ಹ್ಯಾರಿ ಬ್ರೂಕ್ ಹೆಗಲಿಗೆ ಇಂಗ್ಲೆಂಡ್ ನಾಯಕತ್ವ: ವಿಶ್ವಕಪ್ ತಂಡದಿಂದ ಸ್ಟಾರ್ ಆಟಗಾರರಿಗೆ ಕೊಕ್ | England World Cup squad

ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಾಗಿ ಇಂಗ್ಲೆಂಡ್ ತಂಡ ಪ್ರಕಟ
ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಾಗಿ ಇಂಗ್ಲೆಂಡ್ ತಂಡ ಪ್ರಕಟ
Published on
ಲಂಡನ್: 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮಂಗಳವಾರ ತನ್ನ 15 ಸದಸ್ಯರ ಬಲಿಷ್ಠ ತಂಡವನ್ನು(England World Cup squad) ಪ್ರಕಟಿಸಿದೆ. ಈ ತಂಡದಲ್ಲಿ ವೇಗಿ ಜೋಫ್ರಾ ಆರ್ಚರ್ ಅವರ ಸೇರ್ಪಡೆ ಎಲ್ಲರ ಗಮನ ಸೆಳೆದಿದೆ.
ಈ ತಂಡವನ್ನು ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಮುನ್ನಡೆಸಲಿದ್ದು, ಅನುಭವಿ ಆಟಗಾರರಾದ ಜೋಸ್ ಬಟ್ಲರ್ ಮತ್ತು ಆದಿಲ್ ರಶೀದ್ ಅವರು ತಂಡಕ್ಕೆ ಬಲ ತುಂಬಲಿದ್ದಾರೆ. ಅಲ್ಲದೆ, ಆರ್ಚರ್ ಪ್ರಸ್ತುತ ಆಶಸ್ ಸರಣಿಯ ವೇಳೆ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರೂ, ವಿಶ್ವಕಪ್‌ನ ಮಹತ್ವವನ್ನು ಪರಿಗಣಿಸಿ ಅವರಿಗೆ ಸ್ಥಾನ ನೀಡಲಾಗಿದೆ.

ಗಾಯದ ನಡುವೆಯೂ ಆರ್ಚರ್ ಆಯ್ಕೆ: ಕಾರಣವೇನು?

ಜೋಫ್ರಾ ಆರ್ಚರ್ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಆಶಸ್ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದರು. ಈ ಕಾರಣದಿಂದ ಅವರು ಶ್ರೀಲಂಕಾ ವಿರುದ್ಧದ ಮುಂಬರುವ ಸರಣಿಯಿಂದ ಹೊರಗುಳಿಯಲಿದ್ದಾರೆ. ಆದರೆ, ಫೆಬ್ರವರಿಯಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ವಿಶ್ವಕಪ್ ವೇಳೆಗೆ ಸಂಪೂರ್ಣ ಗುಣಮುಖರಾಗುತ್ತಾರೆ ಎಂಬ ಆಶಯದೊಂದಿಗೆ ಆಯ್ಕೆ ಸಮಿತಿ ಅರ್ಚರ್​ ಮಣೆ ಹಾಕಿದೆ.

ಪ್ರಮುಖ ಬದಲಾವಣೆಗಳು

ಜೋಶ್ ಟಂಗ್ ಪದಾರ್ಪಣೆ: ಟೆಸ್ಟ್ ಕ್ರಿಕೆಟ್‌ನಲ್ಲಿ ಗಮನ ಸೆಳೆದ ವೇಗಿ ಜೋಶ್ ಟಂಗ್ ಅವರಿಗೆ ಚೊಚ್ಚಲ ಟಿ20 ವಿಶ್ವಕಪ್ ಸ್ಥಾನ ದೊರೆತಿದೆ. ಅಲ್ಲದೆ, ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರಿಗೆ ಈ ಬಾರಿ ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಜೆಮಿ ಸ್ಮಿತ್ ಅಲಭ್ಯ: ಆಶಸ್ ಸರಣಿಯಲ್ಲಿನ ಕಳಪೆ ಫಾರ್ಮ್‌ನಿಂದಾಗಿ ವಿಕೆಟ್ ಕೀಪರ್ ಜೆಮಿ ಸ್ಮಿತ್ ಅವರನ್ನು ಕೈಬಿಡಲಾಗಿದೆ. ಅವರ ಬದಲಿಗೆ ಬೆನ್ ಡಕೆಟ್ ಮತ್ತು ಟಾಮ್ ಬ್ಯಾಂಟನ್ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್‌ನ ಟಿ20 ವಿಶ್ವಕಪ್ ತಂಡ:  ಹ್ಯಾರಿ ಬ್ರೂಕ್ (ಸಿ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್,  ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮೀ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ಲ್ಯೂಕ್ ವುಡ್.

ಆಂಗ್ಲರ ಮುಂದಿನ ಸರಣಿ

ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್ ತಂಡವು ಜನವರಿ 22 ರಿಂದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಆರ್ಚರ್ ಈ ಸರಣಿಯಿಂದ ಹೊರಗುಳಿದು ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ. ಫೆಬ್ರವರಿ 7 ರಿಂದ ವಿಶ್ವಕಪ್ ಅಧಿಕೃತವಾಗಿ ಆರಂಭವಾಗಲಿದ್ದು, ಇಂಗ್ಲೆಂಡ್ ತನ್ನ ಮೊದಲ ಪಂದ್ಯವನ್ನು ನೇಪಾಳ ವಿರುದ್ಧ ಮುಂಬೈನಲ್ಲಿ ಆಡಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net