ತಿಂಗಳ ಸಂಬಳದಲ್ಲಿ ಪೆಟ್ರೋಲ್-ಡೀಸೆಲ್​ಗಾಗಿ ಎಷ್ಟು ಖರ್ಚು ಮಾಡ್ತಾರೆ ಭಾರತೀಯರು? ಇಲ್ಲಿದೆ ಜಾಗತಿಕ ವರದಿ ಬಿಚ್ಚಿಟ್ಟ ಸತ್ಯ... Petrol And Diesel

ತಿಂಗಳ ಸಂಬಳದಲ್ಲಿ ಪೆಟ್ರೋಲ್-ಡೀಸೆಲ್​ಗಾಗಿ ಎಷ್ಟು ಖರ್ಚು ಮಾಡ್ತಾರೆ ಭಾರತೀಯರು? ಇಲ್ಲಿದೆ ಜಾಗತಿಕ ವರದಿ ಬಿಚ್ಚಿಟ್ಟ ಸತ್ಯ... Petrol And Diesel
ತಿಂಗಳ ಸಂಬಳದಲ್ಲಿ ಪೆಟ್ರೋಲ್-ಡೀಸೆಲ್​ಗಾಗಿ ಎಷ್ಟು ಖರ್ಚು ಮಾಡ್ತಾರೆ ಭಾರತೀಯರು? ಇಲ್ಲಿದೆ ಜಾಗತಿಕ ವರದಿ ಬಿಚ್ಚಿಟ್ಟ ಸತ್ಯ... Petrol And Diesel
Published on

ಪ್ರಮುಖ ಮುಖ್ಯಾಂಶಗಳು

  • ಒಬ್ಬ ಸರಾಸರಿ ಭಾರತೀಯ ತನ್ನ ತಿಂಗಳ ಸಂಬಳದ ಶೇ. 8 ರಿಂದ 10 ರಷ್ಟು ಹಣವನ್ನು ಪೆಟ್ರೋಲ್-ಡೀಸೆಲ್‌ಗೆ ಖರ್ಚು ಮಾಡ್ತಾನೆ
  • ಪಾಕಿಸ್ತಾನ, ನೇಪಾಳ ಮತ್ತು ಮ್ಯಾನ್ಮಾರ್‌ ದೇಶಗಳಲ್ಲಿ ಜನರ ಅರ್ಧದಷ್ಟು ಮಾಸಿಕ ಆದಾಯ ಇಂಧನಕ್ಕೇ ವ್ಯಯ
  • ತೈಲ ಕಂಪನಿಗಳ ನಷ್ಟ ಸರಿದೂಗಿಸಲು ಒಂದೇ ವಾರದಲ್ಲಿ ಪೆಟ್ರೋಲ್-ಡೀಸೆಲ್ ದರ ಮೊದಲು 3 ರೂ. ಹಾಗೂ ಇಂದು 90 ಪೈಸೆ ಹೆಚ್ಚಳ
  • ಇಂಧನ ದರ ಏರಿಕೆ ಬೆನ್ನಲ್ಲೇ ಪೆಟ್ರೋಲ್ ರಫ್ತಿನ ಮೇಲೆ ಪ್ರತಿ ಲೀಟರ್‌ಗೆ 3 ರೂ. ವಿಂಡ್‌ಫಾಲ್ ತೆರಿಗೆ ವಿಧಿಸಲಾಗಿದೆ
Petrol And Diesel : ದೇಶದ ವಿದೇಶಿ ವಿನಿಮಯವನ್ನು ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ಅನುಸರಿಸಿ ದೇಶಾದ್ಯಂತ ವಿವಿಧ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಪ್ರಧಾನಿಯವರು ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ನಿಲ್ಲಿಸಲು, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಹಾಗೂ ವಿದೇಶಿ ಪ್ರವಾಸಗಳನ್ನು ಮುಂದೂಡಲು ಜನರಿಗೆ ಕರೆ ನೀಡಿದರು. ಪ್ರಧಾನ ಮಂತ್ರಿಯವರ ಈ ಮನವಿಯ ಬೆನ್ನಲ್ಲೇ ಕಾರ್ಯಪ್ರವೃತ್ತವಾಗಿರುವ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 15 ಕ್ಕೆ ಹೆಚ್ಚಿಸಿದೆ ಮತ್ತು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನೂ ಒಂದೇ ವಾರದಲ್ಲಿ ಎರಡು ಬಾರಿ ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಒಬ್ಬ ಸರಾಸರಿ ಭಾರತೀಯನ ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಾಗಿಯೇ ಎಷ್ಟು ಹಣ ಖರ್ಚಾಗುತ್ತದೆ ಎಂಬುದನ್ನು ನಾವೀಗ ತಿಳಿಯೋಣ.
'ಗ್ಲೋಬಲ್ ಪೆಟ್ರೋಲ್ ಪ್ರೈಸಸ್' (globalpetrolprices.com) ಇತ್ತೀಚೆಗೆ ಬಿಡುಗಡೆ ಮಾಡಿರುವ "ಗ್ಯಾಸೋಲಿನ್ ಅಫರ್ಡಬಿಲಿಟಿ" (Gasoline Affordability) ಎಂಬ ಜಾಗತಿಕ ವರದಿಯು, ವಿಶ್ವದ ವಿವಿಧ ದೇಶಗಳ ಸರಾಸರಿ ವ್ಯಕ್ತಿಯೊಬ್ಬ ತನ್ನ ಮಾಸಿಕ ಆದಾಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ಎಷ್ಟು ಹಣವನ್ನು ಖರ್ಚು ಮಾಡುತ್ತಾನೆ ಎಂಬುದನ್ನು ಅಂದಾಜಿಸಿದೆ.
ವಿಶ್ವಬ್ಯಾಂಕ್‌ನ ತಲಾ ಆದಾಯದ ಮಾಹಿತಿ ಮತ್ತು ಜಿಡಿಪಿ (GDP) ದತ್ತಾಂಶಗಳನ್ನು ಬಳಸಿ ಸಿದ್ಧಪಡಿಸಲಾದ ಈ ವರದಿಯ ಪ್ರಕಾರ, ಸರಾಸರಿ ವ್ಯಕ್ತಿಯೊಬ್ಬ ತಿಂಗಳಿಗೆ ಅಂದಾಜು 40 ಲೀಟರ್ ಇಂಧನ ಬಳಸುತ್ತಾನೆ ಎಂದು ಪರಿಗಣಿಸಲಾಗಿದ್ದು, ಇದರ ಅನ್ವಯ ಒಬ್ಬ ಸರಾಸರಿ ಭಾರತೀಯನು ತನ್ನ ಮಾಸಿಕ ಸಂಬಳದ ಸರಿಸುಮಾರು ಶೇ. 8 ರಿಂದ 10 ರಷ್ಟು ಹಣವನ್ನು ಕೇವಲ ಪೆಟ್ರೋಲ್ ಮತ್ತು ಡೀಸೆಲ್‌ಗಾಗಿಯೇ ಖರ್ಚು ಮಾಡುತ್ತಾನೆ ಎಂದು ತಿಳಿಸಲಾಗಿದೆ.

ಪಾಕಿಸ್ತಾನ ಹಾಗೂ ನೇಪಾಳ ಪರಿಸ್ಥಿತಿ

ವರದಿಯ ಪ್ರಕಾರ, ಪಾಕಿಸ್ತಾನ, ನೇಪಾಳ ಮತ್ತು ಮ್ಯಾನ್ಮಾರ್‌ನಂತಹ ದೇಶಗಳಲ್ಲಿನ ಸಾಮಾನ್ಯ ಜನರ ಪರಿಸ್ಥಿತಿ ತೀರಾ ಕಷ್ಟಕರವಾಗಿದ್ದು, ಅಲ್ಲಿನ ಸರಾಸರಿ ವ್ಯಕ್ತಿಯೊಬ್ಬ ತನ್ನ ಮಾಸಿಕ ಸಂಬಳದ ಶೇ. 47 ರಿಂದ 52 ರಷ್ಟು ಹಣವನ್ನು ಕೇವಲ ಪೆಟ್ರೋಲ್ ಮತ್ತು ಡೀಸೆಲ್‌ಗಾಗಿಯೇ ಖರ್ಚು ಮಾಡುತ್ತಾನೆ. ಅಂದರೆ, ಈ ದೇಶಗಳಲ್ಲಿ ಒಬ್ಬ ವ್ಯಕ್ತಿಯ ಅರ್ಧದಷ್ಟು ಆದಾಯವು ಇಂಧನ ಖರೀದಿಸುವುದಕ್ಕೇ ವ್ಯಯವಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಕತಾರ್ ಮತ್ತು ಕುವೈತ್‌ನಂತಹ ದೇಶಗಳಲ್ಲಿ ಸರಾಸರಿ ವ್ಯಕ್ತಿಯೊಬ್ಬ 40 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲು ತನ್ನ ಮಾಸಿಕ ಆದಾಯದ ಕೇವಲ ಶೇ. 1 ರಿಂದ 2 ರಷ್ಟು ಹಣವನ್ನು ಮಾತ್ರ ಖರ್ಚು ಮಾಡುತ್ತಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಂದೇ ವಾರದಲ್ಲಿ 2 ಬಾರಿ ಇಂಧನ ದರ ಏರಿಕೆ

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಭಾರಿ ಪ್ರಮಾಣದಲ್ಲಿ ಜಿಗಿಯಲು ಕಾರಣವಾಗಿದೆ. ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ದೇಶದ ತೈಲ ಮಾರುಕಟ್ಟೆ ಕಂಪನಿಗಳು ದಿನಕ್ಕೆ 1000-1200 ಕೋಟಿ ರೂಪಾಯಿಗಳಷ್ಟು ನಷ್ಟ ಎದುರಿಸುತ್ತಿದ್ದು, ಈ ನಷ್ಟವನ್ನು ಕಡಿಮೆ ಮಾಡಲು ಕಂಪನಿಗಳು ಏಪ್ರಿಲ್​ 15ರಂದು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ತಲಾ 3 ರೂಪಾಯಿಗಳಷ್ಟು ಹೆಚ್ಚಿಸಿದವು. ಅಲ್ಲದೆ, ಇಂದು (ಮೇ 19) ಮತ್ತೆ 90 ಪೈಸೆ ಏರಿಕೆ ಮಾಡಿವೆ. ಒಂದೇ ವಾರದಲ್ಲಿ ಎರಡು ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಕಳೆದ 4 ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿರುವುದು ಇದೇ ಮೊದಲ ಬಾರಿಯಾಗಿದ್ದು, ಇಂಧನದ ಜೊತೆಗೆ ಗ್ಯಾಸ್ ಕಂಪನಿಗಳೂ ಸಹ ಸಿಎನ್‌ಜಿ (CNG) ದರವನ್ನು ಏರಿಕೆ ಮಾಡಿವೆ.
ಪೆಟ್ರೋಲ್ ಮತ್ತು ಡೀಸೆಲ್‌ ದರ ಏರಿಕೆ ಬೆನ್ನಲ್ಲೇ ಸರ್ಕಾರವು ಪೆಟ್ರೋಲ್ ರಫ್ತಿನ ಮೇಲೆ ಪ್ರತಿ ಲೀಟರ್‌ಗೆ 3 ರೂಪಾಯಿಗಳ 'ವಿಂಡ್‌ಫಾಲ್ ಪ್ರಾಫಿಟ್ ಟ್ಯಾಕ್ಸ್' (Windfall Profit Tax) ವಿಧಿಸಿದೆ. ಇದೇ ವೇಳೆ ಡೀಸೆಲ್ ರಫ್ತು ತೆರಿಗೆಯನ್ನು ಪ್ರತಿ ಲೀಟರ್‌ಗೆ 16.5 ರೂಪಾಯಿಗಳಿಗೆ ಹಾಗೂ ವಿಮಾನ ಇಂಧನ (ATF) ತೆರಿಗೆಯನ್ನು ಪ್ರತಿ ಲೀಟರ್‌ಗೆ 16 ರೂಪಾಯಿಗಳಿಗೆ ಕಡಿತಗೊಳಿಸಿದ್ದು, ಈ ಹೊಸ ತೆರಿಗೆ ದರಗಳು ಮೇ 16 ರಿಂದ ಜಾರಿಗೆ ಬಂದಿವೆ. ಇನ್ನು ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲಿನ 'ರಸ್ತೆ ಮತ್ತು ಮೂಲಸೌಕರ್ಯ ಸೆಸ್' ಶೂನ್ಯವಾಗಿಯೇ ಮುಂದುವರಿಯಲಿದೆ ಎಂದು ಹಣಕಾಸು ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದ್ದು, ಇದನ್ನು ಹೊರತುಪಡಿಸಿ ದೇಶೀಯ ಬಳಕೆಗಾಗಿ ಅನುಮೋದಿಸಲಾದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಸ್ತಿತ್ವದಲ್ಲಿರುವ ಸುಂಕದ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net