ಭಾರತದಲ್ಲಿ ಆಡೋದಿಲ್ಲ! ICC ತಿರಸ್ಕರಿಸಿದ ಬೆನ್ನಲ್ಲೇ ತಮ್ಮ ನಿರ್ಧಾರ ಸ್ಪಷ್ಟಪಡಿಸಿದ ಬಿಸಿಬಿ; ಬಾಂಗ್ಲಾ ಬದಲಿಗೆ ಈ ತಂಡಕ್ಕೆ ಆಹ್ವಾನ?

ಬಾಂಗ್ಲಾ ಕ್ರಿಕೆಟ್​ ತಂಡ
ಬಾಂಗ್ಲಾ ಕ್ರಿಕೆಟ್​ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ಐಸಿಸಿ ತಮ್ಮ ಮನವಿ ತಿರಸ್ಕರಿಸಿದ್ದಕ್ಕೆ ಬಿಸಿಬಿ ಪ್ರತಿಕ್ರಿಯೆ
  • ಸರ್ಕಾರದ ನಿರ್ಧಾರವೇ ಅಂತಿಮ
  • ಕಡೆಗೂ ನಾವು ಟೂರ್ನಿಯಲ್ಲಿ ಆಡುವುದಿಲ್ಲ ಎಂಬ ನಿಲುವು
  • ಇನ್ನೊಮ್ಮೆ ಐಸಿಸಿಗೆ ಅರ್ಥೈಸಲು ಕೊನೆಯ ಬಾರಿಗೆ ಪ್ರಯತ್ನಿಸುವುದಾಗಿ ಹೇಳಿಕೆ
ಢಾಕಾ: ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂದು ಕಡೆಗೂ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ (ಬಿಸಿಬಿ) ಸ್ಪಷ್ಟಪಡಿಸಿದೆ.
ನಮ್ಮ ಭದ್ರತಾ ದೃಷ್ಟಿಯಿಂದ ಭಾರತದಲ್ಲಿ ಆಡುವುದಿಲ್ಲ ಎಂದು ವಿವರಿಸಿದ್ದರು ಕೂಡ ಐಸಿಸಿ ಮಾತ್ರ ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಬಾಂಗ್ಲಾದೇಶದ ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ನಜ್ರುಲ್ ಅಸಮಾಧಾನ ಹೊರಹಾಕಿದ್ದರು. ಈ ನಿಟ್ಟಿನಲ್ಲಿ ಎರಡು ಪತ್ರದಲ್ಲಿ ಐಸಿಸಿಗೆ ತಮ್ಮ ಮನವಿಯನ್ನು ತಿಳಿಸಿದ್ದ ಬಿಸಿಬಿಗೆ ಕೊನೆಗೂ ಭಾರೀ ಮುಖಭಂಗವೇ ಆಗಿದೆ. ಇದರಿಂದ ಕೆರಳಿರುವ ಬಾಂಗ್ಲಾ ಸರ್ಕಾರವು, ತಮ್ಮ ನಿಲುವಿಗೆ ಬದ್ಧವಾಗಿ ಉಳಿಯುವಂತೆ ಬಿಸಿಬಿಗೆ ನಿರ್ದೇಶಿಸಿದ ಬೆನ್ನಲ್ಲೇ ಕ್ರಿಕೆಟ್​ ಮಂಡಳಿ ತಾವು ಭಾರತಕ್ಕೆ ಪ್ರವಾಸ ಮಾಡೋದಿಲ್ಲ ಎಂದಿದೆ.
ತಮ್ಮ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮನವಿಯನ್ನು ಕಡೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದೆ. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಬಾಂಗ್ಲಾದೇಶ ತನ್ನ ಪಂದ್ಯಗಳನ್ನು ಭಾರತದಲ್ಲಿಯೇ ಆಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತು. ಇದೇ ಸಮಯದಲ್ಲಿ, ಟೂರ್ನಿಯಲ್ಲಿ ಭಾಗವಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಲು 24 ಗಂಟೆಗಳ ಗುಡುವು ನೀಡಲಾಯಿತು. ಇದರಿಂದ ಅಸಮಾಧಾನಗೊಂಡಿದ್ದ ಬಿಸಿಬಿ, ತನ್ನ ಸರ್ಕಾರದೊಂದಿಗೆ ಚರ್ಚಿಸಿ ಹೇಳುವುದಾಗಿ ಸ್ಪಷ್ಟಪಡಿಸಿತ್ತು. ಹೀಗೆಂದ ಕೆಲವೇ ಗಂಟೆಗಳಲ್ಲಿ ಟೂರ್ನಿಯ ಭಾಗವಾಗಿ ನಾವು ಭಾರತಕ್ಕೆ ಪ್ರವಾಸ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದೆ.

ಬಾಂಗ್ಲಾ ಬದಲಿಗೆ ಈ ತಂಡಕ್ಕೆ ಆಹ್ವಾನ?

ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಹೋಗಲು ನಿರ್ಧರಿಸಿರುವ ಬಿಸಿಬಿಗೆ ಖಡಕ್ ತಿರುಗೇಟು ನೀಡಲಿರುವ ಐಸಿಸಿ, ಅವರ ಸ್ಥಾನಕ್ಕೆ ಸ್ಕಾಟ್​​ಲ್ಯಾಂಡ್​ಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ ಎಂದು ವರದಿಗಳು ಉಲ್ಲೇಖಿಸಿವೆ. ಇದೇ ನಿಜವೇ ಅಥವಾ ಬಾಂಗ್ಲಾ ಕ್ರಿಕೆಟ್​ ತನ್ನ ನಿರ್ಧಾರವನ್ನು ಕೊನೆ ಕ್ಷಣದಲ್ಲಿ ಬದಲಿಸುತ್ತದೆಯೇ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net