ಕೇರಳದಲ್ಲಿ ಮಾದಕ ದ್ರವ್ಯ ಜಾಲವನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯುವುದಾಗಿ ಪ್ರಕಟಿಸಿರುವ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು, ಯುವಕರು ನಾಲಿಗೆಗೆ ಮಂಡಲ ಹಾವಿನ ಮರಿಗಳಿಂದ ಕಚ್ಚಿಸಿಕೊಂಡು ಮಾದಕತೆ ಅಥವಾ ಮತ್ತು ಪಡೆಯುವಂತಹ ಪಾರ್ಲರ್ಗಳು ಕಾರ್ಯಾಚರಿಸುತ್ತಿವೆ ಎಂಬ ಆಘಾತಕಾರಿ ಹೇಳಿಕೆ ನೀಡಿದರು. ಗೃಹ ಸಚಿವರಾದ ಬಳಿಕ ರಾಜ್ಯಾದ್ಯಂತ ಮಾದಕ ದ್ರವ್ಯ ದಂಧೆಯ ವಿರುದ್ಧ ಹಮ್ಮಿಕೊಂಡಿರುವ 'ಆಪರೇಷನ್ ತೂಫಾನ್' ಕಾರ್ಯಾಚರಣೆಯು ಎಲ್ಲಾ ಜಿಲ್ಲೆಗಳಲ್ಲೂ ಅತ್ಯಂತ ಯಶಸ್ವಿಯಾಗಿ ಮುಂದುವರಿದಿದ್ದು, ನಿನ್ನೆಯವರೆಗೆ ಒಟ್ಟು 4,146 ಪ್ರಕರಣಗಳು ದಾಖಲಾಗಿವೆ ಮತ್ತು ವಿವಿಧ ಮಾದಕ ದ್ರವ್ಯ ದಂಧೆಗಳಿಗೆ ಸಂಬಂಧಿಸಿದಂತೆ ಈವರೆಗೆ 4,471 ಜನರನ್ನು ಬಂಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಆದರೆ, ಅವರು ನೀಡಿದ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಜವಾಬ್ದಾರಿಯುತ ರಾಜಕಾರಣಿಯಾಗಿ ಈ ರೀತಿ ಹೇಳಿಕೆ ನೀಡಬಾರದಿತ್ತು ಎಂಬ ಚರ್ಚೆ ಜೋರಾಗಿದೆ. ಚೆನ್ನಿತ್ತಲ ಅವರ ಈ ಹೇಳಿಕೆಯನ್ನು ವೈದ್ಯಕೀಯ ತಜ್ಞರು ತೀವ್ರವಾಗಿ ಖಂಡಿಸಿದ್ದು, ಮಂಡಲ ಹಾವಿನ ವಿಷವು ರಕ್ತಕ್ಕೆ ಹಾನಿ ಮಾಡುವಂತಹ 'ಹೀಮೋಟಾಕ್ಸಿಕ್' ವಿಷವಾಗಿದೆಯೇ ಹೊರತು ಅದು ಯಾವುದೇ ರೀತಿಯ ಮಾದಕತೆ ಅಥವಾ ಮತ್ತನ್ನು ನೀಡುವುದಿಲ್ಲ, ಮಂಡಲದ ಹಾವು ನಾಲಿಗೆಗೆ ಕಚ್ಚಿದರೆ ಮನುಷ್ಯ ಕ್ಷಣಾರ್ಧದಲ್ಲಿ ಸಾವಿಗೀಡಾಗುತ್ತಾನೆ ಎಂದು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).