ನಗದು ಪತ್ತೆ ಪ್ರಕರಣದಲ್ಲಿ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ದೋಷಿ ಎಂದ ಸಂಸದೀಯ ಸಮಿತಿ ವರದಿ! Ex Judge Yashwant Varma

ನಗದು ಪತ್ತೆ ಪ್ರಕರಣದಲ್ಲಿ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ದೋಷಿ ಎಂದ ಸಂಸದೀಯ ಸಮಿತಿ ವರದಿ! Ex Judge Yashwant Varma
ನಗದು ಪತ್ತೆ ಪ್ರಕರಣದಲ್ಲಿ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ದೋಷಿ ಎಂದ ಸಂಸದೀಯ ಸಮಿತಿ ವರದಿ! Ex Judge Yashwant Varma
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯಲ್ಲಿರುವ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ನಿವಾಸದಲ್ಲಿ ನಗದು ಪತ್ತೆ ಪ್ರಕರಣ
  • ಹಣದ ಮೂಲ ಮತ್ತು ಮಾಲೀಕತ್ವ ವಿವರಿಸುವಲ್ಲಿ ಮಾಜಿ ನ್ಯಾಯಮೂರ್ತಿ ವರ್ಮಾ ವಿಫಲ
  • ನಗದು ಪತ್ತೆ ಪ್ರಕರಣದಲ್ಲಿ ಮಾಜಿ ನ್ಯಾಯಮೂರ್ತಿ ದೋಷಿ ಎಂದು ಸಮಿತಿ ವರದಿ
  • ಸ್ಟೋರ್ ರೂಮ್ ನಲ್ಲಿದ್ದ ಭೌತಿಕ ಸಾಕ್ಷ್ಯಗಳನ್ನು ಸಂರಕ್ಷಿಸುವಲ್ಲಿ ಅಧಿಕಾರಿಗಳ ವೈಫಲ್ಯ
  • ವಿವಾದದ ಬೆನ್ನಲ್ಲೇ ಮಾಜಿ ನ್ಯಾಯಮೂರ್ತಿ ವರ್ಮಾ ರಾಜೀನಾಮೆ ನೀಡಿರುವುದರಿಂದ ವಜಾ ಪ್ರಕ್ರಿಯೆಗೆ ಬ್ರೇಕ್
ನವದೆಹಲಿ: ದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ( Ex Judge Yashwant Varma ) ಅವರ ನಿವಾಸದಲ್ಲಿ ಪತ್ತೆಯಾದ ದೊಡ್ಡ ಪ್ರಮಾಣದ ನಗದು ವಿವಾದಕ್ಕೆ ಸಂಬಂಧಿಸಿದಂತೆ, ಆ ಹಣದ ಮೂಲವನ್ನು ವಿವರಿಸುವಲ್ಲಿ ವರ್ಮಾ ಅವರು ವಿಫಲರಾಗಿದ್ದಾರೆ ಎಂಬ ವರದಿ ಲೋಕಸಭೆಯಲ್ಲಿ ಮಂಡನೆಯಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ರಚಿಸಿದ್ದ ತನಿಖಾ ಸಮಿತಿಯು ಈ ಅಂಶವನ್ನು ಪತ್ತೆಹಚ್ಚಿ ವರದಿ ಸಲ್ಲಿಸಿದೆ.
2025, ಮಾರ್ಚ್ 14ರ ರಾತ್ರಿ ದೆಹಲಿ ಹೈಕೋರ್ಟ್​ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಬೆಂಕಿ ನಂದಿಸಲು ತೆರಳಿದ ಅಗ್ನಿಶಾಮಕ ಸಿಬ್ಬಂದಿಗೆ, ಹೊಸ ದೆಹಲಿಯ 30, ತುಘ್ಲಕ್ ಕ್ರೆಸೆಂಟ್‌ನಲ್ಲಿರುವ ಮನೆಯ ಸ್ಟೋರ್ ರೂಮ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಸುಟ್ಟುಹೋದ 500 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದವು.
ಈ ಸಂಬಂಧ ಸಂಸತ್ತಿನಲ್ಲಿ ಬುಧವಾರ ಮಂಡಿಸಲಾದ ತನಿಖಾ ಸಮಿತಿಯ ವರದಿ ವಿವರಗಳನ್ನು ಎನ್‌ಡಿಟಿವಿ ವರದಿ ಮಾಡಿದ್ದು, ಸಮಿತಿಯು ಮಾಜಿ ನ್ಯಾಯಮೂರ್ತಿಯನ್ನು ನಗದು ಪತ್ತೆ ಪ್ರಕರಣದಲ್ಲಿ ದೋಷಿ ಎಂದು ಕಂಡುಕೊಂಡಿದೆ. ಸ್ಟೋರ್ ರೂಮ್‌ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ನಗದು ಹಣದ ಹೇಗೆ ಬಂತು, ಅದರ ಮೂಲ ಮತ್ತು ಮಾಲೀಕತ್ವದ ಕುರಿತು ನ್ಯಾಯಾಮೂರ್ತಿಗಳು ಯಾವುದೇ ತೃಪ್ತಿಕರ ಸ್ಪಷ್ಟನೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ನಗದು ಪತ್ತೆಯಾದ ಬಳಿಕ ನಡೆದ ತನಿಖೆಯ ಮೇಲೂ ಸಂಸದೀಯ ಸಮಿತಿ ತೀವ್ರ ಪ್ರಶ್ನೆಗಳನ್ನು ಎತ್ತಿದೆ. ಕಾನೂನುಬದ್ಧವಾಗಿ ಸೀಲ್ ಮಾಡುವ ಮತ್ತು ಪರಿಶೀಲನೆ ನಡೆಸುವ ಮುನ್ನವೇ ಸ್ಟೋರ್ ರೂಮ್‌ನ ಸಾಕ್ಷ್ಯಗಳ ಸ್ಥಿತಿಯನ್ನು ಹಾಳುಮಾಡಲಾಗಿದ್ದು, ಭೌತಿಕ ಸಾಕ್ಷ್ಯಗಳನ್ನು ಸರಿಯಾಗಿ ಭದ್ರಪಡಿಸಿಲ್ಲ ಅಥವಾ ಸಂರಕ್ಷಿಸಿಲ್ಲ ಎಂದು ವರದಿ ಗಂಭೀರವಾಗಿ ಆಕ್ಷೇಪಿಸಿದೆ. ಅಲ್ಲದೆ, ನಂತರದ ದಿನಗಳಲ್ಲಿ ಆ ನೋಟುಗಳು ನಾಪತ್ತೆಯಾಗಿರುವುದು ಅಥವಾ ಲಭ್ಯವಿಲ್ಲದಿರುವುದು ಅಸ್ಪಷ್ಟವಾಗಿ ಉಳಿದಿದೆ ಎಂದು ಸಂಸದೀಯ ಸಮಿತಿ ತಿಳಿಸಿದೆ. ಆವರಣದಲ್ಲಿದ್ದ ಸಿಬ್ಬಂದಿ ಸ್ಟೋರ್ ರೂಮ್ ಅನ್ನು ಅಸ್ತವ್ಯಸ್ತಗೊಳಿಸಲು ಅವಕಾಶ ನೀಡಿದ್ದು ಮತ್ತು ಸಾಕ್ಷ್ಯಗಳನ್ನು ಸಂರಕ್ಷಿಸುವಲ್ಲಿ ವಿಫಲವಾಗಿರುವುದೇ ಪ್ರಮುಖ ಭೌತಿಕ ಸಾಕ್ಷ್ಯಗಳ ನಷ್ಟಕ್ಕೆ ಕಾರಣ ಎಂದು ವರದಿ ದೂರಿದೆ.
ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ವೈಯಕ್ತಿಕವಾಗಿ ಆ ಹಣವನ್ನು ತೆಗೆದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಸಮಿತಿಯು ಗಮನಿಸಿದೆ. ಆದರೆ, 2025, ಮಾರ್ಚ್ 22ರಂದು ನೀಡಿದ ಉತ್ತರದ ಸೇರಿದಂತೆ, ನಗದು ಪತ್ತೆಯಾದ ಕುರಿತು ಅವರು ನೀಡಿದ ಸ್ಪಷ್ಟನೆಯು ತೃಪ್ತಿಕರವಾಗಿಲ್ಲ ಎಂದು ಸಮಿತಿಯು ಹೇಳಿದೆ. ವರ್ಮಾ ಅವರ ಪ್ರತಿಕ್ರಿಯೆಯಲ್ಲಿ ಮುಕ್ತತೆ, ಪಾರದರ್ಶಕತೆ ಮತ್ತು ಸಾಂಸ್ಥಿಕ ಜವಾಬ್ದಾರಿಯ ಕೊರತೆಯಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ತನಿಖೆಯ ವರದಿಯು ಎರಡು ಸಂಪುಟಗಳನ್ನು ಹೊಂದಿದ್ದು, ಇದರೊಂದಿಗೆ ತನಿಖೆಯ ಸಮಯದಲ್ಲಿ ದಾಖಲಿಸಲಾದ ಮೌಖಿಕ ಮತ್ತು ದಸ್ತಾವೇಜಿನ ಸಾಕ್ಷ್ಯಗಳನ್ನು ಒಳಗೊಂಡಿದೆ. ಇದಕ್ಕೂ ಮೊದಲು, ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಚಿಸಿದ್ದ ಆಂತರಿಕ ಸಮಿತಿಯು, ನಗದು ಅಡಗಿಸಿಟ್ಟಿದ್ದ ನಿರ್ದಿಷ್ಟ ಸ್ಟೋರ್ ರೂಮ್ ಮೇಲೆ ನ್ಯಾಯಮೂರ್ತಿ ವರ್ಮಾ ಅವರು "ಸಕ್ರಿಯ ನಿಯಂತ್ರಣ" ಹೊಂದಿದ್ದಾರೆ ಎಂದು ತೀರ್ಮಾನಿಸಿತ್ತು.
ಈ ವಿವಾದದ ಬಳಿಕ ದೆಹಲಿ ಹೈಕೋರ್ಟ್‌ನಲ್ಲಿದ್ದ ನ್ಯಾಯಮೂರ್ತಿ ವರ್ಮಾ ಅವರನ್ನು ಅವರ ಮೂಲ ಹೈಕೋರ್ಟ್ ಆದ ಅಲಹಾಬಾದ್ ಹೈಕೋರ್ಟ್‌ಗೆ ಮಕರಳಿಸಲಾಯಿತು. ಈ ಪ್ರಕರಣವು ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂದ ಬಳಿಕ ಸಂಸತ್ತು ಅವರ ವಿರುದ್ಧ ವಜಾಗೊಳಿಸುವ (ಮಹಾದೋಷ) ಪ್ರಕ್ರಿಯೆಯನ್ನು ಆರಂಭಿಸಿತ್ತು. ಆದರೆ, ನ್ಯಾಯಮೂರ್ತಿ ವರ್ಮಾ ಅವರು ರಾಜೀನಾಮೆ ನೀಡಿರುವುದರಿಂದ, ಅವರ ವಿರುದ್ಧದ ವಜಾಗೊಳಿಸುವ ಪ್ರಕ್ರಿಯೆಯು ನಡೆಯಲಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net