ಕೇರಳಂನಲ್ಲಿ ಜೂನ್ 15 ರಿಂದ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ: ಪ್ರಿಯದರ್ಶಿನಿ ಯೋಜನೆಗೆ ಸಿಎಂ ವಿ.ಡಿ. ಸತೀಶನ್ ಚಾಲನೆ! Priyadarshini Scheme

ಕೇರಳಂನಲ್ಲಿ ಜೂನ್ 15 ರಿಂದ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ: ಪ್ರಿಯದರ್ಶಿನಿ ಯೋಜನೆಗೆ ಸಿಎಂ ವಿ.ಡಿ. ಸತೀಶನ್ ಚಾಲನೆ!
ಕೇರಳಂನಲ್ಲಿ ಜೂನ್ 15 ರಿಂದ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ: ಪ್ರಿಯದರ್ಶಿನಿ ಯೋಜನೆಗೆ ಸಿಎಂ ವಿ.ಡಿ. ಸತೀಶನ್ ಚಾಲನೆ!
Published on
ತಿರುವನಂತಪುರಂ: ಕರ್ನಾಟಕದ ಶಕ್ತಿ ಯೋಜನೆಯ ಮಾದರಿಯಲ್ಲೇ ಈಗ ಕೇರಳದಲ್ಲೂ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಅಧಿಕೃತವಾಗಿ ಜಾರಿಗೆ ಬರುತ್ತಿದೆ. ಯುಡಿಎಫ್ ನೇತೃತ್ವದ ನೂತನ ಸರ್ಕಾರವು ತನ್ನ ಪ್ರಮುಖ ಚುನಾವಣಾ ಗ್ಯಾರಂಟಿಗಳಲ್ಲಿ ಒಂದಾದ ಪ್ರಿಯದರ್ಶಿನಿ ಯೋಜನೆಗೆ(Priyadarshini Scheme) ಚಾಲನೆ ನೀಡಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಜೂನ್ 15 ರಿಂದಲೇ ರಾಜ್ಯದಾದ್ಯಂತ ಮಹಿಳೆಯರಿಗೆ ಮತ್ತು ಮಂಗಳಮುಖಿಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಲಭ್ಯವಾಗಲಿದೆ ಎಂದು ಸರ್ಕಾರ ಪ್ರಕಟಿಸಿದೆ. ಈ ಕುರಿತು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಶನಿವಾರ ಅಧಿಕೃತ ಆದೇಶ ಹೊರಡಿಸಿದ್ದು, ಉಚಿತ ಪ್ರಯಾಣಕ್ಕೆ ಅರ್ಹವಾಗಿರುವ ಬಸ್‌ಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೂನ್ 15 ರಂದು ರಾಜಧಾನಿ ತಿರುವನಂತಪುರಂನಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಈ ಮಹತ್ವಾಕಾಂಕ್ಷಿ ಯೋಜನೆಗೆ ಅದ್ಧೂರಿ ಚಾಲನೆ ನೀಡಲಿದ್ದಾರೆ.

ಯಾವೆಲ್ಲಾ ಬಸ್‌ಗಳಲ್ಲಿ ಉಚಿತ ಪ್ರಯಾಣ ಲಭ್ಯ?

ಮಹಿಳೆಯರು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಉಚಿತ ಪ್ರಯಾಣದ ಸೌಲಭ್ಯವಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ವಿಶೇಷ ಸ್ಟಿಕ್ಕರ್‌ಗಳನ್ನು ಅಂಟಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ ಕೆಎಸ್‌ಆರ್‌ಟಿಸಿಯ ಒಟ್ಟು 7 ವಿಭಾಗಗಳ ಸಾಮಾನ್ಯ ಬಸ್‌ಗಳಲ್ಲಿ ಮಾತ್ರ ಈ ಸೌಲಭ್ಯ ಸಿಗಲಿದೆ. ಆ ಪ್ರಮುಖ ಬಸ್ಸುಗಳ ಪಟ್ಟಿ ಇಲ್ಲಿದೆ.
ಆರ್ಡಿನರಿ ಬಸ್‌ಗಳು
ಸಿಟಿ ಆರ್ಡಿನರಿ
ಲಿಮಿಟೆಡ್ ಸ್ಟಾಪ್ ಆರ್ಡಿನರಿ
ಫೇರ್-ಸ್ಟೇಜ್ ಆರ್ಡಿನರಿ
ಟೌನ್-ಟು-ಟೌನ್ ಬಸ್‌ಗಳು
ಪಾಯಿಂಟ್-ಟು-ಪಾಯಿಂಟ್ ಸೇವೆಗಳು
ಗ್ರಾಮವಂಡಿ ಸೇವೆಗಳು

ಜಾತಿ, ಆದಾಯದ ಮಿತಿಯಿಲ್ಲ; ಎಲ್ಲ ಮಹಿಳೆಯರಿಗೂ ಉಚಿತ!

ಸಿಎಂ ವಿ.ಡಿ. ಸತೀಶನ್ ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಯೋಜನೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ. ಈ ಯೋಜನೆಯು ಯಾವುದೇ ಆರ್ಥಿಕ ಹಿನ್ನೆಲೆ ಅಥವಾ ಆದಾಯದ ಮಿತಿಯಿಲ್ಲದೆ, ಎಲ್ಲಾ ವಯಸ್ಸಿನ ಮತ್ತು ಎಲ್ಲಾ ವರ್ಗದ ಮಹಿಳೆಯರಿಗೆ ಅನ್ವಯಿಸುತ್ತದೆ. ಇದರೊಂದಿಗೆ ಮಂಗಳಮುಖಿಯರಿಗೂ ಉಚಿತ ಪ್ರಯಾಣದ ಹಕ್ಕನ್ನು ನೀಡಲಾಗಿದೆ. ಈ ಯೋಜನೆಯಿಂದ ಮಹಿಳೆಯರ ಮಾಸಿಕ ಪ್ರಯಾಣದ ವೆಚ್ಚ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದ್ದು, ಅವರ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಶಕ್ತಿ ಸಿಗಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಖಜಾನೆಗೆ ಕೋಟಿ ಕೋಟಿ ಹೊರೆ; ಮುಂದಿನ ಹಂತಕ್ಕೆ ಮುನ್ಸೂಚನೆ

ಈ ಉಚಿತ ಯೋಜನೆಯಿಂದಾಗಿ ಕೇರಳಂ ಕೆಎಸ್‌ಆರ್‌ಟಿಸಿಗೆ ಪ್ರತಿ ತಿಂಗಳು ಸುಮಾರು 60 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದ್ದು, ವಾರ್ಷಿಕವಾಗಿ ಅಂದಾಜು 800 ಕೋಟಿ ರೂಪಾಯಿ ಹೊರೆ ಬೀಳಲಿದೆ. ಈ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಈಗಾಗಲೇ ಸರ್ಕಾರವು ಕೆಎಸ್‌ಆರ್‌ಟಿಸಿ ನೌಕರರ ಸಂಬಳ ಮತ್ತು ಪೆನ್ಷನ್‌ಗಾಗಿ ವಾರ್ಷಿಕ 1,500 ಕೋಟಿ ರೂಪಾಯಿ ನೀಡುತ್ತಿದ್ದು, ಅದರ ಜೊತೆಗೆ ಈಗ ಈ 800 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.
ಸದ್ಯಕ್ಕೆ ಇದು ಮೊದಲ ಹಂತ ಮಾತ್ರ. ಮುಂಬರುವ ದಿನಗಳಲ್ಲಿ ಕೆಎಸ್‌ಆರ್‌ಟಿಸಿಯ ಆದಾಯವನ್ನು ಹೆಚ್ಚಿಸಲು ಮತ್ತು ಸಂಸ್ಥೆಯನ್ನು ಲಾಭದಾಯಕವಾಗಿ ಮಾಡಲು ಹೆಚ್ಚಿನ ಬಸ್‌ಗಳ ಖರೀದಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಿಸಿದ ನಂತರ, ಯೋಜನೆಯನ್ನು ಮುಂದಿನ ಹಂತಕ್ಕೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಮಲಬಾರ್ ಸೇರಿದಂತೆ ವಿವಿಧ ಭಾಗಗಳಲ್ಲಿ ಮಹಿಳೆಯರ ಪ್ರತಿಕ್ರಿಯೆಯನ್ನು ಆಧರಿಸಿ ಪ್ರತಿ ತಿಂಗಳು ಈ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ಸತೀಶನ್​ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಘೋಷಿಸಿದ್ದ 'ಐದು ಇಂದಿರಾ ಗ್ಯಾರಂಟಿಗಳು'

ಕಳೆದ ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಜನತೆಗೆ ಐದು ಇಂದಿರಾ ಗ್ಯಾರಂಟಿಗಳನ್ನು ಘೋಷಿಸಿದ್ದರು.
1. ಪ್ರಿಯದರ್ಶಿನಿ ಯೋಜನೆ: ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ.
2. ವಿದ್ಯಾರ್ಥಿ ವೇತನ: ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು 1,000 ರೂಪಾಯಿ ಪ್ರೋತ್ಸಾಹಧನ.
3. ಸಾಮಾಜಿಕ ಪೆನ್ಷನ್: ಕಲ್ಯಾಣ ಯೋಜನೆಗಳ ಮಾಸಿಕ ಪೆನ್ಷನ್ ಮೊತ್ತ 3,000 ರೂಪಾಯಿಗೆ ಏರಿಕೆ.
4. ಆರೋಗ್ಯ ವಿಮೆ: ಪ್ರತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ವರೆಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ.
5. ಬಡ್ಡಿರಹಿತ ಸಾಲ: ಯುವ ಉದ್ಯಮಿಗಳಿಗೆ ಉದ್ಯೋಗ ಆರಂಭಿಸಲು 5 ಲಕ್ಷ ರೂಪಾಯಿ ವರೆಗೆ ಬಡ್ಡಿರಹಿತ ಸಾಲ.
ಇದೀಗ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಯುಡಿಎಫ್ ಸರ್ಕಾರವು ತನ್ನ ಮೊದಲ ಭರವಸೆಯನ್ನು ಈಡೇರಿಸುವ ಮೂಲಕ ದೀಪಾವಳಿಗೂ ಮುನ್ನವೇ ಕೇರಳದ ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net