ಇನ್ನೂ 3 ದಿನ... ಪ್ರಯಾಣಿಕರ ತಾಳ್ಮೆಯ ಕಟ್ಟೆ ಒಡೆದ ಬೆನ್ನಲ್ಲೇ ವಿಮಾನಯಾನ ಸಚಿವರಿಂದ ಮಹತ್ವದ ಹೇಳಿಕೆ! IndiGo Crisis

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು
ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು
Published on

ಪ್ರಮುಖ ಮುಖ್ಯಾಂಶಗಳು

  • ಸಿಬ್ಬಂದಿ ಕೊರತೆಯಿಂದ ಇಂಡಿಗೋ ಏರ್​ಲೈನ್ಸ್​ನಲ್ಲಿ ಉಂಟಾಗಿರುವ ಬಿಕ್ಕಟ್ಟು
  • ಈವರೆಗೆ 600ಕ್ಕೂ ಅಧಿಕ ಇಂಡಿಗೂ ವಿಮಾನಗಳ ಹಾರಾಟ ರದ್ದು
  • ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮಹತ್ವದ ಹೇಳಿಕೆ
  • ಮುಂದಿನ ಮೂರು ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣ ಸುಧಾರಿಸಲಿದೆ ಎಂದ ಸಚಿವರು
ನವದೆಹಲಿ: ಸಿಬ್ಬಂದಿ ಕೊರತೆಯಿಂದ ದೇಶದ ಅತಿದೊಡ್ಡ ವಿಮಾನಸಂಸ್ಥೆ ಇಂಡಿಗೋ ಏರ್​ಲೈನ್ಸ್​ನಲ್ಲಿ ( IndiGo Crisis ) ಉಂಟಾಗಿರುವ ಬಿಕ್ಕಟ್ಟಿನಿಂದ ಸಾವಿರಾರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿರುವುದು ಗೊತ್ತೇ ಇದೆ. ದೇಶಾದ್ಯಂತ ಅನೇಕ ವಿಮಾನ ನಿಲ್ದಾಣಗಳು ಅವ್ಯವಸ್ಥೆಯ ಆಗರವಾಗಿದ್ದು, ಊಟ ನೀರು ಇಲ್ಲದೇ ತಮ್ಮ ಲಗೇಜುಗಳನ್ನು ಮರಳಿ ಪಡೆಯುವುದಕ್ಕೂ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈವರೆಗೆ 600ಕ್ಕೂ ಅಧಿಕ ಇಂಡಿಗೂ ವಿಮಾನಗಳು ರದ್ದಾಗಿವೆ. ಇದರಿಂದ ಪ್ರಯಾಣಿಕರ ತಾಳ್ಮೆಯ ಕಟ್ಟೆ ಒಡೆದಿದ್ದು, ಏರ್​ಪೋರ್ಟ್​ಗಳಲ್ಲೇ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ನಡುವೆ ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಮುಂದಿನ ಮೂರು ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣ ಸುಧಾರಿಸಲಿದೆ ಎಂದು ಸಚಿವ ರಾಮ್ ಮೋಹನ್ ನಾಯ್ಡು ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶನಿವಾರದ ವೇಳೆಗೆ ವಿಮಾನಗಳ ವೇಳಾಪಟ್ಟಿ ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದೆ ಮತ್ತು ಮುಂದಿನ ಮೂರು ದಿನಗಳಲ್ಲಿ, ಅಂದರೆ ಸೋಮವಾರದೊಳಗೆ ಸಂಪೂರ್ಣ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಸದ್ಯ ಉಂಟಾಗಿರುವ ಬಿಕ್ಕಟ್ಟಿನ ಕುರಿತಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಶೀಘ್ರದಲ್ಲೇ ಎಲ್ಲವನ್ನು ಸರಿಪಡಿಸಲಾಗುವುದು ಎಂದು ಸಚಿವರು ಹೇಳಿದರು. ಅಲ್ಲದೆ, ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಸಾಕಷ್ಟು ವಿಶ್ರಾಂತಿ ದೊರೆಯುವಂತೆ ಮಾಡಲು ವಿಮಾನ ಕರ್ತವ್ಯ ಸಮಯ ಮಿತಿಗಳ (ಎಫ್‌ಡಿಟಿಎಲ್) ಮೇಲೆ ಕೆಲವು ನಿಯಮಗಳನ್ನು ಜಾರಿ ಮಾಡಿದ್ದನ್ನು ಡಿಜಿಸಿಎ ಹಿಂತೆಗೆದುಕೊಂಡಿರುವುದನ್ನು ಇದೇ ಸಂದರ್ಭದಲ್ಲಿ ಸಚಿವರು ಸಮರ್ಥಿಸಿಕೊಂಡರು. ಪ್ರಯಾಣಿಕರ ಹಿತದೃಷ್ಟಿಯಿಂದ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಮತ್ತು ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ಸಾಮಾನ್ಯ ವಿಮಾನಯಾನ ಸೇವೆಗಳನ್ನು ಆದಷ್ಟು ಬೇಗ ಪುನಃಸ್ಥಾಪಿಸಲು ಮತ್ತು ಪ್ರಯಾಣಿಕರಿಗೆ ಉಂಟಾಗಿರುವ ಅನಾನುಕೂಲತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ನಿರ್ದೇಶಿಸಲಾಗಿದೆ. ಈ ನಿರ್ದೇಶನಗಳ ತಕ್ಷಣದ ಅನುಷ್ಠಾನದ ಆಧಾರದ ಮೇಲೆ, ನಾಳೆಯ ವೇಳೆಗೆ ವಿಮಾನಗಳ ವೇಳಾಪಟ್ಟಿಗಳು ಸ್ಥಿರಗೊಳ್ಳಲು ಪ್ರಾರಂಭವಾಗುತ್ತದೆ ಮತ್ತು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಮುಂದಿನ ಮೂರು ದಿನಗಳಲ್ಲಿ ವಿಮಾನ ಸೇವೆಗಳು ಸಂಪೂರ್ಣ ಸಹಜ ಸ್ಥಿತಿಗೆ ಬರುವುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ವಿಮಾನಯಾನ ಸಚಿವರು ಹೇಳಿದರು.
ಇದೇ ವೇಳೆ ಪ್ರಯಾಣಿಕರಿಗೆ ಯಾವ ರೀತಿ ಸಹಾಯ ಮಾಡಲಾಗುತ್ತೆ ಎಂಬುದನ್ನು ವಿವರಿಸಿದ ನಾಯ್ಡು, ವಿಮಾನಯಾನ ಸಂಸ್ಥೆಗಳು ನಿಯಮಿತ ಮತ್ತು ನಿಖರವಾದ ಅಪ್​ಡೇಟ್​ಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ಇದರಿಂದ ಪ್ರಯಾಣಿಕರು ತಮ್ಮ ಮನೆಗಳಿಂದ ಹೊರಡುವ ಮೊದಲು ನೈಜ-ಸಮಯದ ವಿಮಾನದ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ, ಮರುಪಾವತಿಯನ್ನು ಸ್ವಯಂಚಾಲಿತವಾಗಿ ನೀಡಲಾಗುತ್ತದೆ. ಇದಕ್ಕಾಗಿ ಪ್ರಯಾಣಿಕರು ಫಾಲೋ-ಅಪ್ ಮಾಡಬೇಕಾಗಿಲ್ಲ. ಇನ್ನು ದೀರ್ಘಕಾಲದವರೆಗೆ ಸಿಲುಕಿರುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳಿಂದಲೇ ಹೋಟೆಲ್ ವಸತಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ವಿಮಾನ ನಿಲ್ದಾಣಗಳಲ್ಲಿ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಅವರಿಗೆ ವಿಶ್ರಾಂತಿ ಕೊಠಡಿ ಮತ್ತು ಅವರ ಪ್ರಯಾಣದ ಅನುಭವ ಆರಾಮದಾಯಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು. ಇದಲ್ಲದೆ, ವಿಮಾನ ವಿಳಂಬದಿಂದ ತೊಂದರೆಗೊಳಗಾದ ಎಲ್ಲಾ ಪ್ರಯಾಣಿಕರಿಗೆ ಉಪಾಹಾರ ಮತ್ತು ಅಗತ್ಯ ಸೇವೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net