ಟೀಮ್ ಇಂಡಿಯಾ T20 World Cup ಗೆದ್ದಿದ್ದು ಸಿರಾಜ್​ನ ನೆಟ್ ಬೌಲಿಂಗ್ ಕರಾಮತ್ತಿನಿಂದ..!

T20 World Cup
T20 World Cup
Published on
ನವದೆಹಲಿ: ಟೀಮ್ ಇಂಡಿಯಾ ವಿಶ್ವಕಪ್(T20 World Cup) ಗೆದ್ದ ಸಂಭ್ರಮದಲ್ಲಿದ್ದರೆ, ಅತ್ತ ಮೈದಾನದ ಹೊರಗಿನ ತನ್ನ ನಡವಳಿಕೆಯಿಂದ ಹೈದರಾಬಾದ್ ಹೈದ ಮೊಹಮ್ಮದ್ ಸಿರಾಜ್(Mohd Siraj) ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಅಂತಿಮ ಪಂದ್ಯದ ನಂತರ ಸಿರಾಜ್ ನೀಡಿದ ಒಂದು ಹೇಳಿಕೆ ಈಗ ಇಡೀ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಶ್ವಕಪ್ ವಿಜಯದ ನಂತರ ನಿರೂಪಕರು ಸಿರಾಜ್ ಅವರನ್ನು ಮಾತನಾಡಿಸಿ, "ನಿಮಗೆ ಈ ಗೆಲುವು ಹೇಗನ್ನಿಸುತ್ತಿದೆ?" ಎಂದು ಪ್ರಶ್ನಿಸಿದರು. ಅದಕ್ಕೆ ಅತ್ಯಂತ ವಿನಮ್ರವಾಗಿ ಉತ್ತರಿಸಿದ ಸಿರಾಜ್, "ನಾನು ಈ ಇಡೀ ಟೂರ್ನಮೆಂಟ್‌ನಲ್ಲಿ ಬೆಂಚ್ ಕಾಯ್ದಿದ್ದೇನೆ, ಆಟಗಾರರಿಗೆ ನೀರು ಹೊತ್ತಿದ್ದೇನೆ ಮತ್ತು ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದೇನೆ. ಈ ಕೆಲಸಗಳೂ ಕೂಡ ತಂಡಕ್ಕೆ ಅಷ್ಟೇ ಮುಖ್ಯ ಎಂದು ನಾನು ನಂಬುತ್ತೇನೆ. ತಂಡ ಈ ರೀತಿ ಗೆಲ್ಲುತ್ತಿದ್ದರೆ, ತೆರೆಯ ಹಿಂದೆ ನಿಂತು ಈ ಕೆಲಸಗಳನ್ನು ಮಾಡಲು ನನಗೆ ಯಾವುದೇ ಸಂಕೋಚವಿಲ್ಲ ಮತ್ತು ನಾನು ತುಂಬಾ ಸಂತೋಷವಾಗಿದ್ದೇನೆ," ಎಂದಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ಆಟಗಾರರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಸಿಗದಿದ್ದಾಗ ಅಸಮಾಧಾನ ವ್ಯಕ್ತಪಡಿಸುವುದುಂಟು. ಆದರೆ ಸಿರಾಜ್ ಅಂತಹ ಯಾವುದೇ ಅಹಂ ಪ್ರದರ್ಶಿಸದೆ, ತಂಡದ ಗೆಲುವಿಗಾಗಿ ತಾನು ಮಾಡುವ ಸಣ್ಣ ಕೆಲಸವನ್ನೂ ಹೆಮ್ಮೆಯಿಂದ ಒಪ್ಪಿಕೊಂಡಿದ್ದಾರೆ. "ತಂಡದ ಯಶಸ್ಸಿನಲ್ಲಿ ಪ್ರತಿಯೊಬ್ಬರ ಪಾತ್ರವೂ ಇರುತ್ತದೆ. ನಾನು ಆಡದೇ ಇದ್ದರೂ ನನ್ನ ತಂಡ ಗೆದ್ದಿದೆ ಎನ್ನುವುದೇ ನನಗೆ ದೊಡ್ಡ ಸಂಭ್ರಮ," ಎನ್ನುವ ಮೂಲಕ ತಮ್ಮ ಕ್ರೀಡಾ ಸ್ಫೂರ್ತಿಯನ್ನು ಮೆರೆದಿದ್ದಾರೆ ಎಂದು ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಗೌರವ ಹೆಚ್ಚಿಸಿದ ನಡೆ
ಸಿರಾಜ್ ಅವರ ಈ ಮಾತುಗಳನ್ನು ಕೇಳಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಸುರಿಮಳೆಗರೆಯುತ್ತಿದ್ದಾರೆ. "ನಿಜವಾದ ಚಾಂಪಿಯನ್ ಎಂದರೆ ಇವರೇ", "ಸಿರಾಜ್ ಅವರ ಸರಳತೆ ನಮಗೆ ಮಾದರಿ" ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಭಾರತ ತಂಡದ ಬೌಲಿಂಗ್ ಬೆನ್ನೆಲುಬಾಗಿರುವ ಸಿರಾಜ್, ವೈಯಕ್ತಿಕ ಸಾಧನೆಗಿಂತ ದೇಶದ ಗೆಲುವು ದೊಡ್ಡದು ಎಂದು ಸಾಬೀತುಪಡಿಸಿದ್ದಾರೆ. ಈ ಹಿಂದೆ ಏಷ್ಯಾ ಕಪ್ ಫೈನಲ್‌ನಲ್ಲಿ ಮ್ಯಾಜಿಕ್ ಮಾಡಿದ್ದ ಸಿರಾಜ್, ಈಗ ವಿಶ್ವಕಪ್‌ನಲ್ಲಿ ತಂಡದ ಗೆಲುವಿಗಾಗಿ 'ವಾಟರ್ ಬಾಯ್' ಆಗಿ ಕೆಲಸ ಮಾಡಿದ್ದಕ್ಕೂ ಹೆಮ್ಮೆ ಪಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net