ಅಣ್ಣಾ ಏನ್​ ಟ್ಯಾಲೆಂಟ್​ ನಿಮ್ದು... ಬೈಕ್​ ಸೀಟ್​, ಪೆಟ್ರೋಲ್​ ಟ್ಯಾಂಕ್​ ತೆರೆದ ಪೊಲೀಸರಿಗೆ ಕಾದಿತ್ತು ಅಚ್ಚರಿ! Bike

ಬೈಕ್​ ಸೀಟ್​, ಪೆಟ್ರೋಲ್​ ಟ್ಯಾಂಕ್​ ತೆರೆದ ಪೊಲೀಸರಿಗೆ ಕಾದಿತ್ತು ಅಚ್ಚರಿ
ಬೈಕ್​ ಸೀಟ್​, ಪೆಟ್ರೋಲ್​ ಟ್ಯಾಂಕ್​ ತೆರೆದ ಪೊಲೀಸರಿಗೆ ಕಾದಿತ್ತು ಅಚ್ಚರಿ
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸರು ತಪಾಸಣೆಯ ಸಮಯದಲ್ಲಿ ಹಣ ವಶಪಡಿಸಿಕೊಳ್ಳುವ ಸಾಕಷ್ಟು ಘಟನೆಗಳನ್ನು ನೋಡಿದ್ದೇವೆ
  • ಚುನಾವಣೆಯ ಸಮಯದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ಕಂಡುಬರುತ್ತವೆ
  • ಸರಿಯಾದ ಪುರಾವೆಗಳು ಅಥವಾ ಬಿಲ್‌ಗಳನ್ನು ಅವರು ತೋರಿಸಿದರೆ, ಯಾವುದೇ ಸಮಸ್ಯೆ ಇರುವುದಿಲ್ಲ
Bike : ದೇಶದ ಅನೇಕ ಸ್ಥಳಗಳಲ್ಲಿ ಪ್ರತಿದಿನ ಪೊಲೀಸರು ತಪಾಸಣೆಯ ಸಮಯದಲ್ಲಿ ಜನರಿಂದ ಅಕ್ರಮ ಅಥವಾ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಳ್ಳುವ ಸಾಕಷ್ಟು ಘಟನೆಗಳನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಚುನಾವಣೆಯ ಸಮಯದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ಕಂಡುಬರುತ್ತವೆ.
ಪ್ರತಿದಿನ, ಅನೇಕ ಜನರು ವ್ಯವಹಾರ ಅಥವಾ ಇತರ ಅಗತ್ಯಗಳಿಗಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ದೊಡ್ಡ ಪ್ರಮಾಣದ ಹಣವನ್ನು ಸಾಗಿಸುತ್ತಾರೆ. ಈ ನಿಟ್ಟಿನಲ್ಲಿ ಸರಿಯಾದ ಪುರಾವೆಗಳು ಅಥವಾ ಬಿಲ್‌ಗಳನ್ನು ಅವರು ತೋರಿಸಿದರೆ, ಯಾವುದೇ ಸಮಸ್ಯೆ ಇರುವುದಿಲ್ಲ. ಇಲ್ಲದಿದ್ದರೆ, ಸರ್ಕಾರ ಆ ಹಣವನ್ನು ವಶಪಡಿಸಿಕೊಳ್ಳುತ್ತದೆ. ಇತ್ತೀಚೆಗೆ, ತಮಿಳುನಾಡು ಹಾಗೂ ಕೇರಳ ರಾಜ್ಯ ಗಡಿಯಲ್ಲಿ ಇದೇ ರೀತಿಯ ಘಟನೆ ನಡೆದಿದೆ.
ಎಂದಿನಂತೆ, ಪೊಲೀಸರು ಗಡಿ ಪ್ರದೇಶಗಳಲ್ಲಿ ತಪಾಸಣೆ ನಡೆಸುತ್ತಿದ್ದಾಗ, ಓರ್ವ ವ್ಯಕ್ತಿ ಬೈಕ್ ಸವಾರಿ ಮಾಡುತ್ತಾ ಬರುತ್ತಾನೆ. ಪೊಲೀಸರನ್ನು ಕಂಡ ಕೂಡಲೇ ಬ್ರೇಕ್ ಹಾಕಿ ತಕ್ಷಣ ಯು-ಟರ್ನ್ ತೆಗೆದುಕೊಂಡು ಪರಾರಿಯಾಗಲು ಯತ್ನಿಸುತ್ತಾನೆ. ಇದನ್ನು ಗಮನಿಸಿದ ಪೊಲೀಸರು ತಕ್ಷಣ ಅನುಮಾನಗೊಂಡು ಆತನನ್ನು ಬೆನ್ನಟ್ಟಿ ಹಿಡಿಯುತ್ತಾರೆ.
ಇದಾದ ಬಳಿಕ ಪೊಲೀಸರು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳಿದಾಗ, ಆತನಿಂದ ಯಾವುದೇ ಸೂಕ್ತ ಉತ್ತರ ಬರುವುದಿಲ್ಲ. ಮಾತನಾಡಲು ಕೂಡ ಹಿಂಜರಿಯುತ್ತಾನೆ. ಇದರಿಂದ ಅನುಮಾನಗೊಂಡ ಪೊಲೀಸರು ಆತನ ಬಳಿ ಇದ್ದ ಬೈಕ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲು ಮುಂದಾಗುತ್ತಾರೆ. ಸೀಟಿನ ಮೇಲೆ ಕೈ ಹಾಕಿದಾಗ ಪೊಲೀಸ್​ ಸಿಬ್ಬಂದಿಗೆ ಏನೋ ವಿಚಿತ್ರ ಶಬ್ದ ಕೇಳಿಸಿತು. ಹೀಗಾಗಿ, ಬೈಕ್ ಸೀಟ್ ತೆರೆದು ನೋಡಿದಾಗ ಪೊಲೀಸರೇ ಒಂದು ಕ್ಷಣ ದಂಗಾದರು.
ಹೌದು, ಬೈಕ್​ನ ಸೀಟಿನಲ್ಲಿ 500 ರೂಪಾಯಿ ನೋಟುಗಳ ಬಂಡಲ್​ಗಳು ಪತ್ತೆಯಾಗಿವೆ. ಸೀಟ್​ ಮಾತ್ರವಲ್ಲದೆ, ಬೈಕ್​ನ ಪೆಟ್ರೋಲ್ ಟ್ಯಾಂಕ್​ನ ಸಣ್ಣ ರಂಧ್ರದಲ್ಲಿ 500 ರೂಪಾಯಿ ನೋಟುಗಳ ದೊಡ್ಡ ಬಂಡಲ್ ಅನ್ನು ಆತ ಇಟ್ಟುಕೊಂಡಿದ್ದ. ಪೊಲೀಸರು ಆ ವ್ಯಕ್ತಿಯನ್ನು ವಿಚಾರಿಸಿದಾಗ, ತಾನೊಬ್ಬ ಚಿನ್ನದ ವ್ಯಾಪಾರಿ ಎಂದು ಹೇಳಿದ್ದಾನೆ. ಅಲ್ಲದೆ, ಕೊಯಮತ್ತೂರಿನಲ್ಲಿ ಚಿನ್ನದ ಆಭರಣಗಳನ್ನು ಮಾರಾಟ ಮಾಡಿ ಹಣ ಸಂಪಾದಿಸಿದ್ದೇನೆ ಅಂತಾನೂ ಹೇಳಿದ್ದಾನೆ.
ಆದರೆ, ತನ್ನ ಮಾತಿಗೆ ಪೂರಕವಾದ ದಾಖಲೆಗಳನ್ನು ತೋರಿಸದ ಕಾರಣ ಪೊಲೀಸರು ಆ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆ ಬೈಕ್​ನಲ್ಲಿ ಒಟ್ಟು 56.5 ಲಕ್ಷ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗದನ್ನು ವಶಪಡಿಸಿಕೊಂಡ ಪೊಲೀಸರು ನಂತರ ಅದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಪ್ರಸ್ತುತ, ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net