ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದು ಬಂದಂತೆ ಪ್ರಧಾನ್‌ ಅವರನ್ನು ಸನ್ಮಾನಿಸಿದರು!..ಬಿಜೆಪಿ ನಾಯಕರ ವಿರುದ್ಧ ಗೊಗೊಯ್ ಆಕ್ರೋಶ | Paper Leak Bill 2026

Paper Leak Bill 2026
Paper Leak Bill 2026
Published on
ನವದೆಹಲಿ: ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026 (Paper Leak Bill 2026) ಮೇಲಿನ ವಿರೋಧ ಪಕ್ಷದ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಪೇಪರ್ ಲೀಕ್ ತಡೆಯುವ ವಿಷಯದಲ್ಲಿ ಸರ್ಕಾರಕ್ಕೆ ಯಾವುದೇ ಗಂಭೀರತೆಯಿಲ್ಲ ಎಂದು ಮಂಗಳವಾರ (ಜು.28) ವಾಗ್ದಾಳಿ ನಡೆಸಿದರು.
ಮಸೂದೆಯನ್ನು ಪರಿಶೀಲಿಸಿದ ನಂತರ ಮಾತು ಆರಂಭಿಸಿದ ಗೊಗೊಯ್​, ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ಅರ್ಥಪೂರ್ಣ ಬದಲಾವಣೆ ತರಲು ಸರ್ಕಾರಕ್ಕೆ ಮನಸ್ಸಿಲ್ಲ ಎಂಬುದು ಈ ಮಸೂದೆ ಓದಿದಿ ತಕ್ಷಣ ತಿಳಿದುಬಂದಿದ್ದು, ಪ್ರಸ್ತಾವಿತ ತಿದ್ದುಪಡಿಯನ್ನು ಕಣ್ಣೊರೆಸುವ ತಂತ್ರ ಎಂದು ಕರೆದ ಅವರು, ಎರಡು ವರ್ಷಗಳ ಹಿಂದೆ ಮೂಲ ಕಾಯ್ದೆಯನ್ನು ತಂದಾಗ, ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಪೇಪರ್ ಲೀಕ್ ತಡೆಯಲು ಇದು ಐತಿಹಾಸಿಕ ಕ್ರಮ ಎಂದು ಸರ್ಕಾರ ಬಣ್ಣಿಸಿತ್ತು ಎಂಬುದನ್ನು ನೆನಪಿಸಿಕೊಂಡರು.
2024 ರಲ್ಲಿ ಕಾನೂನು ಜಾರಿಗೆ ಬಂದರೂ ಸಹ ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಲೇ ಇವೆ ಎಂದು ಟೀಕಿಸಿದ ಕಾಂಗ್ರೆಸ್​ ಸಂಸದ, ಕಾನೂನು ಅಷ್ಟೊಂದು ಕಠಿಣವಾಗಿದ್ದರೆ 2025 ಮತ್ತು 2026 ರಲ್ಲಿ ಇಷ್ಟೊಂದು ಪೇಪರ್ ಲೀಕ್‌ಗಳು ಹೇಗೆ ನಡೆದವು ಎಂದು ಪ್ರಶ್ನಿಸಿದರು.

ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಬಂದಂತೆ ಸನ್ಮಾನ!...

ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಸಂಸತ್ತಿಗೆ ಬಂದಾಗ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಬಂದಂತೆ ಎನ್​ಡಿಎ ನಾಯಕರು ಹೂಮಾಲೆ ಹಾಕಿ ಸ್ವಾಗತಿಸಿದರು ಎಂದು ಕಿಡಿಕಾರಿದ ಗೊಗೊಯ್​, 2024 ರ ನೀಟ್ ವಿವಾದದ ಸಮಯದಲ್ಲಿ ಪ್ರಧಾನ್ ಅವರೇ ಶಿಕ್ಷಣ ಸಚಿವರಾಗಿದ್ದರು ಮತ್ತು 21 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡ ವರದಿಗಳು ಬಂದ ನಂತರವೂ ಪೇಪರ್ ಲೀಕ್ ನಡೆದಿದೆ ಎಂಬುದನ್ನೇ ನಿರಾಕರಿಸಿದ್ದರು. ಇತ್ತ ಪೇಪರ್ ಲೀಕ್ ತಡೆಯುವ ಬದಲು ಪ್ರಧಾನಿ ನರೇಂದ್ರ ಮೋದಿ ಇನ್‌ಸ್ಟಾಗ್ರಾಮ್‌ ಮೇಲೆ ಗಮನ ಹರಿಸಿ ಎಂದು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ನೀಟ್-ಯುಜಿ ಪೇಪರ್ ಲೀಕ್ ತನಿಖೆಯ ಪ್ರಗತಿಯನ್ನು ಪ್ರಶ್ನಿಸಿದ ಅವರು, ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವ 45 ಆರೋಪಿಗಳಲ್ಲಿ 44 ಜನರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿದರು. ಎನ್​ಟಿಎ ಸಿಬ್ಬಂದಿ ಬಲ 34 ಆಗಿರುವಾಗ 47 ಅಧಿಕಾರಿಗಳನ್ನು ವಜಾಗೊಳಿಸಿದ್ದು ಹೇಗೆ ಎಂದ ಗೊಗೊಯ್​, ಆ ಸಂಸ್ಥೆಯ ಮುಖ್ಯಸ್ಥರು ಈ ಹಿಂದೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿದ್ದಾಗಲೂ ಅಕ್ರಮಗಳು ವರದಿಯಾಗಿದ್ದವು, ಆರ್‌ಎಸ್ಎಸ್ ಸಂಪರ್ಕ ಹೊಂದಿರುವ ಆ ಅಧಿಕಾರಿಯನ್ನು ಮೋದಿ ಸರ್ಕಾರ ಇಂದಿಗೂ ಏಕೆ ರಕ್ಷಿಸುತ್ತಿದೆ ಎಂದು ಪ್ರಶ್ನೆಗಳ ಸುರಿಮಳೆಗೈದರು.

ಏನಿದು ಪೇಪರ್ ಲೀಕ್ ತಡೆ ಕಾಯ್ದೆ..?

ಈ ಹೊಸ ತಿದ್ದುಪಡಿ ವಿಧೇಯಕವು ಪರೀಕ್ಷಾ ಅಕ್ರಮ ಎಸಗುವ ವ್ಯಕ್ತಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗಿನ ದಂಡವನ್ನು ಪ್ರಸ್ತಾಪಿಸುತ್ತದೆ. ಈ ಕಾಯ್ದೆಯಡಿ ಪೇಪರ್ ಲೀಕ್ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕಾಗಿದ್ದು, ಪೇಪರ್ ಲೀಕ್ ಅಥವಾ ಅಕ್ರಮ ಎಸಗುವವರಿಗೆ ಕನಿಷ್ಠ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಸಂಘಟಿತ ಅಪರಾಧಗಳಿಗೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಮತ್ತು 10 ಕೋಟಿ ರೂ.ವರೆಗೆ ದಂಡವನ್ನು ವಿಧಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಇರುವ ಕಾನೂನಿನಲ್ಲಿ ಅಕ್ರಮಕ್ಕೆ 3 ರಿಂದ 5 ವರ್ಷ ಹಾಗೂ ಸಂಘಟಿತ ಅಪರಾಧಕ್ಕೆ 5 ರಿಂದ 10 ವರ್ಷಗಳ ಜೈಲು ಶಿಕ್ಷೆಯಿದೆಯಾದರೂ, ಹೊಸ ವಿಧೇಯಕವು ವಿಚಾರಣೆಯನ್ನು ಚಾರ್ಜ್‌ಶೀಟ್ ಸಲ್ಲಿಕೆಯಾದ 3 ತಿಂಗಳೊಳಗೆ ಪೂರ್ಣಗೊಳಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸಲು ಅಧಿಕಾರ ನೀಡುತ್ತದೆ. ಜೊತೆಗೆ, ಅಗತ್ಯವಿದ್ದರೆ ತನಿಖೆಗಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಸಿಗಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net