ಜಮ್ಮು-ಕಾಶ್ಮೀರದ ಜೋಜಿಲಾ ಪಾಸ್ ಬಳಿ ಭಾರಿ ಹಿಮಪಾತ; 7 ಮಂದಿ ಸಾವು, ಐವರಿಗೆ ಗಾಯ | Heavy snowfall

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಶ್ರೀನಗರ-ಲೇಹ್ ಹೆದ್ದಾರಿಯ ಜೋಜಿಲಾ ಪಾಸ್​ನ ಲಡಾಖ್​ ಬದಿಯಲ್ಲಿ ಭಾರಿ ಹಿಮಪಾತ(Heavy snowfall) ಸಂಭವಿಸಿದ್ದು, ಪರಿಣಾಮ ಏಳು ಮಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಇನ್ನು ಹಲವು ವಾಹನಗಳು ಅವಶೇಷಗಳಡಿ ಸಿಲುಕಿಕೊಂಡಿವೆ ಎಂದು ಶುಕ್ರವಾರ(ಮಾ. 27) ವರದಿಯಾಗಿದೆ.
ಭಾರಿ ಹಿಮಪಾತದಿಂದ ಜಮ್ಮು-ಕಾಶ್ಮೀರ ನಡುವೆ ಸಂಪರ್ಕಿಸುವ ಹೆದ್ದಾರಿ ಬಂದ್ ಆಗಿದ್ದು, ಸಂಪರ್ಕ ಕಟ್ ಆಗಿದೆ. ಇನ್ನೂ ಸ್ಥಳದಲ್ಲಿ ಗಡಿ ರಸ್ತೆಗಳ ಸಂಸ್ಥೆ (BRO) ಮತ್ತು ಪೊಲೀಸರ ತಂಡಗಳು ಅವಶೇಷಗಳನ್ನು ತೆರವುಗೊಳಿಸಲು ಮತ್ತು ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಣೆ ಮಾಡಲು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಮತ್ತು ಹಿಮವನ್ನು ತೆಗೆದು ಹಾಕಲು ಮತ್ತು ಸಂಚಾರವನ್ನು ಮರು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಮಾಹಿತಿ ನೀಡಿರುವ ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್, ಜೋಜಿಲಾದಲ್ಲಿ ನಡೆದಿರುವ ಹಿಮಪಾತದ ಸುದ್ದಿ ದುರದೃಷ್ಟಕರ. ಕಾರ್ಗಿಲ್‌ನ ಡಿಸಿ ಮತ್ತು ಎಸ್‌ಎಸ್‌ಪಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಸಜ್ಜುಗೊಳಿಸುವಂತೆ ಸೂಚಿಸಿದ್ದೇನೆ. ವಿಪತ್ತು ಪರಿಹಾರ ಪಡೆಗಳು ಮತ್ತು ಬಿಆರ್‌ಒ(ಗಡಿ ರಸ್ತೆ ಸಂಸ್ಥೆ) ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಹ ಎಕ್ಸ್​ನಲ್ಲಿ, ಜೋಜಿಲಾ ಪಾಸ್‌ನಲ್ಲಿ ವಾಹನಕ್ಕೆ ಹಿಮಪಾತ ಸಂಭವಿಸಿ 7 ಜನರ ದುರಂತ ಸಾವು ಮತ್ತು 5 ಜನರಿಗೆ ಗಾಯಗಳಾಗಿರುವ ಬಗ್ಗೆ ತಿಳಿದು ದುಃಖವಾಯಿತು. ಮೃತರ ಕುಟುಂಬಗಳಿಗೆ ನನ್ನ ಪ್ರಾಮಾಣಿಕ ಸಂತಾಪಗಳು. ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net