ಲಕ್ಷದ್ವೀಪದ ಆಳ ಸಮುದ್ರದಲ್ಲಿ ಹೊಸ ಮೀನು ಪತ್ತೆ: ಸಾಬೀತಾಯಿತು ಭಾರತದ ಕರಾವಳಿ ಶ್ರೀಮಂತಿಕೆ! New fish

ಲಕ್ಷದ್ವೀಪದ ಆಳ ಸಮುದ್ರದಲ್ಲಿ ಹೊಸ ಮೀನು ಪತ್ತೆ: ಸಾಬೀತಾಯಿತು ಭಾರತದ ಕರಾವಳಿ ಶ್ರೀಮಂತಿಕೆ! New fish
ಲಕ್ಷದ್ವೀಪದ ಆಳ ಸಮುದ್ರದಲ್ಲಿ ಹೊಸ ಮೀನು ಪತ್ತೆ: ಸಾಬೀತಾಯಿತು ಭಾರತದ ಕರಾವಳಿ ಶ್ರೀಮಂತಿಕೆ! New fish
Published on

ಪ್ರಮುಖ ಮುಖ್ಯಾಂಶಗಳು

  • ಅರೇಬಿಯನ್ ಸಮುದ್ರದಲ್ಲಿ ಹೊಸ ತಳಿಯ ಮೀನು ಪತ್ತೆಹಚ್ಚಿದ ಸಿಎಮ್‌ಎಫ್‌ಆರ್‌ಐ
  • ಲಕ್ಷದ್ವೀಪದ ಅರೇಬಿಯನ್ ಸಮುದ್ರದಲ್ಲಿ ಸಿಕ್ತು ಅಪರೂಪದ ಇಂಡಿಯನ್ ಡೋರಿ
  • ಸುಧಾರಿತ ಮಾಲಿಕ್ಯುಲರ್ ತಂತ್ರಜ್ಞಾನದಿಂದ ಬಯಲಾಯಿತು ಹೊಸ ಮೀನಿನ ತಳಿ ವೈವಿಧ್ಯತೆ
  • ಹೊಸ ಪ್ರಭೇದದ ಆವಿಷ್ಕಾರದೊಂದಿಗೆ ಸಾಬೀತಾಯಿತು ಭಾರತದ ಕರಾವಳಿ ಶ್ರೀಮಂತಿಕೆ
ಕೊಚ್ಚಿ: ಕೊಚ್ಚಿಯ ಕೇಂದ್ರ ಕಡಲ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ (CMFRI) ವಿಜ್ಞಾನಿಗಳು ಅರೇಬಿಯನ್ ಸಮುದ್ರದಲ್ಲಿ ಹೊಸ ತಳಿಯ ಆಳ ಸಮುದ್ರದ ಮೀನನ್ನು ( New fish ) ಪತ್ತೆಹಚ್ಚಿದ್ದಾರೆ.
ಲಕ್ಷದ್ವೀಪ ಸಮುದ್ರದ ಪೂರ್ವ ಭಾಗದಲ್ಲಿ ಸುಮಾರು 350 ರಿಂದ 500 ಮೀಟರ್ ಆಳದಲ್ಲಿ ಇವು ಪತ್ತೆಯಾಗಿವೆ. ಕೊಲ್ಲಂನ ಶಕ್ತಿಕುಲಂಗರ ಬಂದರಿಗೆ ಬಂದ ಟ್ರಾಲಿಂಗ್ ಬೋಟ್‌ಗಳಿಂದ ಸಂಶೋಧನೆಗಾಗಿ ವಿಜ್ಞಾನಿಗಳು ಆರು ಮೀನುಗಳನ್ನು ಸಂಗ್ರಹಿಸಿದ್ದು, ಸದ್ಯ 'ಇಂಡಿಯನ್ ಡೋರಿ' (Indian dory) ಎಂದು ಕರೆಯಲ್ಪಡುವ ಈ ಹೊಸ ಪ್ರಭೇದದ ಮೀನಿಗೆ 'ಸಿಟೊಪ್ಸಿಸ್ ಇಂಡಿಕಾ' (Citopsis indica) ಎಂದು ವೈಜ್ಞಾನಿಕ ನಾಮಕರಣ ಮಾಡಲಾಗಿದೆ.
ಕೊಚ್ಚಿಯ ಕೇಂದ್ರ ಕಡಲ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ (ICAR-CMFRI) ವಿಜ್ಞಾನಿ ಡಾ. ರತೀಶ್ ಕುಮಾರ್ ಆರ್. ನೇತೃತ್ವದ ಸಂಶೋಧಕರ ತಂಡವು, ಸುಧಾರಿತ ಮಾಲಿಕ್ಯುಲರ್ ಪರಿಕರಗಳು ಹಾಗೂ ಸಾಂಪ್ರದಾಯಿಕ ವರ್ಗೀಕರಣ ವಿಶ್ಲೇಷಣೆಯ ಮೂಲಕ ಈ ಮೀನು ಹೊಸ ಪ್ರಭೇದಕ್ಕೆ ಸೇರಿದ್ದೆಂದು ಅಧಿಕೃತವಾಗಿ ದೃಢಪಡಿಸಿದೆ.
ಇದುವರೆಗೆ ಹಿಂದೂ ಮಹಾಸಾಗರದಲ್ಲಿ ಕಂಡುಬರುವ ಈ ಮೀನನ್ನು ಅಟ್ಲಾಂಟಿಕ್ ಮಹಾಸಾಗರಕ್ಕೆ ಸೀಮಿತವಾಗಿರುವ 'ಸೈಟೊಪ್ಸಿಸ್ ರೋಜಿಯಾ' (Cyttopsis rosea) ತಳಿ ಎಂದೇ ನಂಬಲಾಗಿತ್ತು. ಆದರೆ, ಪ್ರಸ್ತುತ ನಡೆಸಲಾದ ಡಿಎನ್ಎ (DNA) ವಿಶ್ಲೇಷಣೆಯು ಈ ಮೀನು ತನ್ನದೇ ಜಾತಿಗೆ ಸೇರಿದ ಇತರ ಪ್ರಭೇದಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ತಳಿ ವೈವಿಧ್ಯತೆಯನ್ನು ಹೊಂದಿದೆ ಎಂಬುದನ್ನು ಬಹಿರಂಗಪಡಿಸುವ ಮೂಲಕ, ದೀರ್ಘಕಾಲದಿಂದ ಇದ್ದ ವರ್ಗೀಕರಣದ ದೋಷವನ್ನು ಸರಿಪಡಿಸಿದೆ.
ಸಂಶೋಧಕರ ಪ್ರಕಾರ, ಈ ಮಹತ್ವದ ಆವಿಷ್ಕಾರವು 'ಪ್ಯಾರಾಜೆನಿಡೇ' (Parazenidae) ಕುಟುಂಬದ ಮೀನುಗಳ ವರ್ಗೀಕರಣ ಮತ್ತು ಜೈವಿಕ ಭೌಗೋಳಿಕತೆ ನಡುವೆ ಇರುವ ಗಂಭೀರ ಸಂಕೀರ್ಣತೆಯನ್ನು ಬಿಚ್ಚಿಟ್ಟಿದೆ. ಅಲ್ಲದೆ, ಆಳ ಸಮುದ್ರದ 'ಜೀಫಾರ್ಮ್ಸ್' ಮೀನುಗಳ ಗುಂಪಿನಲ್ಲಿ ಅಡಗಿರುವ ನಿಗೂಢ ಜೀವರಾಶಿ ಹಾಗೂ ವೈವಿಧ್ಯತೆಗೆ ಈ ಸಂಶೋಧನೆ ಮತ್ತಷ್ಟು ಪುರಾವೆಗಳನ್ನು ಒದಗಿಸಿದೆ.
ಎ. ಶ್ರೀಜಾ, ಆರ್. ರತೀಶ್ ಕುಮಾರ್, ಅಜು ಕೆ. ರಾಜು, ಎ. ಎಕ್ಸ್. ತ್ರೇಸಾ, ಆಗಸ್ಟಿನಾ ಮತ್ತು ಎಸ್. ಆನಂದ್ ಅವರು ಜಂಟಿಯಾಗಿ ಬರೆದಿರುವ ಈ ಸಂಶೋಧನಾ ಪ್ರಬಂಧದ ಪ್ರಕಾರ, ಭಾರತದ ನೈಋತ್ಯ ಕರಾವಳಿಯ ಕಾಂಟಿನೆಂಟಲ್ ಇಳಿಜಾರಿನಿಂದ ಇತ್ತೀಚೆಗೆ ಪತ್ತೆಯಾಗುತ್ತಿರುವ ಸಾಲು ಸಾಲು ಆಳ ಸಮುದ್ರದ ಮೀನುಗಳ ಆವಿಷ್ಕಾರವು ಹೊಸ ಬೆಳಕನ್ನು ಚೆಲ್ಲಿದೆ. ಇದು ಪೂರ್ವ ಲಕ್ಷದ್ವೀಪ ಸಮುದ್ರ ಮತ್ತು ಉತ್ತರ ಹಿಂದೂ ಮಹಾಸಾಗರ ಪ್ರದೇಶವು ಮೀನುಗಳ ವೈವಿಧ್ಯತೆಗೆ ಸಂಬಂಧಿಸಿದಂತೆ ಇನ್ನೂ ಪರಿಶೋಧಿಸದ ಅತ್ಯಂತ ಶ್ರೀಮಂತ ವಲಯ ಎಂಬುದನ್ನು ಸಾಬೀತುಪಡಿಸಿದ್ದು, ಈ ಭಾಗದಲ್ಲಿ ಇನ್ನು ಹೆಚ್ಚಿನ ವಿಶೇಷ ಸಂಶೋಧನೆಗಳ ಅಗತ್ಯತೆಯನ್ನು ಒತ್ತಿಹೇಳಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net