ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲದ ನಿಖರವಾದ ಪ್ರಮಾಣವನ್ನು ಅಂದಾಜು ಮಾಡುವುದು ಸುಲಭವಲ್ಲ. ಇದಕ್ಕೆ ಪ್ರಮುಖ ಕಾರಣ 'ಡಾರ್ಕ್ ಶಿಪ್ಪಿಂಗ್' (Dark Shipping). ಕೆಲವು ತೈಲ ಟ್ಯಾಂಕರ್ಗಳು ತಮ್ಮ ಟ್ರಾನ್ಸ್ಪಾಂಡರ್ಗಳನ್ನು ಆಫ್ ಮಾಡಿಕೊಂಡು ಸಂಚರಿಸುವುದರಿಂದ, ಸಾಮಾನ್ಯ ನೌಕಾ ಟ್ರ್ಯಾಕಿಂಗ್ ವ್ಯವಸ್ಥೆಗಳಿಗೆ ಅವುಗಳ ಚಲನವಲನಗಳು ಗೋಚರಿಸುವುದಿಲ್ಲ. ಕುವೈತ್, ಸೌದಿ ಅರೇಬಿಯಾ ಮತ್ತು ಯುಎಇ ಮುಂತಾದ ದೇಶಗಳು ದೊಡ್ಡ ಕಚ್ಚಾ ತೈಲ ಟ್ಯಾಂಕರ್ಗಳನ್ನು ಹಾರ್ಮುಜ್ ಮೂಲಕ ಕಳುಹಿಸಿ, ಒಮಾನ್ ಕೊಲ್ಲಿಯ ಅಪಾಯಕಾರಿ ಪ್ರದೇಶವನ್ನು ದಾಟಿದ ನಂತರ ಮತ್ತೊಂದು ಹಡಗಿಗೆ ತೈಲವನ್ನು ವರ್ಗಾಯಿಸುತ್ತವೆ ಎಂದು ಲಿಪೊ ಆಯಿಲ್ ಅಸೋಸಿಯೇಟ್ಸ್ ಅಧ್ಯಕ್ಷ ಆಂಡಿ ಲಿಪೊ ತಿಳಿಸಿದ್ದಾರೆ. ಕೆಲವು ಹಡಗುಗಳು ವಾರಗಟ್ಟಲೆ ಸಾಮಾನ್ಯ ಟ್ರ್ಯಾಕಿಂಗ್ ವ್ಯವಸ್ಥೆಗಳಿಂದ ಮರೆಯಾಗಿರಬಹುದು ಅಂತಾನೂ ಹೇಳಿದ್ದಾರೆ. ಉಪಗ್ರಹ ಚಿತ್ರಗಳ ಮೂಲಕ ಕೆಲವು ಹಡಗುಗಳನ್ನು ಗುರುತಿಸಬಹುದಾದರೂ, ಅವುಗಳ ಸಂಪೂರ್ಣ ಚಲನವಲನಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಕಷ್ಟಕರವಾಗಿದೆ. ಆದಾಗ್ಯೂ, ಹೊರ್ಮುಜ್ ಸುತ್ತಲೂ ಅಮೆರಿಕದ ನೌಕಾಪಡೆಯು ಭಾರೀ ಸಂಖ್ಯೆಯಲ್ಲಿ ನಿಯೋಜನೆಗೊಂಡಿರುವುದರಿಂದ, ಅಮೆರಿಕದ ಮಿಲಿಟರಿಗೆ ನೌಕಾ ಚಟುವಟಿಕೆಗಳ ಕುರಿತು ಹೆಚ್ಚಿನ ವಿಸ್ತೃತ ಮಾಹಿತಿ ಲಭ್ಯವಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.