ಬಿಹಾರ ಸೋಲಿಗೆ ಸ್ಥಳೀಯ ನಾಯಕರ ಜೊತೆ ನಾನೂ ಕೂಡ ಹೊಣೆಗಾರ; ರಾಹುಲ್ ಗಾಂಧಿ | Rahul Gandhi

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Published on
ನವದೆಹಲಿ: ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಸ್ಥಳೀಯ ನಾಯಕರ ಜೊತೆ ತಾನೂ ಕೂಡ ಸಮಾನ ಹೊಣೆಗಾರನಾಗಿದ್ದೇನೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ ಎಂದು ಶನಿವಾರ(ನ. 29) ವರದಿಯಾಗಿದೆ.
ಬಿಹಾರ ಚುನಾವಣೆಯಲ್ಲಿ ಕೆಲಸ ಮಾಡಿದ ಮತ್ತು ಸ್ಪರ್ಧಿಸಿ ಸೋತ ಅಭ್ಯರ್ಥಿಗಳ ಜೊತೆ ಶುಕ್ರವಾರ(ನ. 28) ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸಿ ಆಂತರಿಕ ಪರಿಶೀಲನೆ ನಡೆಸಿದ ವೇಳೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಬಿಹಾರದಲ್ಲಿ ಕಾಂಗ್ರೆಸ್ ಸೋಲಿಗೆ ಚುನಾವಣಾ ಆಯೋಗ ಕೈಗೊಂಡ ಎಸ್​ಐಆರ್ ಪ್ರಕ್ರಿಯೆಯೇ ಕಾರಣ ಎಂದು ಸ್ಥಳೀಯ ನಾಯಕರು ಹೇಳಿದ್ದಾರೆ. ಇನ್ನೂ ಸೋಲಿನ ಬಗ್ಗೆ ಆಲೋಚಿಸಬೇಡಿ ಇತರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಕಡೆ ಗಮನ ನೀಡಿ ಎಂದು ರಾಹುಲ್ ನಾಯಕರಿಗೆ ಸೂಚಿಸಿದ್ದಾರೆ.
ಪಕ್ಷದ ಸಾಂಸ್ಥಿಕ ದೌರ್ಬಲ್ಯಗಳು ಕಾಂಗ್ರೆಸ್‌ಗೆ ಹಾನಿ ಮಾಡಿವೆ ಎಂಬ ವಾದವನ್ನು ಸಭೆಯಲ್ಲಿ ರಾಹುಲ್ ಗಾಂಧಿ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಅದು ನಿಜವಾಗಿದ್ದರೆ ಪಕ್ಷದ ಬಲವಾದ ಕೇಡರ್​ಗಳನ್ನು ಹೊಂದಿರುವ ಆರ್‌ಜೆಡಿ ಮತ್ತು ಎಡಪಕ್ಷಗಳು ಏಕೆ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದು, ಪಕ್ಷವನ್ನು ಹಾನಿಗೊಳಿಸಿದ ಅಂಶಗಳನ್ನು ನಿರ್ದಿಷ್ಟವಾಗಿ ಗುರುತಿಸಬೇಕು ಮತ್ತು ಇತರ ರಾಜ್ಯಗಳಲ್ಲಿ ಅವು ಪುನರಾವರ್ತನೆಯಾಗದಂತೆ ಎಚ್ಚರವಹಿಸಿ ಎಂದು ನಿರ್ದೇಶನ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net