ಇರಾನ್​ ಯುದ್ಧ...ಅಂದುಕೊಂಡಿದ್ದನ್ನು ಸಾಧಿಸಿದ್ರಾ ಟ್ರಂಪ್​? ಅಮೆರಿಕದ ಈ 5 ಗುರಿಗಳು ಈಡೇರಿತೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ...Donald Trump

Has Donald Trump Accomplished His 5 Goals In Iran War? Here's Where He Stands
Has Donald Trump Accomplished His 5 Goals In Iran War? Here's Where He Stands
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ
  • ಯುದ್ಧ ನಿಲ್ಲಿಸಲು ಅಮೆರಿಕ ಮತ್ತು ಇರಾನಿನ ಉನ್ನತಮಟ್ಟದ ನಿಯೋಗದಿಂದ ಇಂದು ಪಾಕಿಸ್ತಾನದ ಇಸ್ಲಮಾಬಾದ್​ನಲ್ಲಿ ಸಂಧಾನ ಸಭೆ
  • ಈಗಾಗಲೇ ಉಭಯ ದೇಶಗಳ ನಡುವೆ ಎರಡು ವಾರಗಳ ಕಾಲ ಕದನವಿರಾಮ ಘೋಷಣೆಯಾಗಿದೆ
  • ಇರಾನ್​ ಮೇಲಿನ ನಮ್ಮ ದಾಳಿಯಿಂದ ನಮ್ಮ ಗುರಿಗಳು ಈಡೇರಿದೆ ಮತ್ತು ಯುದ್ಧವೂ ಯಶಸ್ವಿಯಾಗಿದೆ ಎಂದ ಟ್ರಂಪ್​
Donald Trump : ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಶಮನ ಮಾಡಲು ಅಮೆರಿಕ ಮತ್ತು ಇರಾನಿನ ಉನ್ನತಮಟ್ಟದ ನಿಯೋಗ ಇಂದು ಪಾಕಿಸ್ತಾನದ ಇಸ್ಲಮಾಬಾದ್​ನಲ್ಲಿ ಸಂಧಾನ ಸಭೆ ಸೇರಿವೆ. ಈಗಾಗಲೇ ಉಭಯ ದೇಶಗಳ ನಡುವೆ ಎರಡು ವಾರಗಳ ಕಾಲ ಕದನವಿರಾಮ ಘೋಷಣೆಯಾಗಿದೆ. ಇದರ ನಡುವೆ ಯುದ್ಧಕ್ಕೆ ಪೂರ್ಣ ವಿರಾಮ ಹಾಕಲು ಉಭಯ ದೇಶಗಳ ನಿಯೋಗ ಮಾತುಕತೆ ನಡೆಸುತ್ತಿವೆ. ಒಂದು ವೇಳೆ ಈ ಮಾತುಕತೆ ವಿಫಲವಾದರೆ, ಉಭಯ ದೇಶಗಳ ನಡುವಿನ ಯುದ್ಧದ ತೀವ್ರತೆ ಹೆಚ್ಚಾಗಲಿದೆ. ಹೀಗಾಗಿ ಸಂಧಾನ ಯಶಸ್ವಿಯಾಗಲಿ ಎಂದು ಬಯಸುತ್ತಿದ್ದಾರೆ.
ಅಂದಹಾಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯು ಸಂಪೂರ್ಣ ಯಶಸ್ವಿಯಾಗಿದೆ ಎಂದು ಘೋಷಿಸಿದ್ದಾರೆ. ಇರಾನ್ ಸೇನೆಯನ್ನು ಸೋಲಿಸಲಾಗಿದ್ದು, ಈ ಕದನ ವಿರಾಮವು ಅಮೆರಿಕಕ್ಕೆ ಸಿಕ್ಕ "ನೂರಕ್ಕೆ ನೂರರಷ್ಟು ಸಂಪೂರ್ಣ ವಿಜಯ" ಎಂದು ತಮ್ಮ ವಿಶ್ವಾಸವನ್ನು ಟ್ರಂಪ್​ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 'ಆಪರೇಷನ್ ಎಪಿಕ್ ಫ್ಯೂರಿ' (Operation Epic Fury) ಆರಂಭಿಸುವಾಗ ಟ್ರಂಪ್​ ಘೋಷಿಸಿದಂತೆ, ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದದಂತೆ ಮಾಡುವುದು, ಅದರ ನೌಕಾಪಡೆಯನ್ನು ನಾಶಪಡಿಸುವುದು ಮತ್ತು ಅಲ್ಲಿನ ಆಡಳಿತ ಬದಲಾವಣೆಗೆ ಹಾದಿ ಸುಗಮಗೊಳಿಸುವುದು ಈ ದಾಳಿಯ ಮುಖ್ಯ ಉದ್ದೇಶಗಳಾಗಿದ್ದವು ಎಂದು ಪುನರುಚ್ಚರಿಸಿದ್ದಾರೆ ಮತ್ತು ಅದು ಯಶಸ್ವಿಯಾಗಿದೆ ಅಂತಾನೂ ಹೇಳಿದ್ದಾರೆ.
ಹಾಗಾದರೆ, ಮಧ್ಯಪ್ರಾಚ್ಯ ಯುದ್ಧದಿಂದಾಗಿ ಟ್ರಂಪ್ ತಾವು ಹೇಳಿದ್ದನ್ನು ಸಾಧಿಸಿದ್ದಾರೆಯೇ? ಇಲ್ಲಿಯವರೆಗೆ ಏನೆಲ್ಲ ನಡೆದಿದೆ? ಈ ಯುದ್ಧದಿಂದ ಟ್ರಂಪ್​ ಅಂದುಕೊಂಡಿದ್ದು ನಡೆದಿದೆಯೇ? ಈ ಕುರಿತು ಒಂದು ಸಮಗ್ರ ಸುದ್ದಿ ಇಲ್ಲಿದೆ.

ಕ್ಷಿಪಣಿಗಳ ನಾಶ

ಇರಾನಿನ ಕ್ಷಿಪಣಿಗಳನ್ನು ಸಂಪೂರ್ಣ ನಾಶ ಮಾಡಿರುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಅಮೆರಿದಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಇರಾನ್‌ನ ಕ್ಷಿಪಣಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿರುವುದಾಗಿ ಘೋಷಿಸಿದರು. ಇರಾನ್‌ನ ಕ್ಷಿಪಣಿ ತಯಾರಿಕಾ ಘಟಕಗಳು, ಲಾಂಚರ್‌ಗಳು ಮತ್ತು ಶೇಖರಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ನಾಶಪಡಿಸಲಾಗಿದ್ದು, ಇನ್ಮುಂದೆ ಅಲ್ಲಿ ಹೊಸ ಕ್ಷಿಪಣಿ ಅಥವಾ ಡ್ರೋನ್‌ಗಳ ತಯಾರಿಕೆ ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿಕೊಂಡಿದೆ. ಆದರೆ, ವಾಸ್ತವ ಬೇರೇನೇ ಇದೆ. ಅದೇನೆಂದರೆ, ಇರಾನ್ ಇಂದಿಗೂ ಕ್ಷಿಪಣಿಗಳನ್ನು ಉಡಾವಣೆ ಮಾಡುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ದಾಳಿಯಿಂದಾಗಿ ಇರಾನ್‌ನ ಶಕ್ತಿ ಕುಂದಿರಬಹುದಾದರೂ, ಅವರ ಬಳಿ ಇನ್ನೂ ಕ್ಷಿಪಣಿಗಳನ್ನು ತಯಾರಿಸುವ ಮತ್ತು ಪ್ರಯೋಗಿಸುವ ಸಾಮರ್ಥ್ಯ ಉಳಿದಿದೆ ಎಂದು ಮಧ್ಯಪ್ರಾಚ್ಯ ಸಂಸ್ಥೆಯ ವಿಶ್ಲೇಷಕ ಅಲೆಕ್ಸ್ ವತಂಕಾ ತಿಳಿಸಿದ್ದಾರೆ. ಅಮೆರಿಕದ ಎಚ್ಚರಿಕೆಯ ನಡುವೆಯೂ ಇರಾನ್‌ನಿಂದ ಕ್ಷಿಪಣಿ ದಾಳಿಗಳು ಪೂರ್ಣವಾಗಿ ನಿಂತಿಲ್ಲ ಎಂಬುದು ಇಲ್ಲಿ ಗಮನಾರ್ಹ.

ನೌಕಾಪಡೆ ನಾಶ

ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಯೋಜನೆಯಂತೆ ಇರಾನ್ ನೌಕಾಪಡೆಯನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಜನರಲ್ ಡಾನ್ ಕೈನ್ ಘೋಷಿಸಿದ್ದಾರೆ. ಇರಾನ್‌ನ ಶೇ. 90ಕ್ಕಿಂತ ಹೆಚ್ಚಿನ ಯುದ್ಧನೌಕೆಗಳನ್ನು ಅರೇಬಿಯನ್ ಕೊಲ್ಲಿಯಲ್ಲಿ ಮುಳುಗಿಸಲಾಗಿದ್ದು, ಅವರ ಪ್ರಮುಖ ನೌಕಾಪಡೆ ಈಗ ಬಹುತೇಕ ಅಸ್ತಿತ್ವ ಕಳೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದಕ ಗುಂಪುಗಳ ಕತೆ ಏನು?

ಮಧ್ಯಪ್ರಾಚ್ಯದ ಭಯೋತ್ಪಾದಕ ಗುಂಪುಗಳು ಜಗತ್ತಿನ ಅಥವಾ ಅಮೆರಿಕದ ಪಡೆಗಳ ಮೇಲೆ ಇನ್ಮುಂದೆ ದಾಳಿ ನಡೆಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಂಪ್ ಭರವಸೆ ನೀಡಿದ್ದಾರೆ. ಆದರೆ, ರಕ್ಷಣಾ ತಜ್ಞ ಬೆಹಮ್ ಬೆನ್ ತಾಲೆಬ್ಲು ಅವರ ಪ್ರಕಾರ, ಅಮೆರಿಕದ ಇತ್ತೀಚಿನ ಕಾರ್ಯಾಚರಣೆಗಳು ಕೇವಲ ಇರಾನ್‌ನ ನೇರ ಸೇನಾ ಸಾಮರ್ಥ್ಯದ ಮೇಲೆ ಕೇಂದ್ರೀಕೃತವಾಗಿದ್ದವು. ಹೀಗಾಗಿ ಲೆಬನಾನ್‌ನ ಹಿಜ್ಬುಲ್ಲಾ, ಯೆಮನ್‌ನ ಹೌತಿಗಳು ಮತ್ತು ಗಾಜಾದ ಹಮಾಸ್‌ನಂತಹ ಇರಾನ್ ಬೆಂಬಲಿತ ಗುಂಪುಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಇನ್ನೂ ಯಾವುದೇ ದೊಡ್ಡ ಮಟ್ಟದ ಪ್ರಯತ್ನಗಳು ನಡೆದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪರಮಾಣು ಸಾಮರ್ಥ್ಯ

ಕಳೆದ ಜೂನ್‌ನಲ್ಲಿ ಅಮೆರಿಕ ನಡೆಸಿದ 'ಆಪರೇಷನ್ ಮಿಡ್‌ನೈಟ್ ಹ್ಯಾಮರ್' ದಾಳಿಯಿಂದ ಇರಾನ್‌ನ ಮೂರು ಪ್ರಮುಖ ಪರಮಾಣು ಕೇಂದ್ರಗಳು ಸಂಪೂರ್ಣವಾಗಿ ಧ್ವಂಸವಾಗಿವೆ ಎಂದು ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಇರಾನ್‌ನ ಯುರೇನಿಯಂ ಹೆಚ್ಚಳವನ್ನು ತಡೆದ ಟ್ರಂಪ್ ಅವರ ಈ ಕ್ರಮವನ್ನು ವಿಶ್ಲೇಷಕ ಬೆಹನಮ್ ಬೆನ್ ತಲೇಬ್ಲು ಶ್ಲಾಘಿಸಿದ್ದು, ಇದು ಇರಾನ್ ಆಡಳಿತದ ವಿರುದ್ಧ ಅಧ್ಯಕ್ಷರು ಸಾಧಿಸಿದ ಸುದೀರ್ಘ ಗೆಲುವು ಎಂದು ಬಣ್ಣಿಸಿದ್ದಾರೆ. ಆದಾಗ್ಯೂ, ಇರಾನ್‌ನಲ್ಲಿ ಇಂದಿಗೂ ಯುರೇನಿಯಂ ಶೇಖರಣೆಯಿದ್ದು, ಅದನ್ನು ಹೊರತೆಗೆದು ಸಂಪೂರ್ಣವಾಗಿ ನಾಶಪಡಿಸಲು ಅಮೆರಿಕವು ಇರಾನ್‌ನೊಂದಿಗೆ ಕೆಲಸ ಮಾಡಲಿದೆ ಎಂದು ಟ್ರಂಪ್ ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಆಡಳಿತ ಬದಲಾವಣೆ

ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಇರಾನ್ ಮೇಲೆ ನಡೆದ ಆರಂಭಿಕ ದಾಳಿಗಳ ನಂತರ ಅಲ್ಲಿನ ಸರ್ಕಾರವನ್ನು ವಶಪಡಿಸಿಕೊಳ್ಳುವಂತೆ ಅಲ್ಲಿನ ಜನತೆಗೆ ಟ್ರಂಪ್​ ಕರೆ ನೀಡಿದರು. ಅಮೆರಿಕ ನಡೆಸಿದ ದಾಳಿಗಳಲ್ಲಿ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ಸೇನಾ ಮತ್ತು ಗುಪ್ತಚರ ನಾಯಕರು ಹತರಾಗಿದ್ದಾರೆ ಎಂದು ತಿಳಿಸಿರುವ ಟ್ರಂಪ್​, ಇರಾನ್‌ನಲ್ಲಿ ಈಗ "ಅತ್ಯಂತ ಉತ್ಪಾದಕ ಆಡಳಿತ ಬದಲಾವಣೆ" ನಡೆದಿದೆ ಎಂದು ಪ್ರತಿಪಾದಿಸಿದ್ದಾರೆ. ಆದರೆ, ಪ್ರಸ್ತುತ, ಖಮೇನಿ ಅವರ ಸ್ಥಾನಕ್ಕೆ ಅವರ ಪುತ್ರ ಮೊಜ್ತಬಾ ಬಂದಿದ್ದು, ಅವರು ಕಠಿಣ ನಿಲುವಿನ ಧಾರ್ಮಿಕ ಆಡಳಿತಗಾರ ಎಂದು ಹೇಳಲಾಗುತ್ತಿದೆ. ಹೀಗಾಗಿ, ಆಡಳಿತ ಬದಲಾವಣೆ ವಿಚಾರದಲ್ಲೂ ಅಮೆರಿಕದ ಅಂದುಕೊಂಡಿದ್ದು ನಡೆದಿಲ್ಲ.
ಒಟ್ಟಾರೆಯಾಗಿ ಈ ಯುದ್ಧದಿಂದ ಅಮೆರಿಕ ತಾನು ಅಂದುಕೊಂಡಿದ್ದನ್ನು ಸಂಪೂರ್ಣವಾಗಿ ಸಾಧಿಸಿಲ್ಲ. ಕೆಲವೊಂದು ವಿಚಾರಗಳು ಮಾತ್ರ ಅಮೆರಿಕ ಅಂದುಕೊಂಡಂತೆ ನಡೆದಿವೆ. ನಷ್ಟದ ವಿಚಾರಕ್ಕೆ ಬಂದರೆ, ಎರಡೂ ರಾಷ್ಟ್ರಗಳು ಸಾಕಷ್ಟು ನಷ್ಟವನ್ನು ಅನುಭವಿಸಿವೆ. ಆದರೆ, ಇರಾನ್​ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದೆ. ಸಾವಿರಾರು ಸಾವು-ನೋವುಗಳಾಗಿವೆ. ತಂದೆಯ ಸಾವಿಗೆ ಮೊಜ್ತಬಾ ಖಮೇನಿ ಸೇಡಿ ತೀರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅಮೆರಿಕ ಕದನ ವಿರಾಮ ಘೋಷಣೆ ಮಾಡಿದ್ದರೂ ಇಸ್ರೇಲ್​ ಮಾತ್ರ ತನ್ನ ದಾಳಿಯನ್ನು ಮುಂದುವರಿಸಿದೆ. ಹೀಗಾಗಿ, ಯುದ್ಧದ ಅನಿಶ್ಚಿತತೆ ಇನ್ನಷ್ಟು ಕಾಲ ಮುಂದುವರಿದರೂ ಅಚ್ಚರಿಪಡಬೇಕಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net