ಇನ್ಮುಂದೆ ಬಂಗಾಳದಲ್ಲಿ ಗೂಂಡಾರಾಜ್ ನಡೆಯಲ್ಲ! ಕಬೀರ್ ಪ್ರಚೋದನಾತ್ಮಕ ಹೇಳಿಕೆಯ ವಿರುದ್ಧ ವಿಧಾನಸಭೆಯಲ್ಲೇ ಗುಡುಗಿದ ಸಿಎಂ ಸುವೇಂದು! Suvendu Adhikari

ಇನ್ಮುಂದೆ ಬಂಗಾಳದಲ್ಲಿ ಗೂಂಡಾರಾಜ್ ನಡೆಯಲ್ಲ! ಕಬೀರ್ ಪ್ರಚೋದನಾತ್ಮಕ ಹೇಳಿಕೆಯ ವಿಧಾನಸಭೆಯಲ್ಲೇ ಗುಡುಗಿದ ಸಿಎಂ ಸುವೇಂದು!
ಇನ್ಮುಂದೆ ಬಂಗಾಳದಲ್ಲಿ ಗೂಂಡಾರಾಜ್ ನಡೆಯಲ್ಲ! ಕಬೀರ್ ಪ್ರಚೋದನಾತ್ಮಕ ಹೇಳಿಕೆಯ ವಿಧಾನಸಭೆಯಲ್ಲೇ ಗುಡುಗಿದ ಸಿಎಂ ಸುವೇಂದು!
Published on

ಪ್ರಮುಖ ಮುಖ್ಯಾಂಶಗಳು

  • ಪ್ರಚೋದನಾತ್ಮಕ ಹೇಳಿಕೆ ನೀಡಿದ AJUP ಮುಖ್ಯಸ್ಥ ಕಬೀರ್‌ಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಿಎಂ ಸುವೇಂದು.
  • ನಾನು ಮುಸ್ಲಿಮರನ್ನು ಒಗ್ಗೂಡಿಸಿ ರಸ್ತೆಗಿಳಿದರೆ ಬಿಜೆಪಿಯ ಬಾವುಟ ಹಿಡಿಯಲು ಯಾರೂ ಇರಲ್ಲ: ಕಬೀರ್ ನೀಡಿದ್ದ ಹೇಳಿಕೆ ವೈರಲ್.
  • ಬಂಗಾಳದಲ್ಲಿ ಈಗ ಮಮತಾ ಸಿಎಂ ಅಲ್ಲ, ದುರ್ಬಲ ಸರ್ಕಾರವೂ ಇಲ್ಲ ರಾಜ್ಯದಲ್ಲಿ ಇನ್ಮುಂದೆ ಗೂಂಡಾಗಿರಿ ನಡೆಯಲ್ಲ ಎಂದು ಗುಡುಗಿದ ಸುವೇಂದು.
ಕೋಲ್ಕತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧ ಹಾಗೂ ರಾಜ್ಯ ಪೊಲೀಸ್ ಇಲಾಖೆಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಆಮ್ ಜನತಾ ಉನ್ನಯನ್ ಪಾರ್ಟಿ (AJUP) ಮುಖ್ಯಸ್ಥ ಹುಮಾಯೂನ್ ಕಬೀರ್(Suvendu Adhikari) ಅವರಿಗೆ ಪಶ್ಚಿಮ ಬಂಗಾಳದ ಸಿಎಂ ಸುವೇಂದು ಅಧಿಕಾರಿ ವಿಧಾನಸಭೆಯಲ್ಲೇ ನೇರವಾಗಿಯೇ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಇನ್ನು ಸಾಕು, ಅತಿರೇಕದ ವರ್ತನೆಗಳಿಗೆ ಕಾನೂನಿನ ಪಾಠ ಕಲಿಸುವ ಸಮಯ ಬಂದಿದೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮುನ್ನ ಎಚ್ಚರವಿರಲಿ. ನಿಮ್ಮ ಮಾತುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಆಡಿರುವ ಮಾತುಗಳನ್ನು ವಾಪಸ್ ಪಡೆಯಿರಿ. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡುವ ಮುನ್ನ ಕನಿಷ್ಠ 25 ಬಾರಿಯಾದರೂ ಯೋಚಿಸಿ ಎಂದು ಸಿಎಂ ಸುವೇಂದು ಸದನದಲ್ಲಿ ಗುಡುಗಿದ್ದಾರೆ.

ವಿವಾದಕ್ಕೆ ಕಾರಣವಾದ ಕಬೀರ್ ಹೇಳಿಕೆ ಏನು?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಮಾಯೂನ್ ಕಬೀರ್ ಅವರದ್ದೆನ್ನಲಾದ ವಿಡಿಯೋವೊಂದು ಭಾರಿ ವೈರಲ್ ಆಗಿತ್ತು. ಅದರಲ್ಲಿ ಅವರು ಸ್ಥಳೀಯ ಬಿಜೆಪಿ ನಾಯಕಿ ಅನಾಮಿಕಾ ಘೋಷ್ ಮತ್ತು ಸಿಎಂ ಸುವೇಂದು ವಿರುದ್ಧ ಕಿಡಿಕಾರಿದ್ದರು.
ಚುನಾವಣೆಯಲ್ಲಿ ಸೋತಿದ್ದರೂ ಬಿಜೆಪಿ ಅಭ್ಯರ್ಥಿ ಅನಾಮಿಕಾ ಘೋಷ್ ತಾನೇ ಇನ್ನು ಶಾಸಕಿ ಎಂದು ಅಂದುಕೊಂಡಿದ್ದಾರೆ. ಬಿಜೆಪಿಯವರೂ ಸಹ ಇಲ್ಲಿ ತಮ್ಮದೇ ಶಾಸಕರಿದ್ದಾರೆ ಎಂಬ ಭ್ರಮೆಯಲ್ಲಿದ್ದಾರೆ. ನಾನು ಸುವೇಂದುವಿಗೆ ನೇರವಾಗಿಯೇ ಹೇಳಲು ಬಯಸುತ್ತೇನೆ. ಮುರ್ಶಿದಾಬಾದ್‌ನಲ್ಲಿ ನಿಮ್ಮ ಬೆಂಬಲಿಗರಿಗೆ ಅತಿಯಾಗಿ ಆಡದಂತೆ ಬುದ್ಧಿ ಹೇಳಿ. ನಾನು ಏನಾದರೂ ಮುಸ್ಲಿಂ ಸಮುದಾಯವನ್ನು ಒಗ್ಗೂಡಿಸಿ ರಸ್ತೆಗಿಳಿದರೆ, ತಿರುಗೇಟು ಎಷ್ಟು ಜೋರಾಗಿರುತ್ತದೆ ಎಂದರೆ ನಿಮ್ಮ ಪಕ್ಷದ ಬಾವುಟ ಹಿಡಿಯಲು ಒಬ್ಬನೇ ಒಬ್ಬ ಕಾರ್ಯಕರ್ತನೂ ಉಳಿಯುವುದಿಲ್ಲ ಎಂದು ಕಬೀರ್ ಹೇಳಿರುವುದು ವಿಡಿಯೋದಲ್ಲಿದೆ.
ಅಷ್ಟೇ ಅಲ್ಲದೆ, ಸ್ಥಳೀಯ ಬಹರಾಂಪುರ ಕೇಂದ್ರ ಕಾರಾಗೃಹದ ಸಾಮರ್ಥ್ಯ ಕೇವಲ 4,800 ಜನರನ್ನು ಹಿಡಿಯುವಷ್ಟಿದೆ ಎಂದು ವ್ಯಂಗ್ಯವಾಡಿದ್ದ ಕಬೀರ್​, ನಾವು ಹತ್ತು ಸಾವಿರ ಜನರನ್ನು ಕರೆದುಕೊಂಡು ರಸ್ತೆಗಿಳಿಯುತ್ತೇವೆ, ಜೈಲು ತುಂಬಿಸುತ್ತೇವೆ. ನೀವು ನಮ್ಮನ್ನು ಎಷ್ಟು ದಿನ ಜೈಲಿನಲ್ಲಿಟ್ಟು ಊಟ ಹಾಕುತ್ತೀರಾ ನೋಡೋಣ ಎಂದು ಸವಾಲು ಹಾಕಿದ್ದರು. ಜೊತೆಗೆ, ಚುನಾವಣೆಗೂ ಮುನ್ನ ತಮ್ಮ ಸೋದರಸಂಬಂಧಿಯನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಕಾಲರ್ ಪಟ್ಟಿ ಹಿಡಿದು ಠಾಣೆಯಿಂದ ಹೊರಗೆಳೆಯುವುದಾಗಿಯೂ ಬೆದರಿಕೆ ಹಾಕಿದ್ದರು.
ಇನ್ಮುಂದೆ ರಾಜ್ಯದಲ್ಲಿ ಗೂಂಡಾರಾಜ್​ ನಡೆಯಲ್ಲ - ಸಿಎಂ ಸುವೇಂದು
ಹುಮಾಯೂನ್ ಕಬೀರ್ ಹೇಳಿಕೆಗಳಿಗೆ ವಿಧಾನಸಭೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿಎಂ ಸುವೇಂದು, ರಾಜ್ಯದಲ್ಲಿ ಈಗ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿಲ್ಲ ಎಂಬುದನ್ನು ನೆನಪಿಡಿ. ಹಿಂದೆ ದುರ್ಬಲ ಸಿಎಂ ಇದ್ದಾಗ ನೀವು ಏನು ಬೇಕಾದರೂ ಮಾಡಿ ಪಾರಾಗಬಹುದಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗಾಗಲೇ ರೇಜಿನಗರ ಮತ್ತು ಶಕ್ತಿಪುರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಕಾನೂನು ಕೈಗೆತ್ತಿಕೊಳ್ಳಲು ನಿಮಗೆ ಯಾರು ಅಧಿಕಾರ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು ಮಾತನಾಡಿದ ಮುಖ್ಯಮಂತ್ರಿಗಳು, ಕಬೀರ್ ಅವರ ರಾಜಕೀಯ ತಂತ್ರಗಾರಿಕೆಯನ್ನು ಬಹಿರಂಗಪಡಿಸಿದ್ದಾರೆ. ಭರತ್‌ಪುರ, ರೇಜಿನಗರ ಮತ್ತು ನವಡಾ ಭಾಗಗಳಲ್ಲಿ ಚುನಾಯಿತ ಪಂಚಾಯತ್‌ಗಳನ್ನು ಒಡೆದು, ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದು ಕಬೀರ್ ಅವರ ಯೋಜನೆಯಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ರೇಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ 2-3 ತಿಂಗಳುಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಅಲ್ಲಿ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಲು ಮುಸ್ಲಿಂ ಮತಗಳನ್ನು ಧ್ರುವೀಕರಣ ಮಾಡಲು ಕಬೀರ್ ಇಂತಹ ಕೋಮು ಪ್ರಚೋದಿತ ಆಟವಾಡುತ್ತಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಗೂಂಡಾರಾಜ್ ನಡೆಯುವುದಿಲ್ಲ, ಕಾನೂನಿನ ಆಡಳಿತ ಇರಲಿದೆ ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ನನ್ನದು ಕೇವಲ ರಾಜಕೀಯ ಹೇಳಿಕೆ: ಕಬೀರ್ ಸಮರ್ಥನೆ

ಮುಖ್ಯಮಂತ್ರಿಗಳ ಎಚ್ಚರಿಕೆಯ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಕಬೀರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಹೇಳಿಕೆಗಳು ಕೇವಲ ರಾಜಕೀಯ ವಿರೋಧಿಗಳ ವಿರುದ್ಧವಾಗಿದ್ದವು. ಬಿಜೆಪಿ ನಾಯಕರು ಪೊಲೀಸರನ್ನು ಮುಂದಿಟ್ಟುಕೊಂಡು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ. ಅದಕ್ಕಾಗಿಯೇ ನಾನು ರಾಜಕೀಯವಾಗಿ ಪ್ರತಿಕ್ರಿಯಿಸಿದ್ದೇನೆ. ಅವರು ಮುಖ್ಯಮಂತ್ರಿಗಳಾಗಿದ್ದಾರೆ, ಏನು ಬೇಕಾದರೂ ಹೇಳಬಹುದು, ನಾನು ಅವರಿಗೆ ಪ್ರತಿರೋಧ ಒಡ್ಡಲಾರೆ. ಆದರೆ ಮುಂಬರುವ ಉಪಚುನಾವಣೆಯಲ್ಲಿ ಯಾರಾದರೂ ನಮ್ಮ ಅಭ್ಯರ್ಥಿ ಮೇಲೆ ಕಲ್ಲು ಎಸೆದರೆ, ನಾವು ಅವರಿಗೆ ಪ್ರತಿಯಾಗಿ ರಸಗುಲ್ಲಾ ಕೊಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕಬೀರ್ ರಾಜಕೀಯ ನಡೆ

ಹುಮಾಯೂನ್ ಕಬೀರ್ ಈ ಹಿಂದೆ ತೃಣಮೂಲ ಕಾಂಗ್ರೆಸ್ (TMC) ನಲ್ಲಿದ್ದರು. ಆದರೆ ಅಯೋಧ್ಯೆಯ ಬಾಬರಿ ಮಸೀದಿ ಮಾದರಿಯಲ್ಲಿ ಹೊಸ ಮಸೀದಿಗೆ ಶಂಕುಸ್ಥಾಪನೆ ನೆರವೇರಿಸಿದ ಕಾರಣಕ್ಕೆ ಹಾಗೂ ಆಮ್ ಜನತಾ ಉನ್ನಯನ್ ಪಾರ್ಟಿ (AJUP) ಎಂಬ ಹೊಸ ಪಕ್ಷ ಕಟ್ಟಿದ ಕಾರಣಕ್ಕೆ ಟಿಎಂಸಿ ಅವರನ್ನು ಅಮಾನತು ಮಾಡಿತ್ತು. ಈ ಹಿಂದೆ ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳಲು ಅವರು ಯತ್ನಿಸಿದ್ದರಾದರೂ, ಕಬೀರ್ ಅವರು ಬಿಜೆಪಿಯೊಂದಿಗೆ ₹1000 ಕೋಟಿ ಒಪ್ಪಂದದ ಮಾತುಕತೆ ನಡೆಸುತ್ತಿದ್ದಾರೆ ಎಂಬ ಆಡಿಯೋ ಕ್ಲಿಪ್ ಬಿಡುಗಡೆಯಾದ ನಂತರ ಆ ಮೈತ್ರಿಯೂ ಮುರಿದುಬಿದ್ದಿತ್ತು. ಸದ್ಯ ಮುರ್ಶಿದಾಬಾದ್ ವಲಯದಲ್ಲಿ ಈ ಹಗ್ಗಜಗ್ಗಾಟ ಬಂಗಾಳ ರಾಜಕೀಯದ ಬಿಸಿಯನ್ನು ಮತ್ತಷ್ಟು ಹೆಚ್ಚಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net