ಒಮಾನ್ ಕರಾವಳಿಯಲ್ಲಿ ಇರಾನ್ ಅಟ್ಟಹಾಸ! ಭಾರತೀಯ ಸಿಬ್ಬಂದಿಗಳಿದ್ದ ಹಡಗಿನ ಮೇಲೆ ಗುಂಡಿನ ದಾಳಿ | Iran attacks Indian ship

ಒಮಾನ್ ಕರಾವಳಿಯಲ್ಲಿ ಇರಾನ್ ಅಟ್ಟಹಾಸ! ಭಾರತೀಯ ಸಿಬ್ಬಂದಿಗಳಿದ್ದ ಹಡಗಿನ ಮೇಲೆ ಗುಂಡಿನ ದಾಳಿ
ಒಮಾನ್ ಕರಾವಳಿಯಲ್ಲಿ ಇರಾನ್ ಅಟ್ಟಹಾಸ! ಭಾರತೀಯ ಸಿಬ್ಬಂದಿಗಳಿದ್ದ ಹಡಗಿನ ಮೇಲೆ ಗುಂಡಿನ ದಾಳಿ
Published on
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮಿತಿಮೀರುತ್ತಿರುವ ಬೆನ್ನಲ್ಲೇ, ಸಮುದ್ರ ಮಾರ್ಗದಲ್ಲಿ ಭಾರತೀಯ ಸಿಬ್ಬಂದಿಗಳಿಗೆ (Iran attacks Indian ship) ಪ್ರಾಣಾಪಾಯ ಎದುರಾಗಿದೆ. ಒಮಾನ್ ಕರಾವಳಿಯ ಸಮೀಪ ಭಾರತೀಯ ನಾವಿಕರಿದ್ದ 'ಎಂ.ಟಿ. ಸೈರಾನ್' (MT Siron) ಎಂಬ ರಾಸಾಯನಿಕ ಟ್ಯಾಂಕರ್ ಹಡಗಿನ ಮೇಲೆ ಇರಾನ್ ಕೋಸ್ಟ್ ಗಾರ್ಡ್ ಪಡೆಗಳು ಗುಂಡಿನ ದಾಳಿ ನಡೆಸಿವೆ. ಈ ಆಘಾತಕಾರಿ ಘಟನೆಯನ್ನು ಭಾರತದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯವು ಸೋಮವಾರ ಅಧಿಕೃತವಾಗಿ ಖಚಿತಪಡಿಸಿದೆ.

ಸಮುದ್ರದ ನಡುವೆ ನಡೆದಿದ್ದೇನು..?

ಏಪ್ರಿಲ್ 25 ರಂದು ಒಮಾನ್‌ನ ಶಿನಾಸ್ ಬಂದರಿನ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ. ಟೋಗೋ ದೇಶದ ಧ್ವಜ ಹೊಂದಿದ್ದ ಎಂ.ಟಿ. ಸೈರಾನ್ ಹಡಗು ಇತರ ಹಡಗುಗಳೊಂದಿಗೆ ಸಾಗುತ್ತಿದ್ದಾಗ, ಇರಾನ್ ಕೋಸ್ಟ್ ಗಾರ್ಡ್ ಪಡೆಗಳು ಅದನ್ನು ತಡೆದವು. ಹಡಗನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಲು ಇರಾನ್ ಪಡೆಗಳು ಹಡಗಿನ ದಿಕ್ಕಿನಲ್ಲಿ ಸತತವಾಗಿ ಗುಂಡು ಹಾರಿಸಿವೆ. ಇದರಿಂದ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಗಳು ತೀವ್ರ ಭೀತಿಗೊಳಗಾಗಿದ್ದರು.

ಸಿಬ್ಬಂದಿಗಳ ಸುರಕ್ಷತೆ ಕುರಿತು ಸಚಿವಾಲಯದ ಮಾಹಿತಿ

ಕೇಂದ್ರ ಬಂದರು ಮತ್ತು ಹಡಗು ಸಚಿವಾಲಯದ ನಿರ್ದೇಶಕ ಮನ್‌ದೀಪ್ ಸಿಂಗ್ ರಾಂಧವಾ ಈ ಕುರಿತು ಮಾಹಿತಿ ನೀಡಿ, ಇರಾನ್ ಪಡೆಗಳಿಂದ ಹಡಗಿನ ಮೇಲೆ ದಾಳಿ ನಡೆದಿರುವುದು ನಿಜ. ಆದರೆ, ಹಡಗಿನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿಗಳು ಪ್ರಸ್ತುತ ಸುರಕ್ಷಿತವಾಗಿದ್ದಾರೆ. ಘಟನೆಯ ನಂತರ ಹಡಗು ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ ಎಂದು ತಿಳಿಸಿದ್ದಾರೆ.
ಬಾಧಿತ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಡಗು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಭಾರತೀಯ ಹಡಗುಗಳ ಮೇಲೆ ಇರಾನ್‌ನ ಸರಣಿ ದಾಳಿ

ಇರಾನ್ ಪಡೆಗಳು ಭಾರತೀಯ ಹಡಗುಗಳನ್ನು ಗುರಿಯಾಗಿಸಿಕೊಂಡಿರುವುದು ಇದು ಮೊದಲಲ್ಲ. ಈ ಹಿಂದೆ ಕೂಡ ಇರಾನ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಎರಡು ಪ್ರಮುಖ ಭಾರತೀಯ ಹಡಗುಗಳ ಮೇಲೆ ದಾಳಿ ನಡೆಸಿತ್ತು.
ಸನ್ಮಾರ್ ಹೆರಾಲ್ಡ್
ಜಗ್ ಅರ್ನವ್
ಈ ಎರಡು ಹಡಗುಗಳು ಸ್ಟ್ರೈಟ್ ಆಫ್ ಹೊರ್ಮುಜ್ ದಾಟಲು ಪ್ರಯತ್ನಿಸುತ್ತಿದ್ದಾಗ ಇರಾನ್ ಪಡೆಗಳು ಗುಂಡು ಹಾರಿಸಿ ಅವುಗಳನ್ನು ಹಿಂತಿರುಗುವಂತೆ ಮಾಡಿದ್ದವು. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ - ಇರಾನ್ ಮೇಲೆ ದಾಳಿ ನಡೆಸಿದ ನಂತರ, ಇರಾನ್ ಈ ಭಾಗದಲ್ಲಿ ಚಲಿಸುವ ಹಡಗುಗಳ ಮೇಲೆ ತನ್ನ ಆಕ್ರಮಣಕಾರಿ ಧೋರಣೆಯನ್ನು ಹೆಚ್ಚಿಸಿದೆ.

ಭಾರತದ ಕಠಿಣ ಪ್ರತಿಭಟನೆ

ಭಾರತೀಯ ಧ್ವಜವಿರುವ ಮತ್ತು ಭಾರತೀಯ ಸಿಬ್ಬಂದಿಗಳಿರುವ ಹಡಗುಗಳ ಮೇಲೆ ಪದೇಪದೆ ನಡೆಯುತ್ತಿರುವ ಈ ದಾಳಿಗಳನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇರಾನ್ ಸರ್ಕಾರದ ಮುಂದೆ ಭಾರತ ಈಗಾಗಲೇ ತನ್ನ ಕಠಿಣ ಪ್ರತಿಭಟನೆಯನ್ನು ದಾಖಲಿಸಿದೆ. ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಜಾಗತಿಕ ನಿಯಮಗಳ ಉಲ್ಲಂಘನೆ ಎಂದು ಭಾರತ ಪ್ರತಿಪಾದಿಸಿದೆ.

ಜಾಗತಿಕ ಪರಿಣಾಮ ಮತ್ತು ಆತಂಕ

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಸಮುದ್ರ ಮಾರ್ಗಕ್ಕೂ ವ್ಯಾಪಿಸಿದೆ. ವಿಶ್ವದ ಅತಿ ದೊಡ್ಡ ತೈಲ ಮತ್ತು ರಾಸಾಯನಿಕ ಪೂರೈಕೆ ಮಾರ್ಗವಾಗಿರುವ ಈ ಪ್ರದೇಶದಲ್ಲಿ ಇರಾನ್ ನಡೆಸುತ್ತಿರುವ ಇಂತಹ ಕೃತ್ಯಗಳು ಜಾಗತಿಕ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಭಾರತೀಯ ನಾವಿಕರು ಮತ್ತು ಹಡಗುಗಳು ಈ ಸಂಘರ್ಷದ ನಡುವೆ ಸಿಲುಕಿರುವುದು ಭಾರತದ ರಕ್ಷಣಾ ನೀತಿಗೆ ಹೊಸ ಸವಾಲನ್ನು ಒಡ್ಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net