ಟಿಎಂಸಿ ಹೆಸರು ಮತ್ತು ಚಿಹ್ನೆ ಫ್ರೀಜ್: ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಮಮತಾ ಸಲ್ಲಿಸಿದ್ದ ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ | Supreme Court

ಮಾಜಿ ಸಿಎಂ ಮಮತಾ ಬ್ಯಾನರ್ಜಿ
ಮಾಜಿ ಸಿಎಂ ಮಮತಾ ಬ್ಯಾನರ್ಜಿ
Published on
ನವದೆಹಲಿ: ತೃಣಮೂಲ ಕಾಂಗ್ರೆಸ್‌ನ ಎರಡೂ ಬಣಗಳ ನಡುವಿನ ವಿವಾದ ಮಧ್ಯ ಉಪಚುನಾವಣೆಗಳಲ್ಲಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಳಸುವುದನ್ನು ನಿಷೇಧಿಸಿದ ಚುನಾವಣೆ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸೋಮವಾರ(ಸೆ. 21) ಸುಪ್ರೀಂಕೋರ್ಟ್(Supreme Court) ಒಪ್ಪಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಜೋಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನ ಅವರನ್ನೊಳಗೊಂಡ ಪೀಠದ ಮುಂದೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಿಷಯವನ್ನು ಪ್ರಸ್ತಾಪಿಸಿ, ಶೀಘ್ರ ವಿಚಾರಣೆ ನಡೆಸುವಂತೆ ಕೋರಿದರು.
ಮಮತಾ ಬ್ಯಾನರ್ಜಿ ಪರ ಕಪಿಲ್ ಸಿಬಲ್, ಚುನಾವಣೆ ಆಯೋಗ ಮೊದಲು ಉಪಚುನಾವಣೆಗೆ ಅಧಿಸೂಚನೆ ಹೊರಡಿಸುತ್ತದೆ. ಅದರ ನಡುವೆಯೇ ಚಿಹ್ನೆಯನ್ನು ಉಪಯೋಗಿಸದಂತೆ ಸ್ಥಗಿತಗೊಳಿಸುತ್ತಾರೆ. ಇದೇನು ನಡೆಯುತ್ತಿದೆ? ನಮಗೆ ತುರ್ತು ವಿಚಾರಣೆ ಬೇಕು ಎಂದು ವಾದಿಸಿದರು.
ಬಳಿಕ ಪ್ರತಿಸ್ಪರ್ಧಿ ಬಣವು ತನ್ನ ವಾದಗಳನ್ನು ಮಂಡಿಸಲು ಅವಕಾಶವನ್ನು ಹೊಂದಿರುತ್ತದೆ ಎಂದು ಸೂಚಿಸಿದ ಸುಪ್ರೀಂಕೋರ್ಟ್, ವಿಷಯವನ್ನು ತುರ್ತಾಗಿ ಪಟ್ಟಿ ಮಾಡಲು ಒಪ್ಪಿಕೊಂಡಿತು.
ಗುರುವಾರ ತಡರಾತ್ರಿ ಚುನಾವಣೆ ಆಯೋಗವು, ಪಕ್ಷದ ಬಣಗಳ ನಡುವಿನ ವಿವಾದದ ಅಂತಿಮ ನಿರ್ಣಯ ಬರುವವರೆಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಎಂಬ ಹೆಸರು ಮತ್ತು ಪಕ್ಷದ ಮೀಸಲು ಚಿಹ್ನೆಯನ್ನು ಬಳಸದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಬಳಿಕ ಮಾರನೇ ದಿನ ಎರಡೂ ಬಣಗಳಿಗೆ ಪ್ರತ್ಯೇಕ ಹೆಸರುಗಳು ಮತ್ತು ಚಿಹ್ನೆಗಳನ್ನು ನೀಡಿದೆ.
ಇನ್ನೂ ಬ್ಯಾನರ್ಜಿ ತಮ್ಮ ಅರ್ಜಿಯಲ್ಲಿ ಆಯೋಗದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಪಕ್ಷದ ಮೂಲ ಹೆಸರು ಮತ್ತು ಚಿಹ್ನೆಯನ್ನು ಮರುಸ್ಥಾಪಿಸುವಂತೆ ಕೋರಿದ್ದಾರೆ. ಅರ್ಜಿಯಲ್ಲಿ ಚುನಾವಣಾ ಆಯೋಗ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net