ಬ್ಯಾರಿಕೇಡ್‌ಗಳ ಮುಂದೆ ಉನೋ ಆಟ, ಘರ್ಷಣೆಯ ನಡುವೆ ಡ್ಯಾನ್ಸ್! ಸಿಜೆಪಿ ಚಳವಳಿಯನ್ನು ಕಂಟೆಂಟ್ ಫೆಸ್ಟಿವಲ್ ಮಾಡಿದ 'ಜೆನ್ ಝಿ'! CJP Protest

 CJP Protest ಚಿತ್ರ Instagram
CJP Protest ಚಿತ್ರ Instagram
Published on
ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳವು ಕೇವಲ ಬ್ಯಾರಿಕೇಡ್‌ಗಳು, ಘೋಷಣೆಗಳು ಮತ್ತು ಪೊಲೀಸರ ಕಣ್ಗಾವಲಿಗೆ ಸೀಮಿತವಾಗಿಲ್ಲ. ರಸ್ತೆಯಲ್ಲಿ ತೀವ್ರ ಉದ್ವಿಗ್ನತೆ ನೆಲೆಸಿದ್ದರೂ, ಮತ್ತೊಂದೆಡೆ ಮೊಬೈಲ್ ಕ್ಯಾಮೆರಾಗಳು ಆನ್ ಆಗಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳ ಶೂಟಿಂಗ್ ಭರದಿಂದ ಸಾಗಿತ್ತು. ಅದಾಗ್ಯೂ, ಕಾಕ್ರೋಚ್​ ಜನತಾ ಪಾರ್ಟಿ (CJP Protest) ಆಯೋಜಿಸಿದ್ದ ಈ ಚಟುವಳಿಯಲ್ಲಿ ದೇಶದ ಜೆನ್​ ಝಿ ಯುವಜನತೆ ತಮ್ಮದೇ ಆದ ವಿಶಿಷ್ಟ ಡಿಜಿಟಲ್​ ಶೈಲಿಯಲ್ಲಿ ಪ್ರತಿಭಟಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆದಿದ್ದಾರೆ.
ಸಾಂಪ್ರದಾಯಿಕವಾಗಿ ಮಾಧ್ಯಮಗಳ ನ್ಯೂಸ್ ಕ್ಯಾಮೆರಾಗಳಲ್ಲಿ ಕಾಣ ಸಿಗುತ್ತಿದ್ದ ಸೀರಿಯಸ್ ಪ್ರತಿಭಟನೆಯ ದೃಶ್ಯಗಳು, ಈ ಬಾರಿ ಯುವಕರ ಸ್ಮಾರ್ಟ್‌ಫೋನ್‌ಗಳ ಫ್ರಂಟ್ ಕ್ಯಾಮೆರಾ, ಟ್ರೆಂಡಿಂಗ್ ಆಡಿಯೋ ಮತ್ತು ಕ್ವಿಕ್-ಕಟ್ ರೀಲ್ಸ್ ರೂಪದಲ್ಲಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

'GRWM'ನಿಂದ ಆರಂಭವಾಗುವ ಪ್ರತಿಭಟನಾ ಡೈರಿ!

ಸಾಮಾನ್ಯವಾಗಿ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಇನ್​ಫ್ಲುಯೆನ್ಸರ್​ಗಳು ಮಾಡುವ ಗೆಟ್​ ರೆಡಿ ವಿತ್​ ಮಿ ವಿಡಿಯೋಗಳು ಈ ಬಾರಿ ಪ್ರತಿಭಟನೆಯ ಅಖಾಡದಲ್ಲಿ ಸದ್ದು ಮಾಡುತ್ತಿವೆ. ಚಳವಳಿಗೆ ಹೊರಡುವ ಮುನ್ನ ಯುವಕ-ಯುವತಿಯರು ತಮ್ಮ ಮನೆಗಳಲ್ಲಿ ಧರಿಸುವ ಉಡುಪು, ಪರಿಕರಗಳನ್ನು ತೋರಿಸುತ್ತಾ ರೆಡಿಯಾಗುವ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂಟರ್ನೆಟ್‌ನಲ್ಲಿ ಆರಂಭವಾಗಿ ನಂತರ ರಸ್ತೆಗಿಳಿದ ಸಿಜೆಪಿ (CJP) ಪ್ರತಿಭಟನೆಗೆ ಈ 'ಲೈವ್ ಕಂಟೆಂಟ್ ಡೈರಿ' ಶೈಲಿಯ ವೀಡಿಯೊಗಳು ಭಾರಿ ಮೈಲೇಜ್ ತಂದುಕೊಟ್ಟಿವೆ.

ಜಂತರ್ ಮಂತರ್‌ನಲ್ಲಿ 'ಉನೋ' ಕಾರ್ಡ್ ಆಟ!

ಪ್ರತಿಭಟನಾ ಸ್ಥಳದಲ್ಲಿ ವಾತಾವರಣ ಭುಗಿಲೆದ್ದಾಗ ಜಂತರ್​ ಮಂತರ್​ನಲ್ಲಿ ಮತ್ತೊಂದು ರೋಚಕ ದೃಶ್ಯ ಕಂಡುಬಂದಿತು. ಪೊಲೀಸರು ಯುವಕರನ್ನು ನಿಯಂತ್ರಿಸುವ ಸಮಯದಲ್ಲಿ ಯುವ ಪ್ರತಿಭಟನಾಕಾರರ ಗುಂಪೊಂದು ರಸ್ತೆಯಲ್ಲಿ ಕುಳಿತು ಉನೋ ಕಾರ್ಡ್ ಗೇಮ್ ಆಡುತ್ತಿರುವ ವಿಡಿಯೋವೊಂದನ್ನು ಕಾಣಬಹುದು. ಸಾಮಾನ್ಯವಾಗಿ ಕಾಲೇಜು ಬ್ರೇಕ್ ಅಥವಾ ಪಾರ್ಟಿಗಳಲ್ಲಿ ಕಾಣಸಿಗುವ ಈ ಆಟ, ಚಳವಳಿಯ ಬ್ಯಾನರ್‌ಗಳ ನಡುವೆ ಪ್ರತ್ಯಕ್ಷವಾಗಿದ್ದು ನೆಟ್ಟಿಗರಲ್ಲಿ ಭಾರಿ ಕುತೂಹಲ ಮೂಡಿಸಿತು.

ಘರ್ಷಣೆಯ ನಡುವೆಯೂ ರೀಲ್ಸ್ ಮತ್ತು ಡ್ಯಾನ್ಸ್!

ಪೊಲೀಸರ ಆಕ್ಷನ್​, ತಳ್ಳಾಟ ಮತ್ತು ಬಿಗುವಿನ ವಾತಾವರಣದ ನಡುವೆಯೂ ಯುವಕರ ವಿಡಿಯೋ ರೆಕಾರ್ಡಿಂಗ್​ ನಿಲ್ಲಲಿಲ್ಲ. ಉದ್ವಿಗ್ನ ಸಂದರ್ಭಗಳಲ್ಲೂ ಟ್ರೆಂಡಿಂಗ್ ಮ್ಯೂಸಿಕ್ ಹಾಕಿಕೊಂಡು ನೃತ್ಯ ಮಾಡುವುದು, ಸೋಷಿಯಲ್​ ಮೀಡಿಯಾಕ್ಕೆ ತಕ್ಕಂತೆ ಕಂಟೆಂಟ್​ ಕ್ರಿಯೇಟ್​ ಮಾಡುವುದನ್ನು ಗಮನಿಸಬಹುದು. ಪ್ರತಿಭಟನೆಯ ಗಂಭೀರತೆ ಮತ್ತು ಇಂಟರ್ನೆಟ್ ಜಗತ್ತಿನ ಈ ಕ್ಯಾಶುಯಲ್ ಶೈಲಿ ಪರಸ್ಪರ ವೈದೃಶ್ಯವಾಗಿದ್ದರೂ, ಯುವಪೀಳಿಗೆ ತಮ್ಮ ಧ್ವನಿಯನ್ನು ಜಗತ್ತಿಗೆ ತಲುಪಿಸಲು ಕಂಡುಕೊಂಡ ಹೊಸ ಹಾದಿಯಾಗಿ ಹೊರಹೊಮ್ಮಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net