ಒಂದಲ್ಲ, ಎರಡಲ್ಲ ಇವನ ಮೇಲಿರೋದು ಹತ್ತಾರು ಕ್ರಿಮಿನಲ್ ಕೇಸ್!...ಖಾಕಿ ಬಲೆಗೆ ಬಿದ್ದ ಟಿಎಂಸಿ ನಾಯಕನ ಮೆರವಣಿಗೆಯ ವಿಡಿಯೋ ವೈರಲ್ | Bakul Sheikh

Bakul Sheikh | ಕಾಲಿಯಾಚಕ್ ರೌಡಿ ಬಕುಲ್ ಶೇಖ್ ಅರೆಸ್ಟ್
Bakul Sheikh | ಕಾಲಿಯಾಚಕ್ ರೌಡಿ ಬಕುಲ್ ಶೇಖ್ ಅರೆಸ್ಟ್
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕಾಲಿಯಾಚಕ್‌ನಲ್ಲಿ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಅಂಚಲ್ ಅಧ್ಯಕ್ಷ ಹಾಗೂ ಸರಣಿ ಅಪರಾಧಗಳ ಆರೋಪ ಹೊತ್ತಿರುವ ಕುಖ್ಯಾತ ರೌಡಿ ಬಕುಲ್ ಶೇಖ್‌ನನ್ನು (Bakul Sheikh) ಬಂಧಿಸಿರುವ ಪೊಲೀಸರು, ಆತನಿಗೆ ಹಗ್ಗ ಕಟ್ಟಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ್ದಾರೆ.
ಬಕುಲ್ ಶೇಖ್ ವಿರುದ್ಧ ಕೊಲೆ, ದರೋಡೆ, ಸುಲಿಗೆ ಮತ್ತು ಅಪಹರಣ ಸೇರಿದಂತೆ ಹತ್ತಾರು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈತನ ದೌರ್ಜನ್ಯ ಮತ್ತು ರೌಡಿಸಂನಿಂದಾಗಿ ಇಡೀ ಕಾಲಿಯಾಚಕ್ ಭಾಗದ ಜನತೆ ವರ್ಷಗಳಿಂದ ಭಯದ ನೆರಳಿನಲ್ಲೇ ಬದುಕುತ್ತಿದ್ದರು. ಇವನ ಅಟ್ಟಹಾಸಕ್ಕೆ ಹೆದರಿ ಹಲವು ಕುಟುಂಬಗಳು ಈ ಪ್ರದೇಶವನ್ನೇ ತೊರೆದಿದ್ದವು ಎನ್ನಲಾಗಿದೆ. ರಾಜಕೀಯ ಪ್ರಭಾವದ ಹಿನ್ನೆಲೆಯಲ್ಲಿ ಈತನ ವಿರುದ್ಧ ಧ್ವನಿ ಎತ್ತಲು ಸ್ಥಳೀಯರು ಧೈರ್ಯ ಮಾಡುತ್ತಿರಲಿಲ್ಲ ಎಂದು ಪೊಲೀಸ್ ಮತ್ತು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.

ನಡುರಸ್ತೆಯಲ್ಲಿ ಕೈಮುಗಿದು ನಡೆದ ಕುಖ್ಯಾತ ರೌಡಿ!

ಬಕುಲ್ ಶೇಖ್‌ನನ್ನು ಬಂಧಿಸಿದ ಪೊಲೀಸರು ಭಾರಿ ಭದ್ರತೆಯೊಂದಿಗೆ ಆತನ ಸಾರ್ವಜನಿಕ ಮೆರವಣಿಗೆ ನಡೆಸಿದರು. ಸೊಂಟಕ್ಕೆ ಹಗ್ಗ ಕಟ್ಟಿಸಿಕೊಂಡಿದ್ದ ಆರೋಪಿ ಬಕುಲ್ ಶೇಖ್​ ರಸ್ತೆಯಲ್ಲಿ ಕೈಮುಗಿದುಕೊಂಡು ನಡೆಯುತ್ತಿರುವ ದೃಶ್ಯ ವೈರಲ್ ಆಗಿದೆ. ಶಸ್ತ್ರಸಜ್ಜಿತ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ಕಾವಲಿನಲ್ಲಿ ಆತನನ್ನು ಕರೆದೊಯ್ಯುವಾಗ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಜನ ನೆರೆದು ಅವನ ದುಸ್ಥಿತಿಯನ್ನು ವೀಕ್ಷಿಸಿದರು. ಪಶ್ಚಿಮ ಬಂಗಾಳದಲ್ಲಿ ಇತ್ತೀಚಿನ ದಿನಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳು ಮತ್ತು ರೌಡಿ ಗ್ಯಾಂಗ್‌ಗಳ ವಿರುದ್ಧ ಸ್ಥಳೀಯ ಜಿಲ್ಲಾಡಳಿತ ಹಾಗೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದರ ಭಾಗವಾಗಿಯೇ ಈ ಕಾರ್ಯಾಚರಣೆ ನಡೆದಿದೆ. ವರ್ಷಗಳಿಂದ ಭಯ ಹುಟ್ಟಿಸಿದ್ದ ರೌಡಿಯ ಬಂಧನ ಮತ್ತು ಪೊಲೀಸರ ಈ ಸಾರ್ವಜನಿಕ ಶಿಸ್ತು ಕ್ರಮದಿಂದಾಗಿ ಕಾಲಿಯಾಚಕ್ ಜನತೆ ನಿಟ್ಟುಸಿರು ಬಿಟ್ಟಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಹೈವೋಲ್ಟೇಜ್ ಕಾರ್ಯಾಚರಣೆಯ ಕುರಿತು ಮಾಲ್ಡಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅನುಪಮ್ ಸಿಂಗ್ ಅವರು ಸದ್ಯಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net