಯೆಯಾದ ವಿಜ್ಞಾನಿಯ ಬಳಿಯಿತ್ತು ಅಪಾಯಕಾರಿ ರಹಸ್ಯ..?
Published on
ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಜಾಗತಿಕ ವಿನಾಶದ ಅಂಚಿಗೆ ಬಂದು ನಿಂತಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಗುರುವಾರ ರಾತ್ರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಇರಾನ್‌ನ ಉನ್ನತ ಪರಮಾಣು ವಿಜ್ಞಾನಿಯನ್ನು ಹತ್ಯೆ ಮಾಡಲಾಗಿದ್ದು, ಹಲವು ಪ್ರಮುಖ ಅಣು ಕೇಂದ್ರಗಳ ಮೇಲೆ ಭೀಕರ ದಾಳಿ ನಡೆಸಲಾಗಿದೆ ಎಂದು ಘೋಷಿಸಿದ್ದಾರೆ. ಈ ಬೆಳವಣಿಗೆಯು ಇರಾನ್‌ನ ಪರಮಾಣು ಕನಸಿಗೆ ಕೊಡಲಿ ಪೆಟ್ಟು ನೀಡಿದೆ.

ಕೈಗೊಂಬೆ ನಾಯಕನಿಗೆ ನೆತನ್ಯಾಹು ಸವಾಲ್

ಇರಾನ್‌ನ ನೂತನ ಸುಪ್ರೀಂ ಲೀಡರ್ ಅಯತೊಲ್ಲಾ ಮೊಜ್ತಾಬಾ ಖಮೇನಿಯನ್ನು ರೆವಲ್ಯೂಷನರಿ ಗಾರ್ಡ್ಸ್‌ನ ಕೈಗೊಂಬೆ ಎಂದು ಕರೆದ ನೆತನ್ಯಾಹು, ಇರಾನ್ ಜನತೆಗೆ ಹೊಸ ಸಂದೇಶ ನೀಡಿದ್ದಾರೆ. ಸ್ವಾತಂತ್ರ್ಯದ ಹಾದಿ ಹತ್ತಿರದಲ್ಲಿದೆ, ಇಸ್ರೇಲ್ ನಿಮ್ಮೊಂದಿಗಿದೆ. ಆದರೆ ಅಂತಿಮವಾಗಿ ಬದಲಾವಣೆ ನಿಮ್ಮ ಕೈಯಲ್ಲಿದೆ ಎಂದು ಇರಾನ್ ಜನತೆಯನ್ನು ದಂಗೆ ಏಳುವಂತೆ ಪ್ರೇರೇಪಿಸಿದ್ದಾರೆ.
ಕಳೆದ ಫೆಬ್ರವರಿ 28 ರಿಂದ ಆರಂಭವಾದ ಈ ಭೀಕರ ಸಂಘರ್ಷದಲ್ಲಿ ಇರಾನ್‌ನ ಮಾಜಿ ನಾಯಕ ಅಲಿ ಖಮೇನಿ ಹತರಾದ ನಂತರ, ಅವರ ಪುತ್ರ ಮೊಜ್ತಾಬಾ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಇಸ್ರೇಲ್ ದಾಳಿಯಲ್ಲಿ ಇವರು ಗಾಯಗೊಂಡಿದ್ದಾರೆ ಎಂಬ ಶಂಕೆ ಇದ್ದು, ಇದುವರೆಗೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಮಿಲಿಟರಿ ಯಶಸ್ಸಿನ ಘೋಷಣೆ

ಇತ್ತೀಚಿನ ವೈಮಾನಿಕ ದಾಳಿಗಳ ಯಶಸ್ಸನ್ನು ವಿವರಿಸುತ್ತಾ ನೆತನ್ಯಾಹು ಕೆಲವು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಇರಾನ್‌ನ ಉನ್ನತ ಪರಮಾಣು ವಿಜ್ಞಾನಿಯನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್​ ಪಿಎಂ ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ನೆತನ್ಯಾಹು, ಇರಾನ್‌ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮಕ್ಕೆ ಪೂರಕವಾಗಿದ್ದ ಹಲವು ರಹಸ್ಯ ಕೇಂದ್ರಗಳನ್ನು ಇಸ್ರೇಲ್ ಧ್ವಂಸಗೊಳಿಸಿದೆ. ಇರಾನ್‌ನ ಮಿಲಿಟರಿ ಶಕ್ತಿ ಈಗ ದುರ್ಬಲಗೊಂಡಿದೆ ಮತ್ತು ಇಸ್ರೇಲ್ ತನ್ನ ರಕ್ಷಣೆಗೆ ಯಾವುದೇ ಹಂತಕ್ಕೂ ಹೋಗಲು ಸಿದ್ಧವಾಗಿದೆ ಎಂದು ಎಚ್ಚರಿಸಿದ್ದಾರೆ.

ಲೆಬನಾನ್ ಮತ್ತು ಹಿಜ್ಬುಲ್ಲಾಗೆ ಎಚ್ಚರಿಕೆ

ಲೆಬನಾನ್ ಸರ್ಕಾರಕ್ಕೆ ಕಠಿಣ ಸಂದೇಶ ರವಾನಿಸಿದ ಬೆಂಜಮಿನ್, ಹಿಜ್ಬುಲ್ಲಾ ಉಗ್ರರನ್ನು ನಿಯಂತ್ರಿಸದಿದ್ದರೆ ಆ ಪ್ರದೇಶವನ್ನು ಇಸ್ರೇಲ್ ತನ್ನ ಸುಪರ್ದಿಗೆ ತೆಗೆದುಕೊಂಡು ಭದ್ರತೆಯನ್ನು ಖಚಿತಪಡಿಸಿಕೊಳ್ಳಲಿದೆ ಎಂದು ಗುಡುಗಿದ್ದಾರೆ.

ಇರಾನ್ ಎಚ್ಚರಿಕೆ: ಹಾರ್ಮುಜ್ ಜಲಸಂಧಿ ಬಂದ್, ತೈಲ ಬೆಲೆ ಏರಿಕೆ

ಇತ್ತ, ಮೊಜ್ತಾಬಾ ಖಮೇನಿ ಅವರು ತಮ್ಮ ಮೊದಲ ಹೇಳಿಕೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಕಿಡಿಕಾರಿದ್ದಾರೆ. ತೈಲ ಪೂರೈಕೆಯ ಜೀವನಾಡಿಯಾದ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ.
ತೈಲ ಬೆಲೆ ಏರಿಕೆ: ಇರಾನ್‌ನ ಈ ನಿರ್ಧಾರದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದೆ. ಇದು ಜಾಗತಿಕ ಆರ್ಥಿಕತೆಯ ಮೇಲೆ ಭಾರಿ ಹೊಡೆತ ನೀಡಿದೆ.
ಪ್ರತೀಕಾರದ ಶಪಥ: ಯುದ್ಧದಲ್ಲಿ ಹತರಾದವರ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಘೋಷಿಸಿದ್ದು, ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಯನ್ನು ಮುಂದುವರಿಸುವುದಾಗಿ ಹೇಳಿದೆ.

6,000 ಗುರಿಗಳ ಮೇಲೆ ಅಮೆರಿಕ ದಾಳಿ: ಟ್ರಂಪ್ ಪಣ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಯುದ್ಧವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದ್ದಾರೆ. ಅಮೆರಿಕದ ಮಿಲಿಟರಿ ವರದಿಯ ಪ್ರಕಾರ, ಕಾರ್ಯಾಚರಣೆ ಆರಂಭವಾದಾಗಿನಿಂದ ಈವರೆಗೆ ಇರಾನ್‌ನ 6,000ಕ್ಕೂ ಹೆಚ್ಚು ಗುರಿಗಳನ್ನು ಧ್ವಂಸಗೊಳಿಸಲಾಗಿದೆ. ಇರಾನ್ ಈಗಾಗಲೇ ನಾಶವಾಗಿದೆ, ಆದರೆ ಅದು ಅಣುಬಾಂಬ್ ತಯಾರಿಸದಂತೆ ತಡೆಯುವುದೇ ನಮ್ಮ ಮೊದಲ ಆದ್ಯತೆ ಎಂದು ಟ್ರಂಪ್ ಹೇಳಿದ್ದಾರೆ.

ಲೆಬನಾನ್‌ನಲ್ಲಿ ರಕ್ತಪಾತ: ಹಜ್ಬುಲ್ಲಾ ಅಟ್ಟಹಾಸ

ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರರು ಇಸ್ರೇಲ್ ಮೇಲೆ ಸುಮಾರು 200 ರಾಕೆಟ್‌ಗಳನ್ನು ಉಡಾಯಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಬೈರುತ್‌ನ ಹೃದಯಭಾಗದಲ್ಲಿರುವ ಕಟ್ಟಡಗಳು ನೆಲಸಮವಾಗಿವೆ. ಈ ಯುದ್ಧದ ಕಾರಣದಿಂದಾಗಿ ಇರಾನ್‌ನಲ್ಲಿ 3.2 ಮಿಲಿಯನ್ ಜನರು ನಿರಾಶ್ರಿತರಾಗಿದ್ದಾರೆ.
ಅಲ್ಲದೆ, ಲೆಬನಾನ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಓಡುತ್ತಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ಕೂಡಲೇ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಹೊಸ ರಣರಂಗಗಳ ಭೀತಿ

ಇರಾನ್ ತನ್ನ ಹೇಳಿಕೆಯಲ್ಲಿ, ಶತ್ರುಗಳಿಗೆ ಅನುಭವವಿಲ್ಲದ ಹೊಸ ರಣರಂಗಗಳನ್ನು ತೆರೆಯಲಾಗುವುದು ಎಂದು ಎಚ್ಚರಿಸಿದೆ. ಇದು ಜಗತ್ತಿನಾದ್ಯಂತ ಇರುವ ಇಸ್ರೇಲ್ ಮತ್ತು ಅಮೆರಿಕದ ಹಿತಾಸಕ್ತಿಗಳ ಮೇಲೆ ದಾಳಿ ನಡೆಸುವ ಸಂಚು ಇರಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಇರಾಕ್, ಬಹ್ರೇನ್ ಮತ್ತು ದುಬೈ ಭಾಗಗಳಲ್ಲೂ ಡ್ರೋನ್ ದಾಳಿಗಳು ವರದಿಯಾಗಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net