ಖಮೇನಿ ಯುಗಾಂತ್ಯ: ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಆಯ್ಕೆ | Alireza Arafi

ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಆಯ್ಕೆ
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಆಯ್ಕೆ
Published on
ಟೆಹ್ರಾನ್: ಇರಾನ್‌ನ ಇತಿಹಾಸದಲ್ಲೇ ಅತ್ಯಂತ ಭೀಕರ ಕ್ರಾಂತಿ ಮತ್ತು ಬದಲಾವಣೆಯ ಗಾಳಿ ಬೀಸುತ್ತಿದೆ. ಅಮೇರಿಕಾ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಇರಾನ್ ತನ್ನ ತಾತ್ಕಾಲಿಕ ಸರ್ವೋಚ್ಚ ನಾಯಕನನ್ನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ (Alireza Arafi) ಅವರನ್ನು ಘೋಷಿಸಿದೆ ಎಂದು ಇರಾನ್‌ನ ಇಸ್ನಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯಾರು ಈ ಅಲಿರೆಜಾ ಅರಾಫಿ?

ಇರಾನ್‌ನ ಧಾರ್ಮಿಕ ಮತ್ತು ರಾಜಕೀಯ ವಲಯದಲ್ಲಿ ಅರಾಫಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು. ಇವರು ಗಾರ್ಡಿಯನ್ ಕೌನ್ಸಿಲ್‌ನ ಹಿರಿಯ ಸದಸ್ಯರಾಗಿದ್ದು, ಈಗ ರಚನೆಯಾಗಿರುವ ತಾತ್ಕಾಲಿಕ ನಾಯಕತ್ವ ಮಂಡಳಿಯ ಪ್ರಮುಖ ನ್ಯಾಯಶಾಸ್ತ್ರಜ್ಞ ಆಗಿ ಆಯ್ಕೆಯಾಗಿದ್ದಾರೆ.
ಸಂವಿಧಾನದ ಪ್ರಕಾರ, ಹೊಸ ನಾಯಕನ ಆಯ್ಕೆಯಾಗುವವರೆಗೆ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಮೊಹ್ಸೆನಿ-ಎಜೆಇ ಅವರೊಂದಿಗೆ ಸೇರಿ ಅರಾಫಿ ದೇಶವನ್ನು ಮುನ್ನಡೆಸಲಿದ್ದಾರೆ.
ಅರಾಫಿ ಅವರು ಖಮೇನಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕಠಿಣ ನಿಲುವಿನ ಧರ್ಮಗುರು ಎಂದು ಹೆಸರುವಾಸಿಯಾಗಿದ್ದಾರೆ.

IRGC ಹೊಸ ಮುಖ್ಯಸ್ಥರಾಗಿ ಅಹ್ಮದ್ ವಾಹಿದಿ

ಮಿಲಿಟರಿ ರಂಗದಲ್ಲೂ ಇರಾನ್ ದೊಡ್ಡ ಬದಲಾವಣೆ ಮಾಡಿದೆ. ಶನಿವಾರದ ದಾಳಿಯಲ್ಲಿ ಐಆರ್‌ಜಿಸಿ ಮುಖ್ಯಸ್ಥ ಜನರಲ್ ಮೊಹಮ್ಮದ್ ಪಾಕ್‌ಪೋರ್ ಹತ್ಯೆಯಾದ ಕಾರಣ, ಅವರ ಸ್ಥಾನಕ್ಕೆ ಅಹ್ಮದ್ ವಾಹಿದಿ ಅವರನ್ನು ನೇಮಿಸಲಾಗಿದೆ. ಇರಾನ್‌ನ ಅತ್ಯಂತ ಶಕ್ತಿಶಾಲಿ ಸೇನಾ ಘಟಕವಾದ ರೆವಲ್ಯೂಷನರಿ ಗಾರ್ಡ್ಸ್ ಅನ್ನು ಮುನ್ನಡೆಸುವ ಜವಾಬ್ದಾರಿ ಈಗ ವಾಹಿದಿ ಹೆಗಲ ಮೇಲಿದೆ.

ಟ್ರಂಪ್ ಮತ್ತು ನೆತನ್ಯಾಹು ಹರ್ಷ: ಇತಿಹಾಸದ ಕ್ರೂರಿಯ ಅಂತ್ಯ

ಖಮೇನಿ ಸಾವು ಖಚಿತವಾಗುತ್ತಿದ್ದಂತೆ ವಿಶ್ವನಾಯಕರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ Xನಲ್ಲಿ ಪೋಸ್ಟ್​ ಮಾಡಿರುವ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇತಿಹಾಸದ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬನಾದ ಖಮೇನಿ ಈಗ ಇಲ್ಲ. ಇದು ಇರಾನ್ ಜನರಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸಂದ ನ್ಯಾಯ. ಖಮೇನಿ ಮತ್ತು ಆತನ ರಕ್ತಪಿಪಾಸು ಗ್ಯಾಂಗ್‌ನಿಂದ ಹತರಾದ ಅಮಾಯಕರಿಗೆ ಸಂದ ಗೌರವ ಇದು ಎಂದು ಟ್ರಂಪ್ ಗುಡುಗಿದ್ದಾರೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಕೂಡ ಈ ಕಾರ್ಯಾಚರಣೆಯನ್ನು ಐತಿಹಾಸಿಕ ಜಯ ಎಂದು ಬಣ್ಣಿಸಿದ್ದಾರೆ. ಅಂದಹಾಗೆ, ಈ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಅವರ ಕಚೇರಿಗಳನ್ನೂ ಗುರಿಯಾಗಿಸಲಾಗಿತ್ತು.

ಇರಾನ್‌ನಲ್ಲಿ 40 ದಿನಗಳ ಶೋಕಾಚರಣೆ

ಆರಂಭದಲ್ಲಿ ಖಮೇನಿ ಸಾವಿನ ಸುದ್ದಿಯನ್ನು ನಿರಾಕರಿಸಿದ್ದ ಇರಾನ್ ಸರ್ಕಾರ, ಭಾನುವಾರ ಬೆಳಿಗ್ಗೆ ಅಧಿಕೃತವಾಗಿ ಘೋಷಿಸಿದೆ. ದೇಶಾದ್ಯಂತ 40 ದಿನಗಳ ಕಾಲ ಶೋಕಾಚರಣೆ ಇರಲಿದ್ದು, ಇರಾನ್ ತನ್ನ ಶತ್ರುಗಳ ಮೇಲೆ ನರಕದ ಬಾಗಿಲು ತೆರೆಯುವುದಾಗಿ ಪ್ರತಿಜ್ಞೆ ಮಾಡಿದೆ.

ಜಾಗತಿಕ ಪರಿಣಾಮ ಮತ್ತು ಆತಂಕ

ಒಂದು ಕಡೆ ಇರಾನ್‌ನ ಪ್ರಬಲ ನಾಯಕತ್ವದ ಪತನ, ಇನ್ನೊಂದು ಕಡೆ ಅಮೇರಿಕ-ಇಸ್ರೇಲ್‌ನ ಆಕ್ರಮಣಕಾರಿ ನಿಲುವು ಇಡೀ ಜಗತ್ತನ್ನು ಮೂರನೇ ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ. ತೈಲ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿದ್ದು, ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net