ಫ್ರೆಂಚ್ ಓಪನ್‌: ಮಿಂಚಿದ 19ರ ಹರೆಯದ ಮೀರ! ಸಿಬೀರಿಯಾ ಸುಂದರಿಗೆ ಚೊಚ್ಚಲ ಗ್ರಾಂಡ್ ಸ್ಲ್ಯಾಮ್ ಮುಕುಟ! Mirra Andreeva

ಫ್ರೆಂಚ್ ಓಪನ್‌: ಮಿಂಚಿದ 19ರ ಹರೆಯದ ಮೀರ! ಸಿಬೀರಿಯಾ ಸುಂದರಿಗೆ ಚೊಚ್ಚಲ ಗ್ರಾಂಡ್ ಸ್ಲ್ಯಾಮ್ ಮುಕುಟ!
ಫ್ರೆಂಚ್ ಓಪನ್‌: ಮಿಂಚಿದ 19ರ ಹರೆಯದ ಮೀರ! ಸಿಬೀರಿಯಾ ಸುಂದರಿಗೆ ಚೊಚ್ಚಲ ಗ್ರಾಂಡ್ ಸ್ಲ್ಯಾಮ್ ಮುಕುಟ!
Published on
ಪ್ಯಾರಿಸ್: ಟೆನಿಸ್ ಜಗತ್ತಿನ ಬಹುದೊಡ್ಡ ಸರಣಿಗಳಲ್ಲಿ ಒಂದಾದ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೇವಲ 19 ವರ್ಷದ ರಷ್ಯಾದ ಟೆನಿಸ್ ತಾರೆ ಮೀರ ಆಂಡ್ರೀವಾ (Mirra Andreeva) ತಮ್ಮ ಅದ್ಭುತ ಆಟದ ಮೂಲಕ ಚೊಚ್ಚಲ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಆಂಡ್ರೀವಾ, ಟೂರ್ನಿಯ ‘ಡಾರ್ಕ್ ಹಾರ್ಸ್’ ಎಂದೇ ಗುರುತಿಸಿಕೊಂಡಿದ್ದ ಪೋಲೆಂಡ್‌ನ ಕ್ವಾಲಿಫೈಯರ್ ಆಟಗಾರ್ತಿ ಮಜಾ ಚ್ವಾಲಿನ್ಸ್ಕಾ ಅವರ ಕನಸಿನ ಓಟಕ್ಕೆ ಬ್ರೇಕ್ ಹಾಕಿದ್ದಾರೆ.
ಸುಮಾರು 1 ಗಂಟೆ 22 ನಿಮಿಷಗಳ ಕಾಲ ನಡೆದ ಏಕಪಕ್ಷೀಯ ಹೋರಾಟದಲ್ಲಿ ಆಂಡ್ರೀವಾ 6-3, 6-2 ನೇರ ಸೆಟ್‌ಗಳಿಂದ ಚ್ವಾಲಿನ್ಸ್ಕಾ ಅವರನ್ನು ಮಣಿಸಿದರು. ಈ ಗೆಲುವಿನೊಂದಿಗೆ 1992ರಲ್ಲಿ ಮೋನಿಕಾ ಸೆಲೆಸ್ ಬರೆದಿದ್ದ ದಾಖಲೆಯ ನಂತರ, ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) ಅಂಗಳದಲ್ಲಿ ಪ್ರಶಸ್ತಿ ಎತ್ತಿಹಿಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಆಂಡ್ರೀವಾ ಪಾತ್ರರಾಗಿದ್ದಾರೆ.

ಕೋಚ್ ತಬ್ಬಿ ಕಣ್ಣೀರಿಟ್ಟ ಚಾಂಪಿಯನ್!

ಪಂದ್ಯ ಮುಗಿಯುತ್ತಿದ್ದಂತೆ ಆನಂದಬಾಷ್ಪ ಸುರಿಸುತ್ತಾ ಅಂಗಳದಲ್ಲೇ ಬಿದ್ದ ಆಂಡ್ರೀವಾ, ನಂತರ ಗ್ಯಾಲರಿಯತ್ತ ಓಡಿಹೋಗಿ ತಮ್ಮ ತರಬೇತುದಾರಿ (ಕೋಚ್), 1994ರ ವಿಂಬಲ್ಡನ್ ಚಾಂಪಿಯನ್ ಕೊಂಚಿಟಾ ಮಾರ್ಟಿನೆಜ್ ಅವರನ್ನು ಬಿಗಿದಪ್ಪಿ ಸಂಭ್ರಮಿಸಿದರು. ನಾನು ತುಂಬಾ ಚಿಕ್ಕವಳಿದ್ದಾಗಿನಿಂದಲೂ ಫ್ರೆಂಚ್ ಓಪನ್ ನೋಡುತ್ತಾ ಬೆಳೆದವಳು. ಈ ಟ್ರೋಫಿ ಗೆಲ್ಲುವುದು ನನ್ನ ಬಹುದಿನಗಳ ಕನಸಾಗಿತ್ತು, ಇವತ್ತು ಅದು ನನಸಾಗಿದೆ ಎಂದು ಆಂಡ್ರೀವಾ ಭಾವುಕರಾಗಿ ನುಡಿದರು.
ಪಂದ್ಯದ ಆರಂಭದಲ್ಲಿ ಜೋರಾದ ಗಾಳಿ ಮತ್ತು ಫೈನಲ್ ಪಂದ್ಯದ ಒತ್ತಡದಿಂದಾಗಿ ಇಬ್ಬರೂ ಆಟಗಾರ್ತಿಯರು ಸತತ ಸರ್ವ್ ಬ್ರೇಕ್ ಮಾಡಿಕೊಂಡರು. ಆದರೆ, ವಿಶ್ವ ರ‍್ಯಾಂಕಿಂಗ್‌ನಲ್ಲಿ 114ನೇ ಸ್ಥಾನದಲ್ಲಿದ್ದ ಚ್ವಾಲಿನ್ಸ್ಕಾ ಅವರಿಗೆ ಮೈದಾನದಲ್ಲಿದ್ದ 15,000ಕ್ಕೂ ಹೆಚ್ಚು ಪ್ರೇಕ್ಷಕರು ಭಾರಿ ಬೆಂಬಲ ನೀಡಿದರು. ಅದರೆ, ಅದ್ಭುತ ಮಾನಸಿಕ ಸ್ಥಿರತೆ ಪ್ರದರ್ಶಿಸಿದ ಆಂಡ್ರೀವಾ ಸತತ 9 ಗೇಮ್‌ಗಳನ್ನು ಗೆದ್ದು, ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ಪಡೆದರು.

ಹಿನ್ನೆಲೆ ಮತ್ತು ಸಾಧನೆಯ ಹಾದಿ

ಸಿಬೀರಿಯಾದಲ್ಲಿ ಜನಿಸಿ, ಫ್ರಾನ್ಸ್‌ನಲ್ಲಿ ಟೆನಿಸ್ ತರಬೇತಿ ಪಡೆದ ಆಂಡ್ರೀವಾ ಅವರ ಪ್ರತಿಭೆಯನ್ನು 2023ರ ಮ್ಯಾಡ್ರಿಡ್ ಓಪನ್‌ನಲ್ಲೇ ಬ್ರಿಟನ್‌ನ ದೈತ್ಯ ಆಟಗಾರ ಆಂಡಿ ಮರ್ರೆ ಶ್ಲಾಘಿಸಿದ್ದರು. ಕಳೆದ ವರ್ಷ (2024) ಫ್ರೆಂಚ್ ಓಪನ್‌ನ ಸೆಮಿಫೈನಲ್ ತಲುಪಿದ್ದ ಈಕೆ, ಈ ವರ್ಷ ಎರಡು WTA 1000 ಪ್ರಶಸ್ತಿಗಳನ್ನು ಗೆದ್ದು ವಿಶ್ವದ ಟಾಪ್ 5 ಆಟಗಾರ್ತಿಯರ ಪಟ್ಟಿಗೆ ಲಗ್ಗೆ ಇಟ್ಟಿದ್ದರು. ಸೆಮಿಫೈನಲ್‌ನಲ್ಲಿ ಯುಕ್ರೇನ್‌ನ ಮಾರ್ಟಾ ಕೊಸ್ಟ್ಯುಕ್ ವಿರುದ್ಧ ರಾಜಕೀಯ ಉದ್ವಿಗ್ನತೆಯ ನಡುವೆಯೂ ಶಾಂತವಾಗಿ ಆಡಿ ಗೆದ್ದಿದ್ದ ಆಂಡ್ರೀವಾ, ಫೈನಲ್‌ನಲ್ಲೂ ಅದೇ ಪ್ರೌಢಿಮೆ ಮೆರೆದರು.

ಹೋಟೆಲ್ ಬಿಲ್ ಕಟ್ಟಲು ದುಡ್ಡಿಲ್ಲದ ಆಟಗಾರ್ತಿಗೆ ಸಿಕ್ಕಿತು ರೂ. 12 ಕೋಟಿ!

ಫೈನಲ್‌ನಲ್ಲಿ ಸೋತರೂ ಪೋಲೆಂಡ್‌ನ ಮಜಾ ಚ್ವಾಲಿನ್ಸ್ಕಾ ಅವರ ಕಥೆ ಮಾತ್ರ ಯಾವುದೇ ಸಿನಿಮಾ ಕಥೆಗೆ ಕಮ್ಮಿಯಿಲ್ಲ. ಟೂರ್ನಿ ಆರಂಭಕ್ಕೂ ಮುನ್ನ ಇವರ ಗೆಲುವಿನ ಮೇಲೆ 500-1 ರಷ್ಟು ಬೆಟ್ಟಿಂಗ್ ಇತ್ತು. ಅಂದರೆ ಇವರು ಫೈನಲ್ ತಲುಪುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಬ್ರಿಟನ್‌ನ ಎಮ್ಮಾ ರಾಡುಕಾನು ನಂತರ ಗ್ರಾಂಡ್ ಸ್ಲ್ಯಾಮ್ ಫೈನಲ್ ತಲುಪಿದ ಎರಡನೇ ಕ್ವಾಲಿಫೈಯರ್ ಎಂಬ ಹೆಗ್ಗಳಿಕೆಗೆ ಚ್ವಾಲಿನ್ಸ್ಕಾ ಪಾತ್ರರಾದರು.
ಕಡು ಬಡತನ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಕರಿಯರ್ ಆರಂಭಿಸಿದ್ದ ಚ್ವಾಲಿನ್ಸ್ಕಾ, ಫ್ರೆಂಚ್ ಓಪನ್‌ನ ಎರಡನೇ ಸುತ್ತು ಗೆದ್ದಾಗಲೂ ಪ್ಯಾರಿಸ್‌ನ ಹೋಟೆಲ್ ರೂಮ್ ಬಿಲ್ ಕಟ್ಟಲು ನನ್ನ ಹತ್ತಿರ ದುಡ್ಡಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ರನ್ನರ್ ಅಪ್ ಆದ ಇವರಿಗೆ ಈಗ ಬರೋಬ್ಬರಿ 1.4 ಮಿಲಿಯನ್ ಯುರೋ (ಸುಮಾರು ರೂ. 12.5 ಕೋಟಿ) ಬಹುಮಾನದ ಹಣ ಸಿಕ್ಕಿದೆ. ಇದು ಅವರ ಇಡೀ ಜೀವನದ ಒಟ್ಟು ಗಳಿಕೆಗಿಂತ ಮೂರು ಪಟ್ಟು ಹೆಚ್ಚಾಗಿದೆ. ಜೊತೆಗೆ ಅವರ ರ‍್ಯಾಂಕಿಂಗ್ ಕೂಡ 21ನೇ ಸ್ಥಾನಕ್ಕೆ ಜಿಗಿದಿದೆ.
ಸೋಲಿನ ನಂತರ ನಗುಮುಖದಿಂದಲೇ ಮಾತನಾಡಿದ ಚ್ವಾಲಿನ್ಸ್ಕಾ, ಇವತ್ತು ನಾನು ಇನ್ನೂ ಚೆನ್ನಾಗಿ ಆಡಬೇಕಿತ್ತು, ಆದರೆ ಮೀರ ಅದ್ಭುತವಾಗಿ ಆಡಿದಳು. ಈ ಪ್ಯಾರಿಸ್ ಪ್ರವಾಸವನ್ನು ನಾನು ಜೀವನದಲ್ಲಿ ಎಂದಿಗೂ ಮರೆಯಲ್ಲ ಎಂದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net