ಬದುಕನ್ನೇ ಕೊಚ್ಚಿಕೊಂಡು ಹೋಯ್ತು ಸುನಾಮಿ... ಬಡತನಕ್ಕೆ ಸವಾಲೆಸೆದು IAS, IPS ಆದ ಅಕ್ಕ-ತಂಗಿಯ ಯಶೋಗಾಥೆ! Inspirational Stories

ಐಪಿಎಸ್ ಸುಶ್ಮಿತಾ ರಾಮನಾಥನ್ ಮತ್ತು ಐಎಎಸ್ ಐಶ್ವರ್ಯ ರಾಮನಾಥನ್
ಐಪಿಎಸ್ ಸುಶ್ಮಿತಾ ರಾಮನಾಥನ್ ಮತ್ತು ಐಎಎಸ್ ಐಶ್ವರ್ಯ ರಾಮನಾಥನ್
Published on

ಪ್ರಮುಖ ಮುಖ್ಯಾಂಶಗಳು

  • ಪ್ರಕೃತಿಯ ಕೋಪಕ್ಕೆ ಆ ಕುಟುಂಬ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿತ್ತು
  • ಜೀವನ ನಡೆಸುವುದು ಮುಳ್ಳಿನ ಹಾದಿಯಲ್ಲಿ ನಡೆದಂತಾಗಿತ್ತು
  • ಹಾದಿಯಲ್ಲಿ ಬಂದ ಎಲ್ಲ ಕಷ್ಟವನ್ನು ಸಹಿಸಿಕೊಂಡು ತಮ್ಮ ಗುರಿ ಸಾಧಿಸಿದರು
  • ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾದ ಸಹೋದರಿಯರಿಬ್ಬರ ಸ್ಫೂರ್ತಿಯ ಕತೆಯಿದು
Inspirational Stories : ಪ್ರಕೃತಿಯ ಕೋಪಕ್ಕೆ ಆ ಕುಟುಂಬ ಎಲ್ಲವನ್ನೂ ಕಳೆದುಕೊಂಡಿತು. ಬದುಕಲು ನೆರಳು ಕೂಡ ಇಲ್ಲದೆ ಅವರ ಬದುಕು ಬೀದಿಗೆ ಬಿದ್ದಿತು. ಕೇವಲ ಒಂದೇ ದಿನದಲ್ಲಿ ಅವರ ಕತೆಯೇ ಬದಲಾಯಿತು. ಎಲ್ಲವನ್ನು ಕಳೆದುಕೊಂಡು ಅಕ್ಷರಶಃ ಅಸಹಾಯಕರಾಗಿದ್ದರು. ಏನು ಮಾಡಬೇಕೆಂದು ತಿಳಿಯಲಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ, ಜೀವನ ನಡೆಸುವುದು ಮುಳ್ಳಿನ ಹಾದಿಯಲ್ಲಿ ನಡೆದಂತಾಗಿತ್ತು. ಭವಿಷ್ಯದ ಬಾಗಿಲೇ ಮುಚ್ಚಿ ಹೋಗಿತ್ತು.
ಇಷ್ಟೆಲ್ಲ ಸಮಸ್ಯೆಗಳಿದ್ದರೂ ಅವರು ಮಾತ್ರ ಧೃತಿಗೆಡಲಿಲ್ಲ. ತಮ್ಮ ಅಧ್ಯಯನದ ಮೇಲೆ ಗಮನ ಹರಿಸಿದರು. ಉನ್ನತ ಹುದ್ದೆಯ ಕನಸು ಕಂಡರು. ಭೀಕರ ಬಡತನದಲ್ಲಿ ಬದುಕುತ್ತಿದ್ದರೂ ಅವರ ಕನಸು ಮಾತ್ರ ಬಹಳ ದೊಡ್ಡದಾಗಿತ್ತು. ತಮ್ಮ ಹಾದಿಯಲ್ಲಿ ಬಂದ ಎಲ್ಲ ಕಷ್ಟವನ್ನು ಸಹಿಸಿಕೊಂಡು, ಪ್ರಕೃತಿಗೆ ಸವಾಲೆಸೆದು ಕೊನೆಗೂ ತಮ್ಮ ಗುರಿಯನ್ನು ಸಾಧಿಸಿದರು.
ಅಂದಹಾಗೆ, ನಾವು ಇಲ್ಲಿ ಹೇಳುತ್ತಿರುವುದು ಸಹೋದರಿಯರಿಬ್ಬರ ಯಶೋಗಾಥೆ. ಸವಾಲುಗಳನ್ನು ಮೆಟ್ಟಿನಿಂತು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾದ ಸಹೋದರಿಯರಿಬ್ಬರ ಸ್ಫೂರ್ತಿಯ ಕತೆಯಿದು. ಹಾಗಾದರೆ ಆ ಸಹೋದರಿಯರು ಯಾರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. ಅಂದಹಾಗೆ ಆ ಸಹೋದರಿಯರು ತಮಿಳುನಾಡಿನ ಕಡಲೂರು ಜಿಲ್ಲೆಯ ರೈತರ ಹೆಣ್ಣುಮಕ್ಕಳು. ಅವರ ಹೆಸರು ಸುಶ್ಮಿತಾ ರಾಮನಾಥನ್ ಮತ್ತು ಐಶ್ವರ್ಯಾ ರಾಮನಾಥನ್.
ಸುಶ್ಮಿತಾ ಮತ್ತು ಐಶ್ವರ್ಯಾ ಆರ್ಥಿಕವಾಗಿ ಹಿಂದುಳಿದ ಕೃಷಿ ಕುಟುಂಬಕ್ಕೆ ಸೇರಿದವರು. ಅವರು ಕಡು ಬಡತನದಲ್ಲಿ ಬೆಳೆದರು. ಹೀಗಿರುವಾಗ ಪ್ರಕೃತಿಯು ಕೂಡ ಅವರನ್ನು ಇನ್ನಷ್ಟು ಕಷ್ಟಕ್ಕೆ ದೂಡಿತು. ಅಂದರೆ, 2004ರಲ್ಲಿ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಸುನಾಮಿಯಲ್ಲಿ, ಸಹೋದರಿಯರು ತಮ್ಮ ಮನೆ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡರು. ಇದರಿಂದ ಅವರ ಜೀವನ ಸಂಪೂರ್ಣವಾಗಿ ನಾಶವಾಯಿತು. ಪ್ರಕೃತಿಯ ವಿಕೋಪದಿಂದ ಅವರ ಕುಟುಂಬ ಸಂಪೂರ್ಣವಾಗಿ ಬೀದಿಗೆ ಬಿತ್ತು.
ಆದಾಗ್ಯೂ, ಅಂತಹ ಕಷ್ಟದ ಪರಿಸ್ಥಿತಿಗಳಲ್ಲಿಯೂ ಸಹೋದರಿಯರು ತಮ್ಮ ಛಲವನ್ನು ಬಿಡದೇ ಅಧ್ಯಯನವನ್ನು ಮುಂದುವರಿಸಿದರು. ಓದು ನಮ್ಮ ಜೀವನವನ್ನು ಬದಲಾಯಿಸುವ ಆಯುಧ ಎಂದು ಸಹೋದರಿಯರು ಸಂಪೂರ್ಣವಾಗಿ ನಂಬಿದ್ದರು. ಅದಕ್ಕೆ ಬದ್ಧರಾಗಿ, ಅವರಿಬ್ಬರೂ ಯುಪಿಎಸ್‌ಸಿಗೆ ತಯಾರಿ ನಡೆಸಿದರು ಮತ್ತು ಅಂದುಕೊಂಡಿದ್ದನ್ನು ಸಾಧಿಸಿದರು.

ಐಎಎಸ್ ಐಶ್ವರ್ಯ ರಾಮನಾಥನ್

ಐಶ್ವರ್ಯಾ ಅವರು 2018ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 628ನೇ ರ‍್ಯಾಂಕ್ ಗಳಿಸಿದರು ಮತ್ತು ರೈಲ್ವೆ ಅಕೌಂಟ್ಸ್ ಸರ್ವಿಸ್ (RAS)ಗೆ ಆಯ್ಕೆಯಾದರು. ಆದರೆ ಆ ಹುದ್ದೆಯಿಂದ ತೃಪ್ತರಾಗದ ಐಶ್ವರ್ಯ 2019ರಲ್ಲಿ ಮತ್ತೊಮ್ಮೆ UPSCಗೆ ತಯಾರಿ ನಡೆಸಿದರು. ನಂತರ ಅವರು ಉತ್ತಮ ಹುದ್ದೆಯನ್ನು ಗಳಿಸಿದರು ಮತ್ತು 22ನೇ ವಯಸ್ಸಿನಲ್ಲಿ ತಮಿಳುನಾಡು ಕೇಡರ್‌ನ ಐಎಎಸ್ ಅಧಿಕಾರಿಯಾದರು. ಪ್ರಸ್ತುತ ಅವರು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಹೆಚ್ಚುವರಿ ಕಲೆಕ್ಟರ್ ಆಗಿ ನೇಮಕಗೊಂಡಿದ್ದಾರೆ.

ಐಪಿಎಸ್ ಸುಶ್ಮಿತಾ ರಾಮನಾಥನ್

ಐಶ್ವರ್ಯಾ ಅವರ ಅಕ್ಕ ಸುಶ್ಮಿತಾ ರಾಮನಾಥನ್​, ಸುಲಭವಾಗಿ ಯುಪಿಎಸ್‌ಸಿಯಲ್ಲಿ ಯಶಸ್ಸು ಸಾಧಿಸಲಿಲ್ಲ. ಸತತ ಐದು ಬಾರಿ ಅನುತ್ತೀರ್ಣರಾದರು. ಐಶ್ವರ್ಯಾ ಸುಲಭವಾಗಿ ಈ ಸಾಧನೆ ಮಾಡಿದರೆ, ತನ್ನ ತಂಗಿಗಿಂತ ಹೆಚ್ಚು ಶ್ರಮಿಸಿ ಸುಶ್ಮಿತಾ ಅವರು ಸಿವಿಲ್ ಸರ್ವೀಸಸ್‌ನಲ್ಲಿ ಯಶಸ್ಸು ಸಾಧಿಸಿದರು. ಸುಶ್ಮಿತಾ ಅವರು 2022ರಲ್ಲಿ ಆಂಧ್ರಪ್ರದೇಶ ಕೇಡರ್‌ನ ಐಪಿಎಸ್ ಅಧಿಕಾರಿಯಾದರು. ಆರನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 528 ನೇ ರ‍್ಯಾಂಕ್ ಗಳಿಸಿದರು. ಪ್ರಸ್ತುತ ಆಂಧ್ರದ ಕಾಕಿನಾಡ ಜಿಲ್ಲೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಒಂದು ಹೆಣ್ಣು ಮಗುವಾದರೆ ಸಾಕು ನಿರ್ಲಕ್ಷ್ಯದಿಂದ ನೋಡುವ ಈ ಸಮಾಜದಲ್ಲಿ ಹೆಣ್ಣು ಮಕ್ಕಳ ಶಕ್ತಿ ಏನೆಂಬುದನ್ನು ಈ ಸಹೋದರಿಯರು ತೋರಿಸಿದ್ದಾರೆ. ಅಷ್ಟೇ ಬಡತನವಿರಲಿ ಛಲವೊಂದಿದ್ದರೆ ಸಾಧನೆ ಖಚಿತ ಎಂಬುದನ್ನೂ ನಿರೂಪಿಸಿದ್ದಾರೆ. ಅನೇಕ ಹೆಣ್ಣು ಮಕ್ಕಳಿಗೆ ಈ ಸಹೋದರಿಯರು ಸ್ಫೂರ್ತಿಯ ಚಿಲುಮೆ ಆಗಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net