ಪ್ರಧಾನ್​ ರಾಜೀನಾಮೆ ಬೇಡಿಕೆಯಿಂದ ಹಿಂದೆ ಸರಿಯದ ಸಿಜೆಪಿ: ನಾಳೆ ಮಧ್ಯಾಹ್ನದವರೆಗೆ ಟೈಮ್ ಕೇಳಿದ ಕೇಂದ್ರ ಸರ್ಕಾರ! | CJP-Nadda Meeting

CJP-Nadda Meeting > ಪ್ರಧಾನ್​ ರಾಜೀನಾಮೆ ಬೇಡಿಕೆಯಿಂದ ಹಿಂದೆ ಸರಿಯದ ಸಿಜೆಪಿ
CJP-Nadda Meeting > ಪ್ರಧಾನ್​ ರಾಜೀನಾಮೆ ಬೇಡಿಕೆಯಿಂದ ಹಿಂದೆ ಸರಿಯದ ಸಿಜೆಪಿ
Published on
ನವದೆಹಲಿ: ಕೇಂದ್ರ ಸಚಿವರೊಂದಿಗಿನ ಪ್ರಮುಖ ಸಭೆಯ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ ಪ್ರತಿನಿಧಿಗಳು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ಕೇಂದ್ರ ಸರ್ಕಾರವು ತಮ್ಮ ಎರಡು ಪ್ರಮುಖ ಬೇಡಿಕೆಗಳಿಗೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಶನಿವಾರದೊಳಗೆ ತನ್ನ ಅಂತಿಮ ಪ್ರತಿಕ್ರಿಯೆಯನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರದೊಂದಿಗಿನ ಸಭೆಯ ನಂತರ ಮಾತನಾಡಿದ ಕಾಕ್ರೋಚ್ ಜನತಾ ಪಾರ್ಟಿಯ ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತಾದ ನಮ್ಮ ಬೇಡಿಕೆಗೆ ಸಂಬಂಧಿಸಿದಂತೆ ಸರ್ಕಾರವು ನಾಳೆ ಮಧ್ಯಾಹ್ನದವರೆಗೆ ಸಮಯ ಕೇಳಿದೆ. ಸರ್ಕಾರ ಶೀಘ್ರದಲ್ಲೇ ಅವರನ್ನು ಹುದ್ದೆಯಿಂದ ತೆಗೆದುಹಾಕುತ್ತದೆ ಎಂಬ ಭರವಸೆ ನಮಗಿದೆ. ಇನ್ನು ನೀಟ್ ಪರೀಕ್ಷೆಯ ಅಕ್ರಮಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವುದು ಹಾಗೂ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿರುವ ಎಫ್‌ಐಆರ್ ಮತ್ತು ಕಾನೂನು ಪ್ರಕರಣಗಳನ್ನು ಹಿಂಪಡೆಯುವುದು ಎಂಬ ನಮ್ಮ ಎರಡು ಬೇಡಿಕೆಗಳಿಗೆ ಸರ್ಕಾರ ಭಾಗಶಃ ಒಪ್ಪಿಗೆ ಸೂಚಿಸಿದೆ ಎಂದಿದ್ದಾರೆ.

ನಾಳೆ ಮತ್ತೆ ಸಿಜೆಪಿ ಸದಸ್ಯರ ಭೇಟಿ: ಜೆ.ಪಿ. ನಡ್ಡಾ

ಕಾಕ್ರೋಚ್ ಜನತಾ ಪಾರ್ಟಿ ಪ್ರತಿನಿಧಿಗಳೊಂದಿಗಿನ ಚರ್ಚೆಯ ನಂತರ ಕೇಂದ್ರ ಸಚಿವ ಜೆ ಪಿ ನಡ್ಡಾ ಮಾತನಾಡಿದ್ದು, ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘವಾಗಿ ಸಭೆ ನಡೆಯಿತು. ಮೂರು ಮುಖ್ಯ ಬೇಡಿಕೆಗಳು ಹಾಗೂ ಪರೀಕ್ಷಾ ಸುಧಾರಣೆಗಳಿಗೆ ಸಂಬಂಧಿಸಿದಂತೆ 5 ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಡೆದ ಚರ್ಚೆಯ ವಿವರಗಳನ್ನು ನಾಳೆ ಮಧ್ಯಾಹ್ನ ಅವರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ಹಂಚಿಕೊಳ್ಳುವುದಾಗಿ ತಿಳಿಸಿದ್ದೇವೆ ಎಂದಿದ್ದಾರೆ.
ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಂಘಟನೆಯ ಬೇಡಿಕೆಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳ ಭಾಗವಾಗಿ, ಕಾಕ್ರೋಚ್ ಜನತಾ ಪಾರ್ಟಿ ಪ್ರತಿನಿಧಿಗಳು ಮತ್ತು ಸರ್ಕಾರದ ನಡುವಿನ ಈ ಮಹತ್ವದ ಸಭೆಯು ಶುಕ್ರವಾರ ವಿಠಲಭಾಯಿ ಪಟೇಲ್ ಹೌಸ್‌ನಲ್ಲಿ ನಡೆಯಿತು. ಸರ್ಕಾರದ ಪರವಾಗಿ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಮತ್ತು ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಪಾಲ್ಗೊಂಡಿದ್ದರೆ, ಸಿಜೆಪಿ ಪರವಾಗಿ ರಾಷ್ಟ್ರೀಯ ವಕ್ತಾರ ಸೌರವ್ ದಾಸ್ ಮತ್ತು ಮತ್ತೊಬ್ಬ ಯುವಕ ಭಾಗವಹಿಸಿದ್ದರು.
ಸಿಜೆಪಿ ಮತ್ತು ಸರ್ಕಾರದ ನಡುವೆ ನಡೆದ ಮೂರನೇ ಅಧಿಕೃತ ಸಭೆ ಇದಾಗಿದ್ದು, ಇದಕ್ಕೂ ಮೊದಲು ಜುಲೈ 20 ರಂದು ಸಚಿವರ ಅಧಿಕೃತ ನಿವಾಸದಲ್ಲಿ ನಡೆದ ಎರಡು ಸತತ ಸಭೆಗಳಲ್ಲಿ ನಡ್ಡಾ, ಸೌರವ್ ದಾಸ್ ಹಾಗೂ ಸಿಜೆಪಿಯ ಮತ್ತೊಬ್ಬ ವಕ್ತಾರ ಅಶುತೋಷ್ ರಾಂಕಾ ಪಾಲ್ಗೊಂಡಿದ್ದರು.
ತಮ್ಮ ಪ್ರಮುಖ ಬೇಡಿಕೆಗಳಿಗೆ ಸರ್ಕಾರದ ಭರವಸೆ ಸಿಕ್ಕ ನಂತರ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಗುರುವಾರ ತಡರಾತ್ರಿ ತಮ್ಮ 26 ದಿನಗಳ ನಿರಹಾರ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಸಭೆ ನಡೆದಿದೆ. ಈ ಹಿಂದೆ ಯಾವುದೇ ಸಚಿವರ ನಿವಾಸ ಅಥವಾ ಕಚೇರಿಯಲ್ಲಿ ಸಭೆ ನಡೆಸಲು ನಿರಾಕರಿಸಿದ್ದ ಸಿಜೆಪಿ, ಮಾತುಕತೆಗಳು ತಟಸ್ಥ ಸ್ಥಳದಲ್ಲೇ ನಡೆಯಬೇಕು ಎಂದು ಪಟ್ಟು ಹಿಡಿದಿತ್ತು.

ಪ್ರಧಾನ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಕೆ: ಸಿಜೆಪಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಜಂತರ್ ಮಂತರ್‌ನಲ್ಲಿ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಜೆಪಿ ಸ್ಪಷ್ಟಪಡಿಸಿದೆ. ಪ್ರಧಾನ್ ರಾಜೀನಾಮೆಯನ್ನು ಹೊರತುಪಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಹೊಣೆಗಾರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ಹಾಗೂ ಚಳವಳಿಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರ ಮೇಲಿನ ಎಲ್ಲಾ ಎಫ್‌ಐಆರ್‌ಗಳು ಮತ್ತು ಕಾನೂನು ಕ್ರಮಗಳನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳನ್ನು ಈ ಸಂಘಟನೆಯು ಮುಂದಿಟ್ಟಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net