ಅಭಿಷೇಕ್ ದಾಖಲೆಯ ಶತಕ, ರೆಡ್ಡಿ, ಬಿಷ್ಣೋಯ್ ಮಿಂಚಿನ ಬೌಲಿಂಗ್: ಅಫ್ಘಾನ್ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ! | INDvsAFG

INDvsAFG | ಅಫ್ಘಾನ್ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ!
INDvsAFG | ಅಫ್ಘಾನ್ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ!
Published on
INDvsAFG: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸ್ಫೋಟಕ ಆಟಗಾರ ಅಭಿಷೇಕ್ ಶರ್ಮಾ ಅಕ್ಷರಶಃ ರನ್ ಮಳೆಗೈದಿದ್ದಾರೆ. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡವು ಅಫ್ಘಾನಿಸ್ತಾನವನ್ನು 127 ರನ್‌ಗಳ ಭಾರಿ ಅಂತರದಿಂದ ಮಣಿಸಿ, 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 221 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡವು ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿ 94 ರನ್​​ಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿತು.
ಬೃಹತ್​ ಮೊತ್ತ ಬೆನ್ನತ್ತಿದ ಅಫ್ಘಾನ ಪರ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ 15 ರನ್ ಹಾಗೂ ನಾಯಕ ಇಬ್ರಾಹಿಮ್ ಜದ್ರಾನ್ 25 ರನ್ ಗಳಿಸಿ ಉತ್ತಮ ಆರಂಭ ಒದಗಿಸಲು ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಸೆದಿಕ್ಉಲ್ಲಾ ಅಟಲ್ ಕೇವಲ 1 ರನ್ ಗಳಿಸಿ ಔಟಾದರೆ, ದರ್ವಿಶ್ ರಸೂಲಿ ಖಾತೆ ತೆರೆಯುವ ಮೊದಲೇ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ನಂತರ ಬಂದ ನೂರ್ ಉಲ್ ರಹಮಾನ್ 11 ರನ್ ಗಳಿಸಿ ನಿರ್ಗಮಿಸಿದರು. ಅನುಭವಿ ಆಟಗಾರರಾದ ಅಜ್ಮತುಲ್ಲಾ ಒಮರ್‌ಜಾಯ್ ಹಾಗೂ ಮಾಜಿ ನಾಯಕ ಮೊಹಮ್ಮದ್ ನಬಿ ಕೂಡ ಭಾರತದ ಬೌಲಿಂಗ್ ದಾಳಿಯ ಮುಂದೆ ದೀರ್ಘಕಾಲ ಕ್ರೀಸ್‌ನಲ್ಲಿ ನಿಲ್ಲಲು ವಿಫಲರಾಗಿ ಅಲ್ಪ ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು.
ಕೊನೆಯಲ್ಲಿ ಬಂದ ಬಾಲಂಗೋಚಿಗಳು ಕೂಡ ರನ್ ಗಳಿಸುವ ಭರದಲ್ಲಿ ಬೇಗನೆ ವಿಕೆಟ್ ಒಪ್ಪಿಸಿದರು. ಭಾರತದ ಶಿಸ್ತುಬದ್ಧ ಬೌಲಿಂಗ್ ಮತ್ತು ಮಾರಕ ದಾಳಿಗೆ ನಲುಗಿದ ಅಫ್ಘಾನ್ ಬ್ಯಾಟಿಂಗ್ ಪಡೆ ಸಂಪೂರ್ಣವಾಗಿ ಧೂಳೀಪಟವಾಯಿತು. ಪರಿಣಾಮವಾಗಿ ಇಡೀ ತಂಡವು ದೊಡ್ಡ ಮೊತ್ತದ ಗುರಿಯನ್ನು ತಲುಪಲು ಸಾಧ್ಯವಾಗದೆ ಸತತ ವಿಕೆಟ್‌ಗಳನ್ನು ಕಳೆದುಕೊಂಡು ಭಾರೀ ಅಂತರದ ಸೋಲನ್ನು ಅನುಭವಿಸಬೇಕಾಯಿತು. ಭಾರತದ ಪರವಾಗಿ ನಿತೀಶ್ ಕುಮಾರ್ ರೆಡ್ಡಿ, ರವಿ ಬಿಷ್ಣೋಯ್ 3 ವಿಕೆಟ್ ಪಡೆದು ಮಿಂಚಿದರು.

ಯುವಿ ಶಿಷ್ಯನಿಂದ ರನ್ ಅಭಿಷೇಕ!...

ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ, ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಧಮಾಕಾ ನಡೆಸಿತು. ಮೈದಾನದ ದಿಕ್ಕುಗಳಿಗೂ ಬೌಂಡರಿ, ಸಿಕ್ಸರ್‌ಗಳ ಮಳೆ ಹರಿಸಿದ ಶರ್ಮಾ, ಕೇವಲ 30 ಎಸೆತಗಳಲ್ಲಿ ಮೂರಂಕಿ ಮೊತ್ತ ತಲುಪುವ ಮೂಲಕ ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಜಾಗತಿಕ ದಾಖಲೆ ಬರೆದರು. ಈ ಹಿಂದೆ 33 ಎಸೆತಗಳಲ್ಲಿ ಶತಕ ಬಾರಿಸಿದ್ದ ಜಿಂಬಾಬ್ವೆಯ ಸಿಕಂದರ್ ರಾಜಾ ಹಾಗೂ ನ್ಯೂಜಿಲೆಂಡ್‌ನ ಫಿನ್ ಅಲೆನ್ ಅವರ ಸಾರ್ವಕಾಲಿಕ ದಾಖಲೆಯನ್ನು ಅಭಿಷೇಕ್ ಸುಲಭವಾಗಿ ಧೂಳೀಪಟ ಮಾಡಿದರು.

11 ಸಿಕ್ಸರ್, 9 ಫೋರ್‌!...

ಅಫ್ಘಾನಿಸ್ತಾನದ ಪ್ರಮುಖ ಬೌಲರ್‌ಗಳಾದ ಫಜಲ್ಹಕ್ ಫಾರೂಕಿ, ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಅವರನ್ನೇ ಗುರಿಯಾಗಿಸಿಕೊಂಡು ಆಕ್ರಮಣಕಾರಿ ಆಟವಾಡಿದ ಅಭಿಷೇಕ್, ಮೈದಾನದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿದರು. ಅಂತಿಮವಾಗಿ ಅಭಿಷೇಕ್ ಕೇವಲ 34 ಎಸೆತಗಳಲ್ಲಿ 9 ಭರ್ಜರಿ ಬೌಂಡರಿ ಹಾಗೂ 11 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ 108 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಅಫ್ಘಾನಿಸ್ತಾನ ತಂಡದ ನಾಯಕ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಯುವ ಆಟಗಾರ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲೂ ಬೆಂಚ್ ಕಾಯಬೇಕಾಯಿತು. ಟೀಮ್ ಇಂಡಿಯಾ ಆರಂಭಿಕ ಆಟಗಾರರು ನೀಡಿದ ಸ್ಫೋಟಕ ಆರಂಭದ ಬಲದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 221 ರನ್‌ಗಳ ಬೃಹತ್​ ಗುರಿಯನ್ನು ಅಫ್ಘಾನಿಸ್ತಾನಕ್ಕೆ ನೀಡಲು ಸಾಧ್ಯವಾಯಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net