ಕೇಂದ್ರ ಅನುಮತಿ ಕೊಟ್ಟರೆ ಮೇಕೆದಾಟು,ಯುಕೆಪಿ ಯೋಜನೆಗಳ ಜಾರಿ-DKS

ಡಿಸಿಎಂ ಡಿ.ಕೆ.ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್
Published on
ಬೆಂಗಳೂರು: ಕೇಂದ್ರದಿಂದ ಅನುಮತಿ ಸಿಕ್ಕರೆ ನಮ್ಮ ಸರ್ಕಾರ, ತಕ್ಷಣ ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆಯ ಬಾಕಿ ಯೋಜನೆ ಜಾರಿ ಮಾಡಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡುವ ಭರವಸೆ ಇದೆ ಎಂದು ಜಲಸಂಪನ್ಮೂಲ ಸಚಿವ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಜಲಶಕ್ತಿ ಮಂತ್ರಾಲಯ, ಕೇಂದ್ರ ಜಲ ಆಯೋಗ(ಸಿಡಬ್ಲ್ಯುಸಿ) ಹಾಗೂ ವಿಶ್ವಬ್ಯಾಂಕ್ ಸೇರಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ, ‘ಸುರಕ್ಷಿತ ಮತ್ತು ಭದ್ರವಾದ ಅಣೆಕಟ್ಟುಗಳು’ ಎಂಬ ವಿಷಯದಡಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ’ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಡಿಸಿಎಂ ಮಾತನಾಡಿದರು.
ಎಲ್ಲರಿಗೂ ನೀರು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಸಮತೋಲಿದ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದು, ಇತ್ತೀಚೆಗೆ ಸುಪ್ರೀಂಕೋರ್ಟ್ ಈ ಯೋಜನೆ ಪರವಾಗಿ ತೀರ್ಪು ನೀಡಿದೆ. ಆ ಮೂಲಕ ಯೋಜನೆಯನ್ನು ಜಾರಿ ಮಾಡಲಿದ್ದೇವೆ. ಕೇಂದ್ರದ ಅನುಮತಿಗೆ ಕಾಯುತ್ತಿದ್ದೇವೆ. ಈ ಯೋಜನೆಯಿಂದ ಬೆಂಗಳೂರು ಸೇರಿ ರಾಜ್ಯದ ಕೆಲ ಭಾಗದ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಪಾರದರ್ಶಕ ನೀತಿ ತರಲಾಗಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ 2013ರ ಕಾಯ್ದೆ ಅನುಸಾರ ಉತ್ತಮ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. 2025ರ ಡಿಸೆಂಬರ್ ವೇಳೆಗೆ ನಮ್ಮಲ್ಲಿ 1.72 ಲಕ್ಷ ಎಕರೆಯಷ್ಟು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಅಣೆಕಟ್ಟು ಸುರಕ್ಷತಾ ಮಾರ್ಗಸೂಚಿಯಲ್ಲಿ ಅಣೆಕಟ್ಟಿನ ಸುತ್ತ 500 ಮೀಟರ್‌ವರೆಗೂ ವಿಧಿಸಲಾಗಿರುವ ನಿಬಂಧನೆಯನ್ನು ಸಡಿಲಗೊಳಿಸಬೇಕು. ಆ ಮೂಲಕ ಅಣೆಕಟ್ಟುಗಳ ಬಳಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿ ಸ್ಥಳೀಯ ಆರ್ಥಿಕತೆಗೆ ನೆರವಾಗಬೇಕು ಎಂದು ಕೇಂದ್ರಕ್ಕೆ ಕೋರಿದರು.
ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ ಮೂಲಕ ಅನೇಕ ನೆರವು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಇದರ 2ನೇ ಹಂತವನ್ನು ಜಾರಿಗೊಳಿಸಲಾಗುತ್ತಿದ್ದು, 58 ಅಣೆಕಟ್ಟುಗಳ ದುರಸ್ತಿ ಕಾಮಗಾರಿಗಳಿಗೆ 1,500 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ. ಅಣೆಕಟ್ಟುಗಳು ನಮ್ಮ ದೇಶದ ಶಕ್ತಿ ಹಾಗೂ ಪ್ರಗತಿಯ ಪ್ರತೀಕ. ಅಣೆಕಟ್ಟುಗಳು ನಮ್ಮ ಭವಿಷ್ಯವನ್ನು ಕಾಪಾಡಿ, ರೈತರನ್ನು ಸಶಕ್ತರನ್ನಾಗಿ ಮಾಡುತ್ತದೆ. ಅನೇಕ ಅಣೆಕಟ್ಟುಗಳು 60-70 ವರ್ಷಗಳ ಹಳೆಯದಾಗಿವೆ. ಹೀಗಾಗಿ, ಅಣೆಕಟ್ಟುಗಳ ಮೂಲಸೌಕರ್ಯ ದುರಸ್ತಿ ಕಾಮಗಾರಿಗಳು ಅಗತ್ಯವಾಗಿವೆ.ಅನಿರೀಕ್ಷಿತ ಹವಾಮಾನ ವೈಪರಿತ್ಯ ಹೆಚ್ಚಿನ ಸವಾಲೊಡ್ಡಿದೆ. ಅತಿಯಾದ ಮಳೆ, ಪ್ರವಾಹ ದೇಶದೆಲ್ಲೆಡೆ ಸಮಸ್ಯೆಯಾಗಿ ತಲೆದೋರಿವೆ. ನಮ್ಮ ಊಹೆಗಳ ಆಧಾರದ ಮೇಲೆ ಭವಿಷ್ಯದ ಅಣೆಕಟ್ಟುಗಳ ನಿರ್ವಹಣೆ ಅಸಾಧ್ಯ. ಹೀಗಾಗಿ ಎಲ್ಲಾ ಸವಾಲಿಗೆ ಪೂರ್ವ ತಯಾರಿ ಮಾಡಿಕೊಳ್ಳುವ ಆಯ್ಕೆಯಾಗಿ ಉಳಿದಿಲ್ಲ, ಅನಿವಾರ್ಯತೆಯಾಗಿದೆ ಎಂದು ಡಿಕೆಶಿ ತಿಳಿಸಿದರು.
ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು ಭಾರತದ ಅಣೆಕಟ್ಟುಗಳಿಗೆ ಸುರಕ್ಷತಾ ಮಾನದಂಡ ಅಳವಡಿಸಬೇಕಿದೆ. ಭಾರತದ ಡ್ಯಾಂಗಳಿಗೆ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುವ ಕ್ರಮಗಳಿಗೆ ಸಹಕಾರ ನೀಡಲು ವಿಶ್ವಬ್ಯಾಂಕ್ ಉತ್ಸುಕವಾಗಿದೆ.
| ಜೊಹನ್ನೆಸ್ ಕಾರ್ನೆಲ್ಸ್ ಮಾರಿಯಾ ಜಟ್, ವಿಶ್ವಬ್ಯಾಂಕ್ ಉಪಾಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net