ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಟ್ರಂಪ್ರ ಒಂದೇ ಒಂದು ನಿರ್ಧಾರಕ್ಕೆ ಹೂಡಿಕೆದಾರರು ತಲ್ಲಣ | Gold-Silver Price Drop
ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಟ್ರಂಪ್ರ ಒಂದೇ ಒಂದು ನಿರ್ಧಾರಕ್ಕೆ ಹೂಡಿಕೆದಾರರು ತಲ್ಲಣ
Published on:
Copied
Follow Us
ಮುಂಬೈ: ಜಾಗತಿಕ ರಾಜಕೀಯ ಉದ್ವಿಗ್ನತೆ ಕಡಿಮೆಯಾದ ಬೆನ್ನಲ್ಲೇ ಭಾರತೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು(Gold-Silver Price Drop) ಗುರುವಾರ (ಜ.22) ಭಾರಿ ಕುಸಿತ ಕಂಡಿವೆ. ವಿಶೇಷವಾಗಿ ಗೋಲ್ಡ್ ಮತ್ತು ಸಿಲ್ವರ್ ಇಟಿಎಫ್ಗಳು (ETFs) ಒಂದೇ ದಿನದಲ್ಲಿ ಶೇ. 20ಕ್ಕೂ ಹೆಚ್ಚು ಇಳಿಕೆ ಕಾಣುವ ಮೂಲಕ ಹೂಡಿಕೆದಾರರನ್ನು ಅಚ್ಚರಿಗೊಳಿಸಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೀನ್ಲ್ಯಾಂಡ್ ಸ್ವಾಧೀನದ ವಿಷಯದಲ್ಲಿ ಐರೋಪ್ಯ ರಾಷ್ಟ್ರಗಳ ಮೇಲೆ ಹೇರಲು ಉದ್ದೇಶಿಸಿದ್ದ ಕಠಿಣ ಸುಂಕಗಳನ್ನು ರದ್ದುಗೊಳಿಸಿದ ಬೆನ್ನಲ್ಲೇ ಈ ಬದಲಾವಣೆ ಕಂಡುಬಂದಿದೆ.
ಟ್ರಂಪ್ ನಿರ್ಧಾರದಿಂದ ಮಾರುಕಟ್ಟೆ ನಿರಾಳ
ಗ್ರೀನ್ಲ್ಯಾಂಡ್ ಖರೀದಿಯ ಅಮೆರಿಕದ ಬೇಡಿಕೆಯನ್ನು ವಿರೋಧಿಸಿದ್ದ ಯುರೋಪಿಯನ್ ರಾಷ್ಟ್ರಗಳ ಮೇಲೆ ಫೆಬ್ರವರಿ 1ರಿಂದ ಶೇ.10ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಈ ಹಿಂದೆ ಎಚ್ಚರಿಕೆ ನೀಡಿದ್ದರು. ಇದು ಜಾಗತಿಕ ವ್ಯಾಪಾರ ಸಮರಕ್ಕೆ ನಾಂದಿ ಹಾಡಬಹುದು ಎಂಬ ಭೀತಿಯಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡಿದ್ದರು. ಇದರಿಂದ ಬೆಲೆಗಳು ಸತತವಾಗಿ ಏರುತ್ತಾ ಹೊಸ ದಾಖಲೆ ಬರೆದಿದ್ದವು.
ಆದರೆ, ದಾವೋಸ್ನಲ್ಲಿ ನಡೆದ ಮಾತುಕತೆಗಳ ನಂತರ ಟ್ರಂಪ್, ನಾವು ನ್ಯಾಟೋ ಜೊತೆ ಒಂದು ಒಪ್ಪಂದಕ್ಕೆ ಬಂದಿದ್ದೇವೆ. ಹಾಗಾಗಿ ಸದ್ಯಕ್ಕೆ ಯಾವುದೇ ಸುಂಕಗಳನ್ನು ವಿಧಿಸುವುದಿಲ್ಲ ಎಂದು ಘೋಷಿಸಿದರು. ಈ ಸಕಾರಾತ್ಮಕ ಸುದ್ದಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಭಯದ ವಾತಾವರಣ ಕಡಿಮೆಯಾಗಿ, ಹೂಡಿಕೆದಾರರು ಚಿನ್ನದಿಂದ ಹಣವನ್ನು ಹಿಂಪಡೆದು ಷೇರು ಮಾರುಕಟ್ಟೆಯತ್ತ ಹರಿಸಿದ್ದಾರೆ.
MCX ನಲ್ಲಿ ಬೆಲೆಗಳ ಕುಸಿತದ ವಿವರ
ಭಾರತದ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಬುಧವಾರವಷ್ಟೇ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ದಿಢೀರ್ ಇಳಿಕೆಯಾಗಿವೆ:
ಚಿನ್ನ: 10 ಗ್ರಾಂಗೆ ಸುಮಾರು ₹4,000 ಕ್ಕಿಂತ ಹೆಚ್ಚು ಕುಸಿತ ಕಂಡಿದೆ.
ಬೆಳ್ಳಿ: ಪ್ರತಿ ಕೆಜಿಗೆ ಸುಮಾರು ₹20,000 ದಿಂದ ₹30,000 ರಷ್ಟು ಭಾರಿ ಇಳಿಕೆ ದಾಖಲಿಸಿದೆ.
ETFs: ಬೆಳ್ಳಿ ಇಟಿಎಫ್ಗಳು (ಉದಾಹರಣೆಗೆ ಟಾಟಾ ಸಿಲ್ವರ್ ಇಟಿಎಫ್) ಶೇ. 21 ರಷ್ಟು ಕುಸಿತ ಕಂಡರೆ, ಚಿನ್ನದ ಇಟಿಎಫ್ಗಳು ಶೇ. 12 ರಷ್ಟು ಇಳಿಕೆಯಾಗಿವೆ.
ಆಭರಣ ಪ್ರಿಯರಿಗೆ ಸಿಹಿ ಸುದ್ದಿ
ಕಳೆದ ಒಂದು ವಾರದಿಂದ ಗಗನಕ್ಕೇರಿದ್ದ ಚಿನ್ನದ ಬೆಲೆಯಿಂದ ಕಂಗೆಟ್ಟಿದ್ದ ಆಭರಣ ಪ್ರಿಯರಿಗೆ ಈ ಇಳಿಕೆ ಸಮಾಧಾನ ತಂದಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆ ₹1,54,310 ಆಸುಪಾಸಿನಲ್ಲಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ ₹3,20,000 ಕ್ಕೆ ಇಳಿದಿದೆ,(ಏಜೆನ್ಸೀಸ್).