ಇರಾನ್ ಯುದ್ಧದ ಬಿಸಿ: ಭಾರತದಲ್ಲಿ ಇಂಧನ ಕ್ಷಾಮ ಉಂಟಾಗಲ್ಲ! ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ | All Party Meeting

ಇರಾನ್ ಯುದ್ಧದ ಬಿಸಿ: ಭಾರತದಲ್ಲಿ ಇಂಧನ ಕ್ಷಾಮ ಉಂಟಾಗಲ್ಲ! ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ
ಇರಾನ್ ಯುದ್ಧದ ಬಿಸಿ: ಭಾರತದಲ್ಲಿ ಇಂಧನ ಕ್ಷಾಮ ಉಂಟಾಗಲ್ಲ! ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ
Published on
ನವದೆಹಲಿ: ಫೆಬ್ರವರಿ 28 ರಿಂದ ಆರಂಭವಾದ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಮಹಾಯುದ್ಧವು ಜಾಗತಿಕ ತೈಲ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಈ ತುರ್ತು ಪರಿಸ್ಥಿತಿಯ ನಡುವೆ, ಭಾರತದ ಹಿತಾಸಕ್ತಿಗಳನ್ನು ಕಾಪಾಡಲು ಕೇಂದ್ರ ಸರ್ಕಾರವು ಇಂದು ಸಂಸತ್ ಭವನದಲ್ಲಿ ಸರ್ವಪಕ್ಷ ಸಭೆಯನ್ನು(All Party Meeting) ಕರೆದಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ದೇಶದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಗಾಬರಿ ಬೇಡ, ತೈಲ ದಾಸ್ತಾನು ಭದ್ರವಾಗಿದೆ

ಈ ಸಭೆಯಲ್ಲಿ ಸರ್ಕಾರವು ನೀಡಿದ ಅತ್ಯಂತ ದೊಡ್ಡ ಭರವಸೆ ಎಂದರೆ ದೇಶದ ಇಂಧನ ಭದ್ರತೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರವಾಗಿದ್ದರೂ, ಭಾರತದ ಬಳಿ ಸಾಕಷ್ಟು ಪ್ರಮಾಣದ ಕಚ್ಚಾ ತೈಲ ಮತ್ತು ಎಲ್‌ಪಿಜಿ ದಾಸ್ತಾನು ಇದೆ ಎಂದು ಸಚಿವರು ತಿಳಿಸಿದರು.
ಹಡಗುಗಳ ಆಗಮನ: ಹಾರ್ಮುಜ್ ಜಲಸಂಧಿಯನ್ನು ಇರಾನ್ ಅಲ್ಪಕಾಲ ಬಂದ್ ಮಾಡಿದ್ದರೂ, ಈಗ ಮತ್ತೆ ಸಂಚಾರ ಮುಕ್ತವಾಗಿದೆ. ಈಗಾಗಲೇ ಹಲವು ತೈಲ ನೌಕೆಗಳು ಭಾರತಕ್ಕೆ ತಲುಪಿವೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಹಡಗುಗಳು ಬರಲಿವೆ.
ರಿಫೈನಿಂಗ್ ಸಾಮರ್ಥ್ಯ: ಭಾರತದ ತೈಲ ಶುದ್ಧೀಕರಣ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿವೆ, ಹೀಗಾಗಿ ಪೆಟ್ರೋಲ್, ಡೀಸೆಲ್ ಅಥವಾ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಭಾರತೀಯರ ಸುರಕ್ಷತೆ ಮೊದಲು

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಯುದ್ಧ ಪೀಡಿತ ಪ್ರದೇಶಗಳಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಇರಾನ್ ಮತ್ತು ಸುತ್ತಮುತ್ತಲಿನ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸನ್ನದ್ಧವಾಗಿದ್ದು, ಅಗತ್ಯಬಿದ್ದಲ್ಲಿ ಸ್ಥಳಾಂತರ ಪ್ರಕ್ರಿಯೆಗೆ ಬ್ಲೂಪ್ರಿಂಟ್ ಸಿದ್ಧಪಡಿಸಲಾಗಿದೆ. ಪ್ರಸ್ತುತ ಭಾರತೀಯರಿಗೆ ಯಾವುದೇ ತಕ್ಷಣದ ಅಪಾಯವಿಲ್ಲ ಎಂದು ಸರ್ಕಾರ ಹೇಳಿದೆ.

ಶ್ರೀಲಂಕಾ ಬಳಿ ಜಲಾಂತರ್ಗಾಮಿ ಚಟುವಟಿಕೆ: ಭಾರತದ ನಿಲುವು

ಸಭೆಯಲ್ಲಿ ಶ್ರೀಲಂಕಾ ಕರಾವಳಿಯ ಬಳಿ ಕಂಡುಬಂದಿದೆ ಎನ್ನಲಾದ ಜಲಾಂತರ್ಗಾಮಿಗಳ ಚಟುವಟಿಕೆಯ ಬಗ್ಗೆಯೂ ಚರ್ಚೆಯಾಯಿತು. ಇದಕ್ಕೆ ಉತ್ತರಿಸಿದ ಸರ್ಕಾರ, ಭಾರತದ ಭದ್ರತೆಗೆ ಯಾವುದೇ ನೇರ ಭೀತಿಯಿಲ್ಲ. ಯಾವುದೇ ಅಹಿತಕರ ಪರಿಸ್ಥಿತಿಯನ್ನು ಎದುರಿಸಲು ನೌಕಾಪಡೆ ಸಜ್ಜಾಗಿದೆ ಎಂದು ಭರವಸೆ ನೀಡಿದೆ.

ವಿರೋಧ ಪಕ್ಷಗಳ ಆಕ್ಷೇಪ ಮತ್ತು ಒಗ್ಗಟ್ಟಿನ ಕರೆ

ಸಭೆಯಲ್ಲಿ ಎಂಐಎಂ ನಾಯಕ ಅಸದುದ್ದೀನ್ ಓವೈಸಿ ಅವರು ಇರಾನ್‌ನ ಸುಪ್ರೀಂ ಲೀಡರ್ ಕುರಿತು ಕಳವಳ ವ್ಯಕ್ತಪಡಿಸಿದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಷಯವನ್ನು ಮುಚ್ಚಿದ ಬಾಗಿಲಿನ ಸಭೆಯ ಬದಲು ಸಂಸತ್ತಿನಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿದರು. ಟಿಎಂಸಿ ನಾಯಕರು ಸಭೆಯಿಂದ ದೂರ ಉಳಿದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಆದರೆ, ಆಡಳಿತ ಪಕ್ಷದ ನಾಯಕರು, ಇದು ಜಾಗತಿಕ ಬಿಕ್ಕಟ್ಟಿನ ಸಮಯ, ರಾಜಕೀಯ ಮರೆತು ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು. ಪ್ರಧಾನಿ ಮೋದಿ ಅವರು ಈಗಾಗಲೇ ಸಂಸತ್ತಿನಲ್ಲಿ ಎಚ್ಚರಿಸಿದಂತೆ, ಈ ಯುದ್ಧದ ಪರಿಣಾಮ ದೀರ್ಘಕಾಲ ಇರಲಿದ್ದು, ರಾಜ್ಯ ಸರ್ಕಾರಗಳು ಕೂಡ ಬಡ ವರ್ಗದ ಜನರಿಗೆ ತೊಂದರೆಯಾಗದಂತೆ ಸಹಕರಿಸಬೇಕು ಎಂದು ತಿಳಿಸಲಾಗಿದೆ.
ಭಾರತವು ತನ್ನ ತೈಲದ ಶೇ. 80ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದ ಯುದ್ಧವು ದೀರ್ಘಕಾಲ ಮುಂದುವರಿದರೆ ಭಾರತದ ಆರ್ಥಿಕತೆಯ ಮೇಲೆ ಒತ್ತಡ ಬೀರುವುದು ಖಚಿತ. ಆದರೆ, ಸರ್ಕಾರದ ಈ ಆಲ್ ಈಸ್ ವೆಲ್ ಸಂದೇಶವು ಸದ್ಯಕ್ಕೆ ಮಾರುಕಟ್ಟೆಯಲ್ಲಿನ ಆತಂಕವನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net