ಇನ್‌ಸ್ಟಾಗ್ರಾಮ್ ಅಡಿಕ್ಷನ್ ಹಿಂದಿರುವ ರಹಸ್ಯ ಬಯಲು! ಆಂತರಿಕ ವರದಿ ಮುಚ್ಚಿಟ್ಟು ಯುವಕರನ್ನು ಬಲಿಯಾಗಿಸಿತೇ ಮೆಟಾ? Instagram Addiction

ಇನ್‌ಸ್ಟಾಗ್ರಾಮ್ ಅಡಿಕ್ಷನ್ ಹಿಂದಿರುವ ರಹಸ್ಯ ಬಯಲು! ಆಂತರಿಕ ವರದಿ ಮುಚ್ಚಿಟ್ಟು ಯುವಕರನ್ನು ಬಲಿಯಾಗಿಸಿತೇ ಮೆಟಾ? Instagram Addiction
ಇನ್‌ಸ್ಟಾಗ್ರಾಮ್ ಅಡಿಕ್ಷನ್ ಹಿಂದಿರುವ ರಹಸ್ಯ ಬಯಲು! ಆಂತರಿಕ ವರದಿ ಮುಚ್ಚಿಟ್ಟು ಯುವಕರನ್ನು ಬಲಿಯಾಗಿಸಿತೇ ಮೆಟಾ? Instagram Addiction
Published on

ಪ್ರಮುಖ ಮುಖ್ಯಾಂಶಗಳು

  • ಹದಿಹರೆಯದವರನ್ನು ಬಲಿಪಶು ಮಾಡಲು ಇನ್‌ಸ್ಟಾಗ್ರಾಮ್ ವಿನ್ಯಾಸಗೊಳಿಸಿದೆಯೇ ಮೆಟಾ ಸಂಸ್ಥೆ
  • ಮಾರ್ಕ್ ಜುಕರ್‌ಬರ್ಗ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಟೆನೆಸಿ ಸರ್ಕಾರ
  • ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಆಟೋಪ್ಲೇ ಫೀಚರ್‌ಗಳ ವಿರುದ್ಧ ಅಮೆರಿಕದಲ್ಲಿ ಗಂಭೀರ ದಾವೆ
  • ಯುವಕರ ಮಾನಸಿಕ ಆರೋಗ್ಯದ ಮೇಲಿನ ಧಕ್ಕೆಗೆ ಇನ್‌ಸ್ಟಾಗ್ರಾಮ್ ವ್ಯಾಮೋಹವೇ ಕಾರಣವೇ?
Instagram Addiction : ಇಂದಿನ ಡಿಜಿಟಲ್ ಯುಗದಲ್ಲಿ ಬೆಳಗ್ಗೆ ಎದ್ದ ಕೂಡಲೇ ಕಣ್ಣುಜ್ಜುವುದರಿಂದ ಹಿಡಿದು ರಾತ್ರಿಯ ನಿದ್ರೆಯವರೆಗೂ ನಮ್ಮ ಬೆರಳುಗಳು ನಿರಂತರವಾಗಿ ಸ್ಕ್ರಾಲ್ ಮಾಡುತ್ತಿರುವುದು ಬೇರೇನನ್ನೂ ಅಲ್ಲ, ಅದು ‘ಇನ್‌ಸ್ಟಾಗ್ರಾಮ್’ ಜಗತ್ತು. ಕೇವಲ ಮನರಂಜನೆಗಾಗಿ ಆರಂಭವಾಗುವ ಲೈಕ್ಸ್, ಕಾಮೆಂಟ್ಸ್ ಮತ್ತು ರೀಲ್ಸ್‌ಗಳ ಈ ಪಯಣ, ನಮಗೇ ಅರಿವಿಲ್ಲದಂತೆ ನಮ್ಮ ಮಾನಸಿಕ ಆರೋಗ್ಯ ಮತ್ತು ಅಮೂಲ್ಯ ಸಮಯವನ್ನು ನುಂಗಿಹಾಕುವ ಗಂಭೀರ 'ಅಡಿಕ್ಷನ್' ಆಗಿ ರೂಪಾಂತರಗೊಂಡಿದೆ. ವರ್ಚುವಲ್ ಪ್ರಪಂಚದ ಈ ಬಣ್ಣದ ಬೆಳಕಿನಲ್ಲಿ ಕಳೆದುಹೋಗುತ್ತಿರುವ ಯುವ ಪೀಳಿಗೆಗೆ, ಇನ್‌ಸ್ಟಾಗ್ರಾಮ್ ವ್ಯಾಮೋಹವು ಒಂದು ಮೌನ ಸಾಂಕ್ರಾಮಿಕ ರೋಗದಂತೆ ಕಾಡುತ್ತಿರುವುದು ಇಂದಿನ ಕಟು ಸತ್ಯವಾಗಿದೆ. ಇದರ ಬೆನ್ನಲ್ಲೇ ಇನ್​ಸ್ಟಾಗ್ರಾಂ ವಿರುದ್ಧ ಒಂದು ಗಂಭೀರ ಆರೋಪ ಕೇಳಿಬಂದಿದೆ.
ಅಮೆರಿಕದ ಟೆನೆಸಿ ರಾಜ್ಯ ಸರ್ಕಾರವು ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ ಹಾಗೂ ಅದರ ಸಿಇಒ ಮಾರ್ಕ್ ಜುಕರ್‌ಬರ್ಗ್ ವಿರುದ್ಧ ಗಂಭೀರ ಆರೋಪ ಹೊರಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಮೆಟಾ ಸಂಸ್ಥೆ ಮತ್ತೆ ತೀವ್ರ ವಿವಾದಕ್ಕೆ ಸಿಲುಕಿದೆ.
ತಮ್ಮ ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆದ ಇನ್‌ಸ್ಟಾಗ್ರಾಮ್‌ನ ಫೀಚರ್‌ಗಳನ್ನು ಹದಿಹರೆಯದವರನ್ನು ಉದ್ದೇಶಪೂರ್ವಕವಾಗಿ ಅಡಿಕ್ಟ್ ಮಾಡುವಂತೆ ಮತ್ತು ಆ್ಯಪ್‌ನಲ್ಲಿ ಹೆಚ್ಚು ಸಮಯ ಕಳೆಯುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಈ ದಾವೆಯಲ್ಲಿ ಆರೋಪಿಸಲಾಗಿದೆ. ಇದರಿಂದಾಗಿ ಯುವಜನರಲ್ಲಿ ಸೋಶಿಯಲ್ ಮೀಡಿಯಾ ವ್ಯಸನ ಹೆಚ್ಚಾಗುತ್ತಿರುವುದಷ್ಟೇ ಅಲ್ಲದೆ, ಅವರ ಮಾನಸಿಕ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದ್ದು, ಈ ಕುರಿತು ಮುಂದಿನ ವಾರ ನ್ಯಾಯಾಲಯದಲ್ಲಿ ಪ್ರಮುಖ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಟೆನೆಸಿ ಅಟಾರ್ನಿ ಜನರಲ್ ಜೊನಾಥನ್ ಸ್ಕ್ರುಮೆಟ್ಟಿ ಅವರ ಕಚೇರಿಯು ಮೆಟಾ ಸಂಸ್ಥೆಯ ವಿರುದ್ಧ ಮತ್ತೊಂದು ಪ್ರಮುಖ ಆರೋಪವನ್ನು ಮಾಡಿದ್ದು, ಇನ್‌ಸ್ಟಾಗ್ರಾಮ್ ಹದಿಹರೆಯದವರ ಮೇಲೆ ಬೀರುವ ಪರಿಣಾಮಗಳ ಕುರಿತು ಸಂಸ್ಥೆಯು ಆಂತರಿಕ ಸಂಶೋಧನೆ ನಡೆಸಿದ್ದರೂ ಆ ವರದಿಗಳಲ್ಲಿದ್ದ ಅಪಾಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಎಂದು ದೂರಿದೆ. ಈ ಸಂಶೋಧನೆಯ ಅಂಶಗಳನ್ನು ಹಲವು ಉದ್ಯೋಗಿಗಳು ಮಾರ್ಕ್ ಜುಕರ್‌ಬರ್ಗ್ ಅವರ ಗಮನಕ್ಕೆ ತಂದಿದ್ದರೂ ಸಹ, ಈ ಹಾನಿಯನ್ನು ತಡೆಯುವ ಉಪಕ್ರಮಗಳಿಗೆ ಕಂಪನಿಯು ಸೂಕ್ತ ಅನುದಾನವನ್ನು ನೀಡಲಿಲ್ಲ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿರುವ ಹಾನಿಕಾರಕ ಕಂಟೆಂಟ್‌ನ ಪ್ರಮಾಣದ ಕುರಿತು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದೆ ಎಂದು ಈ ದಾವೆಯಲ್ಲಿ ಗಂಭೀರವಾಗಿ ಆರೋಪಿಸಲಾಗಿದೆ.
ಇನ್‌ಸ್ಟಾಗ್ರಾಮ್‌ನ ಆಟೋಪ್ಲೇ, ರೀಲ್ಸ್ ಮತ್ತು ನೋಟಿಫಿಕೇಶನ್‌ಗಳಂತಹ ಫೀಚರ್‌ಗಳು ಯುವಜನರು ಮತ್ತು ಹದಿಹರೆಯದವರು ಆ್ಯಪ್‌ನಲ್ಲಿ ಹೆಚ್ಚು ಸಮಯ ಕಳೆಯುವಂತೆ ಪ್ರೇರೇಪಿಸುತ್ತವೆ ಎಂದು ಟೆನೆಸಿ ಸರ್ಕಾರ ನ್ಯಾಯಾಲಯದಲ್ಲಿ ವಾದಿಸಿದೆ. ಈ ಹಿನ್ನೆಲೆಯಲ್ಲಿ ಮೆಟಾ ಸಂಸ್ಥೆಗೆ ಭಾರಿ ದಂಡ ವಿಧಿಸುವುದರ ಜೊತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದೆ. ಆದರೆ, ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ಮೆಟಾ, ವೇದಿಕೆಯಲ್ಲಿರುವ ಬಹುತೇಕ ಕಂಟೆಂಟ್ ಬಳಕೆದಾರರೇ ಪೋಸ್ಟ್ ಮಾಡಿದ್ದಾಗಿದ್ದು, ಯುಎಸ್ ಕಮ್ಯುನಿಕೇಷನ್ಸ್ ಡೀಸೆನ್ಸಿ ಆಕ್ಟ್‌ನ ಸೆಕ್ಷನ್ 230 ರ ಅಡಿಯಲ್ಲಿ ತಮಗೆ ಕಾನೂನು ರಕ್ಷಣೆ ಇದೆ ಎಂದು ಪ್ರತ್ಯುತ್ತರ ನೀಡಿದೆ.
ಈ ಪ್ರಕರಣದ ಅಂತಿಮ ತೀರ್ಪು ಮುಂಬರುವ ದಿನಗಳಲ್ಲಿ ಸಾಮಾಜಿಕ ಜಾಲತಾಣ ಸಂಸ್ಥೆಗಳ ಮೇಲೆ ಇನ್ನಷ್ಟು ಕಠಿಣ ನಿಯಮಗಳು ಮತ್ತು ನಿರ್ಬಂಧಗಳು ಜಾರಿಯಾಗಲು ಹಾದಿ ಮಾಡಿಕೊಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖವಾಗಿ ಹದಿಹರೆಯದವರ ಮಾನಸಿಕ ಆರೋಗ್ಯ ಸಂರಕ್ಷಣೆ ಮತ್ತು ಆನ್‌ಲೈನ್ ಸುರಕ್ಷತೆಯ ಕುರಿತು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಗೆ ಈ ಕಾನೂನು ಹೋರಾಟವು ಹೊಸ ಮತ್ತು ಅತ್ಯಂತ ಪ್ರಮುಖ ಆಯಾಮವನ್ನು ನೀಡಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net